22 ವರ್ಷದಿಂದ ಕಷ್ಟಪಟ್ಟು ಕಟ್ಟಿಕೊಂಡ ವ್ಯಕ್ತಿತ್ವ. ಹೆಸರು, ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ನ್ಯಾಯಾಲಯದಲ್ಲಿಯೇ ಹೇಳಿರುವ ಸುದೀಪ್ (KIchcha Sudeep) ಅವರ ವಿವಾದದ ತೀರ್ಪು ಇಂದು ಬರಲಿದೆ. ಕಿಚ್ಚ ಸುದೀಪ್ ಅವರ ವಿರುದ್ಧ ನಿರ್ಮಾಪಕರಾದ ಎಂ.ಎನ್.ಕುಮಾರ್ (MN Kumar) ಮತ್ತು ಎನ್.ಎಂ.ಸುರೇಶ್ (NM Suresh) ಹೇಳಿಕೆ ನೀಡಿದ್ದು ಚಿತ್ರರಂಗದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಫಿಲ್ಮ್ ಚೇಂಬರ್ ಒಂದು ಕಡೆ, ರವಿಚಂದ್ರನ್ (Ravichandran) ಮತ್ತೊಂದು ಕಡೆ ಪ್ರಯತ್ನ ಪಟ್ಟರಾದರೂ, ವಿವಾದ ಬಗೆಹರಿದಿರಲಿಲ್ಲ. ರವಿಚಂದ್ರನ್ ಎಂಟ್ರಿಯಾದಾಗ, ಒಂದೆರಡು ದಿನ ಹೇಳಿಕೆಗಳು ನಿಂತಾಗ ಸಮಸ್ಯೆ ಬಗೆಹರಿಯಿತು ಎಂದುಕೊಂಡವರೇ ಹೆಚ್ಚು. ಆದರೆ ವಿವಾದ ಬಗೆಹರಿದಂತೆ ಕಾಣುತ್ತಿಲ್ಲ. ರವಿಚಂದ್ರನ್ ಅವರ ಮನೆಯಲ್ಲಿಯೇ ಸುದೀಪ್ ಮತ್ತು ಕುಮಾರ್ ಅವರನ್ನು ಕರೆಸಿ ಮಾತನ್ನಾಡಿದ್ದರು. ಶಿವಣ್ಣ (Dr. Shiva Rajkumar) ಕೂಡಾ ಮಾತನಾಡಿದ್ದರಂತೆ. ಆದರೆ ಸುದೀಪ್ ಅಲ್ಲಿಯೂ ರಾಜಿಯಾಗಿಲ್ಲ.
ಮೂಲಗಳ ಪ್ರಕಾರ ಕುಮಾರ್ ಮತ್ತು ಸುರೇಶ್ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಹಾಗೂ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದೆವು ಎಂದು ಸುದೀಪ್ ಷರತ್ತು ಹಾಕಿದ್ದರಂತೆ. ಆದರೆ ಕ್ಷಮೆ ಕೇಳುವುದಿಲ್ಲ. ಬೇಕಾದರೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ನಿರ್ಮಾಪಕರು ಪಟ್ಟು ಹಿಡಿದರಂತೆ. ಆದರೆ ಇದೂ ಅಂತೆ ಕಂತೆ ಸುದ್ದಿಯಷ್ಟೆ. ರವಿಚಂದ್ರನ್ ಅವರಾಗಲೀ, ಸುದೀಪ್ ಅವರಾಗಲೀ, ಕುಮಾರ್ ಅಥವಾ ಸುರೇಶ್ ಆಗಲೀ.. ನಾಲ್ಕು ಗೋಡೆಗಳ ನಡುವಿನ ಮಾತುಕತೆಯ ವಿವರ ಕೊಟ್ಟಿಲ್ಲ.
ಕೋರ್ಟ್ ಮೆಟ್ಟಿಲೇರಿದ್ದ ಸುದೀಪ್ ಕೋರ್ಟ್ ಕಟಕಟೆಯಲ್ಲಿ ನಿಂತು ನಿರ್ಮಾಪಕರಾದ ಎಂ ಎನ್ ಕುಮಾರ್ ಹಾಗೂ ಎನ್ ಎಂ ಸುರೇಶ್ ವಿರುದ್ಧ ಹೇಳಿಕೆ ದಾಖಲಿಸಿದ್ದಾರೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಆಗಮಿಸಿದ್ದ ಸುದೀಪ್, ಪ್ರಾಮಾಣಿಕತೆಯ ಹೇಳಿಕೆ ದಾಖಲಿಸಿದ್ದಾರೆ. ಇದು ಮಾನನಷ್ಟ ಮೊಕದ್ದಮೆಗಳ ವಿಚಾರದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಸುದ್ದಿಗೋಷ್ಠಿ ವೇಳೆ ನಿರ್ಮಾಪಕ ಎಂ ಎನ್ ಕುಮಾರ್ ಮಾಡಿದ ಆರೋಪಗಳೆಲ್ಲಾ ಸುಳ್ಳು. ಆರ್ ಆರ್ ನಗರದಲ್ಲಿ ಮನೆ ಕಟ್ಟಲು ನಾನು ಹಣದ ನೆರವು ಪಡೆದಿಲ್ಲ. ಈ ಆರೋಪ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಆರೋಪ ಮಾಡಿದ್ದಾರೆ. ಇದೂ ಕೂಡ ಸುಳ್ಳು. ನಿರ್ಮಾಪಕ ಎಂ ಎನ್ ಕುಮಾರ್ ಹೇಳಿಕೆಯನ್ನು ಮತ್ತೋರ್ವ ನಿರ್ಮಾಪಕ ಎಂ ಎನ್ ಸುರೇಶ್ ಬೆಂಬಲಿಸಿದ್ದಾರೆ. ಈ ಇಬ್ಬರು ನಿರ್ಮಾಪಕರ ಸುದ್ದಿಗೋಷ್ಠಿಯಿಂದ ನನ್ನ ಮಾನಹಾನಿಯಾಗಿದೆ. ಈ ಬಗ್ಗೆ ಹಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದು ವಿವರಣೆ ಕೊಟ್ಟಿರುವ ಸುದೀಪ್, ಯಾರದ್ದಾದರೂ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಕೇಸ್ ವಾಪಸ್ ತೆಗೆದುಕೊಳ್ಳುವ ವಿಚಾರವೇ ಇಲ್ಲ. ಪ್ರಕರಣ ಕುರಿತಾದ ಆರೋಪಗಳಿಗೆ ಸಾಕ್ಷ್ಯ ಇಲ್ಲ. ಆದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಹಣ ಕೊಟ್ಟಿರೋದು ದಾಖಲೆ ಇದ್ದರೆ ಕೊಡಲಿ ಅಂತಾ ಸುದೀಪ್ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾರೆ. ಸುದೀಪ್ ಹೇಳಿಕೆ ಆಲಿಸಿದ ನ್ಯಾಯಾಧೀಶರು ಇಂದು ತೀರ್ಪು ನೀಡುವ ಸಾಧ್ಯತೆ ಇದೆ.
ಇನ್ನು, ಸುದೀಪ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ನ್ಯಾ., ನಿರ್ಮಾಪಕರು ಕ್ಷಮೆ ಕೇಳಿದರೆ ಕ್ಷಮಿಸುತ್ತೀರಾ ಎಂದು ಪ್ರಶ್ನಿಸಿದ್ದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿರ್ಮಾಪಕ ಕುಮಾರ್ ಅವರ ವಿರುದ್ಧ ಸೆಕ್ಷನ್ 310ರ ಅಡಿ ಪ್ರಕರಣ ದಾಖಲು ಮಾಡಿದ್ದ ಸುದೀಪ್ ಅವರು, ಕೆಲ ದಿನಗಳ ಹಿಂದೆ ನೋಟಿಸ್ ಜಾರಿ ಮಾಡಿದ್ದರು. ಈ ವೇಳೆ ಬಹಿರಂಗ ಕ್ಷಮೆ ಕೋರಿ, 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ನಲ್ಲಿ ತಿಳಿಸಿದ್ದರು. ಆದರೆ ಈ ನೋಟಿಸ್ಗೆ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇಷ್ಟಕ್ಕೂ ಇಂದು ಬರುವ ತೀರ್ಪು ಕುಮಾರ್ ಅಥವಾ ಸುರೇಶ್ ಅವರು ದಾಖಲೆ ಇಲ್ಲದೇ ಆರೋಪ ಮಾಡಿದ್ದಾರೆಯೋ.. ಇಲ್ಲವೋ.. ಎಂಬ ಬಗ್ಗೆ ಅಲ್ಲ. ಸುದೀಪ್ ಕೊಟ್ಟಿರುವ ಮನವಿಯನ್ನು ಪರಿಶೀಲಿಸಿ, ಮೊಕದ್ದಮೆ ದಾಖಲಿಸಿ ವಿಚಾರಣೆ ಆರಂಭಿಸಬೇಕೋ ಬೇಡವೋ.. ಎಂಬ ಬಗ್ಗೆ. ಇದಾದ ನಂತರವೇ ನಿರ್ಮಾಪಕರು ಮತ್ತು ಸುದೀಪ್ ನಡುವೆ ಇರುವ ದಾಖಲೆಗಳ ಪರಿಶೀಲನೆ, ವಿಚಾರಣೆ ಶುರುವಾಗಲಿದೆ.



