ಬೆಂಗಳೂರು ರೇವ್ ಪಾರ್ಟಿ ಈಗ ಬೆಂಗಳೂರು ಕ್ರೈಂ ಬ್ರಾಂಚ್ʻನಲ್ಲಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ಸಂಚಲನ ಮೂಡಿಸಿದೆ. ತೆಲುಗು ಇಂಡಸ್ಟ್ರಿಗೂ, ಡ್ರಗ್ಸ್ ಮಾಫಿಯಾಗೂ ಹಿಂದಿನಿಂದಲೂ ನಂಟು ಇದೆ. ಈ ಹಿಂದೆ ಹಲವು ಸ್ಟಾರ್ ನಟ ನಟಿಯರು ಡ್ರಗ್ಸ್ ತೆಗೆದುಕೊಳ್ಳುವಾಗ.. ಮಾರುವಾಗ ಸಿಕ್ಕಿಬಿದ್ದಿದ್ದಾರೆ. ಹೈದರಾಬಾದ್ ಸೇರಿದಂತೆ ಆಂಧ್ರ, ತೆಲಂಗಾಣದ ಪ್ರಮುಖ ಸಿಟಿಗಳಲ್ಲಿ ಹಾಗೂ ಸಿಟಿಯ ಹೊರಗೆ ನಡೆಯುತ್ತಿದ್ದ ರೇವ್ ಪಾರ್ಟಿಗಳು ಬೆಂಗಳೂರಿಗೂ ಶಿಫ್ಟ್ ಆಗಿವೆ.
ಕಾರಣ ಬೇರೇನಲ್ಲ. ಹೈದರಾಬಾದ್ʻನಿಂದ ಬೆಂಗಳೂರಿಗೆ ವಿಮಾನದಲ್ಲಿ ಕೆಲವೇ ಗಂಟೆಗಳ ಪ್ರಯಾಣ. ಕಾರಿನಲ್ಲಿ ಬಂದರೂ ಅರ್ಧ ದಿನದಲ್ಲಿ ರೀಚ್ ಆಗಬಹುದು. ಅಂಥಾದ್ದೊಂದು ರೇವ್ ಪಾರ್ಟಿ ಮೇಲೆ ರೇಡ್ ಆಗಿ.. 101 ಜನರನ್ನು ವಶಕ್ಕೆ ಪಡೆದುಕೊಂಡಿದ್ಧಾರೆ ಬೆಂಗಳೂರು ಪೊಲೀಸರು.
ಆದರೆ.. ಆ 101 ಜನರಲ್ಲಿ ಪೊಲೀಸರು ಹೊರಗೆ ಬಿಟ್ಟಿರುವ ಏಕೈಕ ಹೆಸರು ನಟಿ ಹೇಮಾ ಅವರದ್ದು ಮಾತ್ರ. ಉಳಿದವರು ಉದ್ಯಮಿಗಳಂತೆ, ಸೀರಿಯಲ್ ನಟ ನಟಿಯರಂತೆ, ಮಾಡೆಲ್ಲುಗಳಂತೆ. ರಾಜಕಾರಣಿಗಳ ಮಕ್ಕಳಂತೆ.. ವಿಚಿತ್ರವೇನು ಗೊತ್ತೇ.. ಯಾರೊಬ್ಬರ ಹೆಸರನ್ನೂ ಪೊಲೀಸರು ಅಧಿಕೃತವಾಗಿ ಹೊರಗೆ ಬಿಟ್ಟಿಲ್ಲ. ಒಬ್ಬ ನಟಿಯ ಹೊರತಾಗಿ.
ಆ ನಟಿಯ ಹೆಸರು ಹೇಮಾ. ಸುಮಾರು 250+ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಒಂದೇ ಓಂದು ಸಿನಿಮಾದಲ್ಲಿ ನಟಿಸಿದ್ಧಾರೆ. ಪುನೀತ್ ರಾಜಕುಮಾರ್ ಅಭಿನಯದ ಪವರ್ ಚಿತ್ರದಲ್ಲಿ. ನಾಯಕಿ ತ್ರಿಷಾ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ಧಾರೆ. ಮೂಲ ಹೆಸರು ಕೃಷ್ಣವೇಣಿ. 1989ರಿಂದಲೂ ಚಿತ್ರರಂಗದಲ್ಲಿದ್ದಾರೆ.
ಬೆಂಗಳೂರು ರೇವ್ ಪಾರ್ಟಿ ಮೇಲೆ ನಡೆದ ಪೊಲೀಸ್ ರೇಡ್ʻನಲ್ಲಿ ಹೇಮಾ ಅವರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಬ್ಲಡ್ ಟೆಸ್ಟ್ ಕೂಡಾ ಮಾಡಿಸಿದ್ದಾರೆ. ಹೇಮಾ ಅವರು ಈ ಮೊದಲು ಹೆಸರು ಕೇಳಿ ಬಂದಾಗ.. ತಾವು ಅಲ್ಲಿ ಇಲ್ಲ ಎಂದು ವಿಡಿಯೋ ಮಾಡಿದ್ದರಾದರೂ.. ಪೊಲೀಸರು ಹೇಮಾ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಂದಹಾಗೆ ಹೇಮಾ ಆ ವಿಡಿಯೋ ಮಾಡಿದ್ದುದು ರೇಡ್ ನಡೆದ ಅದೇ ರೆಸಾರ್ಟಿನಲ್ಲಿ.
ವಿಶೇಷ ಹಾಗೂ ವಿಚಿತ್ರವೆಂದರೆ.. ಹೊರಬಂದಿರುವುದು ಕೇವಲ ಹೇಮಾ ಹೆಸರು. ಉಳಿದ 100 ಜನರ ಹೆಸರನ್ನು ಪೊಲೀಸರು ಸೀಕ್ರೆಟ್ ಆಗಿಯೇ ಇಟ್ಟಿದ್ಧಾರೆ. ಆ 100 ಜನರಲ್ಲಿ 71 ಯುವಕರು ಮತ್ತು 30 ಯುವತಿಯರು. ಜಿ.ಆರ್. ಫಾರ್ಮ್ ಹೌಸ್ನಲ್ಲಿ ನಡೆದ ಆ ಪಾರ್ಟಿಯಲ್ಲಿ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಐವರು ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪಾರ್ಟಿಗೆ ತಂದಿದ್ದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೈನ್, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್, 2 ವಾಹನಗಳನ್ನು ಸೀಜ್ ಮಾಡಲಾಗಿದೆ. ‘ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಎಂದು ಪಾರ್ಟಿ ಆಯೋಜಿಸಲಾಗಿತ್ತು. ಅರೆಸ್ಟ್ ಆದ ಐವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಸಿಸಿಬಿ ಪೊಲೀಸರು ಬಿಟ್ಟು ಕಳಿಸಿದ್ದಾರೆ.
ಇಷ್ಟಕ್ಕೂ ರೇವ್ ಪಾರ್ಟಿ ಎಂದರೆ.. ಭಾರತದಲ್ಲಿ ಕಾನೂನು ಪ್ರಕಾರ ತಪ್ಪೇನಲ್ಲ. ಲೈಟ್ ಹಾಕಿಕೊಂಡು, ಡಿಜೆ ಮ್ಯೂಸಿಕ್ ಹಾಕಿಕೊಂಡು ಕುಣಿಯುವುದರಲ್ಲಿ ತಪ್ಪೇನೂ ಇಲ್ಲ. ಆದರೆ.. ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಮತ್ತು ಓಪನ್ ಸೆಕ್ಸ್ ಕೂಡಾ ನಡೆಯುತ್ತದೆ. ಅಂತಹ ರೇವ್ ಪಾರ್ಟಿ ಕಾನೂನು ಬಾಹಿರ. ರೇಡ್ ಆದಾಗ ಕೆಲವರು ಸಾಕ್ಷ್ಯ ನಾಶ ಮಾಡುವ ಸಲುವಾಗಿ ತಮ್ಮ ತಮ್ಮ ಬಳಿ ಇದ್ದ ಡ್ರಗ್ಸ್ʻನ್ನು ಟಾಯ್ಲೆಟ್ʻನಲ್ಲಿ ಫ್ಲಷ್ ಮಾಡಿದ್ದಾರೆ ಎಂಬ ಸುದ್ದಿ ಇದೆ. ಆದರೆ.. 101 ಜನರಿದ್ಧಾರೆ ಎಂಬ ಸುದ್ದಿಯಲ್ಲಿ ಕೇವಲ ಹೇಮಾ ಹೆಸರಷ್ಟೇ ಏಕೆ..? ಉಳಿದವರು ಅದೇನು ಪುಣ್ಯ ಮಾಡಿದ್ದರು..?



