ರೇಷನ್ ಕಾರ್ಡುದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮನೆ ಮನೆಗೆ ರೇಷನ್ ವಿತರಣೆ ಮಾಡಲು ಮುಂದಾಗಿದೆ. ಅರ್ಥಾತ್ ಕುಟುಂಬಕ್ಕೆ ಬೇಕಾದ ರೇಷನ್ನ್ನು ನೇರವಾಗಿ ಮನೆಗೇ ತಲುಪಿಸುವ ವ್ಯವಸ್ಥೆ ಅನ್ವಯಿಸಿಕೊಳ್ಳೋಕೆ ಮುಂದಾಗಿದೆ ರಾಜ್ಯ ಸರ್ಕಾರ. ಆಂಧ್ರ ಪ್ರದೇಶ ರಾಜ್ಯದಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸುವ ಬಗ್ಗೆ ಚಿಂತನೆ ಮಾಡಲಾಗಿದ್ದು, ಆಹಾಯ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಈ ವಿಷಯ ತಿಳಿಸಿದ್ದಾರೆ.
ಆದರೆ ಈ ಸೌಲಭ್ಯ ಎಲ್ಲರಿಗೂ ಅಲ್ಲ, ಆಯ್ದವರಿಗೆ ಮಾತ್ರ. ಪಡಿತರ ಚೀಟಿ ಹೊಂದಿರುವ ಹಿರಿಯ ನಾಗರಿಕರಿಗೆ (75 ವರ್ಷ ಮೇಲ್ಪಟ್ಟ) ಮನೆ ಬಾಗಲಿಗೆ ಆಹಾರ ಧಾನ್ಯಗಳನ್ನು ವಿತರಣೆ ಸಿದ್ಧತೆ ಮಾಡಿದ್ದಾರೆ.
ರೇಷನ್ನ್ನ್ನು 75 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಈವರೆಗೆ ಪಡಿತರ ಕಾರ್ಡ್ (ಬಿಪಿಎಲ್ ಮತ್ತು ಎಪಿಎಲ್) ಹೊಂದಿರುವ ಕುಟುಂಬದ ಒಬ್ಬ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೊಮೆಟ್ರಿಕ್ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಹಾಗೂ ಇತರೆ ಪಡಿತರ ಪಡೆಯುತ್ತಿದ್ದರು. ಆದರೆ, ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಮಸ್ಯೆ ಅನುಭವಿಸುತ್ತಿದ್ದರು. ಹೀಗಾಗಿ, ಮನೆಯಲ್ಲಿ ಒಬ್ಬಂಟಿ ವೃದ್ಧರಿದ್ದರೆ ಅವರ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಮನೆ ಬಾಗಿಲಿಗೆ ಪಡಿತರ ಪಡೆಯಲು ಸಂಬಂಧಪಟ್ಟಂತಹ ಕುಟುಂಬದಲ್ಲಿ 75 ವರ್ಷದೊಳಗಿನ ಸದಸ್ಯರು ಇರಬಾರದು. ಒಂದು ವೇಳೆ 75 ವರ್ಷದೊಳಗಿನ ಸದಸ್ಯರಿದ್ದಲ್ಲಿ ಅವರೇ ವಿತರಣಾ ಕೇಂದ್ರಗಳಿಗೆ ಬಂದು ಪಡಿತರ ಪಡೆಯಬೇಕು. ಹೀಗಾಗಿ, ಸರ್ಕಾರದಿಂದ ಪಡಿತರ ಚೀಟಿ ಹೊಂದಿದ ಒಂಟಿ ವೃದ್ಧರು, 75 ದಾಟಿದ ದಂಪತಿಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿದೆ. ಜೊತೆಗೆ, 75 ವರ್ಷದೊಳಗಿನ ಇತರೆ ಸದಸ್ಯರಿದ್ದರೂ ಅವರು ಕೆಲಸದ ನಿಮಿತ್ಯ ಬೇರೆ ಪ್ರದೇಶಗಳಿಗೆ ತೆರಳಿದ್ದರೆ, ಅಂತಹ ಸಮಯದಲ್ಲಿ ಊರಲ್ಲಿರುವ ವೃದ್ಧರ ಮನೆ ಬಾಗಿಲಿಗೇ ಪಡಿತರ ನೀಡಲು ಮುಂದಾಗಿದೆ.
ರಾಜ್ಯಕ್ಕೆ ಅಗತ್ಯವಿರುವ ಅಕ್ಕಿಯನ್ನು ಎಫ್‌ಸಿಐ ನಿಗದಿಪಡಿಸಿದ ದರದಲ್ಲಿ (ಪ್ರತಿ ಕೆ.ಜಿಗೆ 34) ಪೂರೈಸಲು ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ. ಈ ತಿಂಗಳಿಂದ ಅನ್ನ ಭಾಗ್ಯ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ 10 ಅಕ್ಕಿ ಪೂರೈಸಲು ನಿರ್ಧರಿಸಿರುವ ಇಲಾಖೆ, ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ.



