ನ್ಯಾಷನಲ್ ಕ್ರಷ್ ಎಂದೇ ಫೇಮಸ್ ಆಗಿರೋ ರಶ್ಮಿಕಾ ಮಂದಣ್ಣ ರಸ್ತೆಗಳನ್ನ ಹೊಗಳಿದರೆ.. ಅಭಿವೃದ್ಧಿಯನ್ನ ಹೊಗಳಿದರೆ.. ಭಾರತ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರೆ.. ಮೋದಿ ವಿರೋಧಿಗಳಿಗೆ ಸಿಟ್ಟು ಬರೋದಾದ್ರೂ ಯಾಕೆ…? ಮೋದಿ ಬೆಂಬಲಿಗರು ಖುಷಿಯಾಗೋದಾದ್ರೂ ಯಾಕೆ..?
ಯಾಕಂದ್ರೆ.. ಇದು ರಾಜಕೀಯದ ಸಮಯ. ಯಾರು ಏನು ಮಾತನಾಡಿದರೂ.. ವಿವಾದಗಳಾಗುವ ಕಾಲ. ಸೆಲಬ್ರಿಟಿಗಳ ಕಷ್ಟವನ್ನಂತೂ ಹೇಳುವುದು ಬೇಡ. ಪೂಜೆ ಮಾಡಿದರೆ, ಹಣೆಗೆ ಕುಂಕುಮ ಇಟ್ಟುಕೊಂಡರೆ, ದೇವಸ್ಥಾನಕ್ಕೆ ಹೋದರೆ.. ಒಂದು ಪಕ್ಷಕ್ಕೆ ಬ್ರಾಂಡ್ ಮಾಡುತ್ತಾರೆ. ದರ್ಗಾಗೆ ಹೋದರೆ, ಕೆಲವು ಘಟನೆಗಳ ಬಗ್ಗೆ ಮಾತ್ರ ರಿಯಾಕ್ಟ್ ಮಾಡುತ್ತಿದ್ದರೆ.. ಇನ್ನೊಂದು ಪಕ್ಷಕ್ಕೆ ಬ್ರಾಂಡ್ ಮಾಡುತ್ತಾರೆ. ಅಂತಹದ್ದೇ ಪರಿಸ್ಥಿತಿ ರಶ್ಮಿಕಾ ಮಂದಣ್ಣ ಅವರದ್ದು.
ಅಂದಹಾಗೆ ರಶ್ಮಿಕಾ ಮಂದಣ್ಣ ತಮ್ಮ ಸುದೀರ್ಘ ಸಂದರ್ಶನದಲ್ಲಿ ಒಂದೈದು ನಿಮಿಷಗಳಷ್ಟೇ ರಸ್ತೆ, ಪ್ರಗತಿ, ಅಭಿವೃದ್ಧಿ ಮೊದಲಾದ ವಿಷಯಗಳ ಬಗ್ಗೆ ಮಾತನಾಡ್ತಾರೆ. ಆದರೆ.. ಎಲ್ಲಿಯೂ ಅಪ್ಪಿ ತಪ್ಪಿ ಮೋದಿಯ ಹೆಸರು ಹೇಳೋದಿಲ್ಲ.
ರಶ್ಮಿಕಾ ಮಂದಣ್ಣ ಕನ್ನಡತಿಯಾದರೂ.. ಸ್ಟಾರ್ ಪಟ್ಟ ಗಿಟ್ಟಿಸಿದ್ದು ತೆಲುಗಿನಲ್ಲಿ. ಈಗ ಮುಂಬೈನಲ್ಲಿಯೂ ವಾಸ ಮಾಡುವಷ್ಟು ಬಾಲಿವುಡ್ ಆಫರ್ ಬಂದಿವೆ. ಹೀಗಾಗಿಯೇ ಮುಂಬೈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರಶ್ಮಿಕಾ ಮಂದಣ್ಣ ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಅಟಲ್ ಸೇತು (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ಬಗ್ಗೆ ಹಾಗೂ ಒಟ್ಟಾರೆ ದೇಶದ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ಧಾರೆ.
ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು, ಈಗ ಅದು 20 ನಿಮಿಷಗಳಿಗೆ ಇಳಿದಿದೆ. ಅಸಾಧ್ಯ ಎನಿಸುತ್ತಿದ್ದ ಈ ಪ್ರಾಜೆಕ್ಟ್ ಈಗ ಸಾಧ್ಯವಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾಗಿದೆ. . ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹಾಗೂ ಇನ್ನಿತರೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ. ಭಾರತದ ಕೈಲಿ ಇದು ಅಸಾಧ್ಯ ಎಂದು ಯಾರೂ ಈಗ ಹೇಳೋದಿಲ್ಲ. ಭಾರತದ ಪ್ರಗತಿಯ ವೇಗ ಹಾಗಿದೆ. ಈ ಅಟಲ್ ಸೇತು ಕೇವಲ ಏಳು ವರ್ಷಗಳಲ್ಲಿ ಮುಗಿದಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತದ ಯುವಕರು ಜಾಗರೂಕರಾಗಿರಬೇಕು, ಅತಿ ಹೆಚ್ಚು ಯುವಕರು ಇರುವ ಭಾರತ ವಿಶ್ವದ ಬುದ್ಧಿವಂತ ದೇಶ. ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶ ಸಾಧಿಸುತ್ತಿರುವ ಪ್ರಗತಿ ನಿಲ್ಲಬಾರದು, ಹಾಗಾಗಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಮೊದಲೇ ಎಲೆಕ್ಷನ್ ಟೈಮು. ಅಲ್ಲದೆ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಸ್ಟಾರ್ ಬೇರೆ. ಎಲೆಕ್ಷನ್ ಬಾಕಿ ಇರುವುದು ಹಿಂದಿ ಬೆಲ್ಟ್ ರಾಜ್ಯಗಳಲ್ಲಿ. ಇವೆಲ್ಲ ಸೇರಿ ರಶ್ಮಿಕಾ ಮಂದಣ್ಣ ಅವರನ್ನು ಮೋದಿ ಹಾಗೂ ಬಿಜೆಪಿಯವರ ಬ್ರಾಂಡ್ ಅಂಬಾಸಿಡರ್, ದುಡ್ಡು ಪಡೆದು ಮೋದಿಯನ್ನು ಹೊಗಳುತ್ತಿದ್ದಾರೆ ಎಂದೆಲ್ಲ ಟೀಕೆ ಮಾಡಿದ್ದರೆ, ಇನ್ನೂ ಕೆಲವರು ರಶ್ಮಿಕಾ ಮಂದಣ್ಣ ಸತ್ಯವನ್ನೇ ಹೇಳಿದ್ಧಾರೆ ಎಂದು ಬೆಂಬಲಿಸುತ್ತಿದ್ಧಾರೆ.
ಎಲ್ಲ ಸರಿ.. ರಶ್ಮಿಕಾ ಹೊಗಳಿದ್ದು ರಸ್ತೆಯನ್ನೇ ಹೊರತು.. ಮೋದಿಯನ್ನು ಅಲ್ಲ. ರಶ್ಮಿಕಾ ಅವರ ಅಷ್ಟುದ್ದ ಸಂದರ್ಶನದಲ್ಲಿ ಮೋದಿಯ ಹೆಸರೂ ಅಪ್ಪಿತಪ್ಪಿಯೂ ಪ್ರಸ್ತಾಪವಾಗೋದಿಲ್ಲ. ಆದರೂ.. ಏನೋಪ್ಪ..



