ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಶಾಸಕರೊಬ್ಬರು ಕಪ್ಪು ಚುಕ್ಕೆಯಾಗಿದ್ದಾರೆ. ತಪ್ಪು ಮಾಡಿದವರಿಗೆ ತನ್ನದೇ ಪಕ್ಷದವರಾಗಿದ್ದರೂ ಸರಿ, ಕಾನೂನು ಕ್ರಮದ ಬಿಸಿ ತೋರಿಸಿದ್ದ ಯೋಗಿ ಆದಿತ್ಯನಾಥ್ ಅವರ ಜೊತೆಯ ಶಾಸಕನೊಬ್ಬ ಬಾಲಕಿಯನ್ನು ರೇಪ್ ಮಾಡಿದ ಕೇಸಿನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ಧಾನೆ. ದುದ್ದಿ ಅನ್ನೋ ಕ್ಷೇತ್ರದ ಬಿಜೆಪಿ ಶಾಸಕ ರಾಮ್‌ದುಲಾರ್ ಗೊಂಡ್ 25 ವರ್ಷ ಜೈಲು ಶಿಕ್ಷೆ ಎದುರಿಸಲು ಸಿದ್ಧವಾಗಿರುವ ಅಪರಾಧಿ.
ಘಟನೆಯ ವಿವರ : 2014ರ ನವೆಂಬರ್ 4ರ ಸಂಜೆ ಬಾಲಕಿಯು ಮೂತ್ರ ವಿಸರ್ಜನೆಗಾಗಿ ಸಮೀಪದ ಹೊಲಕ್ಕೆ ಹೋಗಿದ್ದಾಗ ಆಕೆಗೆ ರಾಮ್‌ದುಲಾರ್ ಗೊಂಡ್ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದ. ಮನೆಗೆ ಹಿಂದಿರುಗಿದ ನಂತರ, ಹುಡುಗಿ ತನ್ನ ಅಣ್ಣನಿಗೆ ಈ ವಿಚಾರವನ್ನು ತಿಳಿಸಿದ್ದಳು. ಕಳೆದ ಒಂದು ವರ್ಷದಲ್ಲಿ ರಾಮ್‌ದುಲಾರ್ ಗೊಂಡ್ ತನಗೆ ಬೆದರಿಕೆ ಹಾಕುವ ಮೂಲಕ ಹಲವಾರು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ತನ್ನ ಸಹೋದರನಿಗೆ ತಿಳಿಸಿದ್ದಳು. ಬಾಲಕಿಯ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ರೇಪ್ ಆಗಿದ್ದು ಸಾಬೀತಾಗಿತ್ತು, ಆದರೆ ಘಟನೆ ನಡೆದಾಗ ಬಾಲಕಿ ಮೈನರ್ ಆಗಿರಲಿಲ್ಲ ಎಂದು ವಾದಿಸಲು ಹೊರಟಿದ್ದ ಶಾಸಕ, ಅದಕ್ಕಾಗಿ ಸುಳ್ಳು ದಾಖಲೆ ಸೃಷ್ಟಿಸಲು ಯತ್ನಿಸಿದ್ದ. ಕೇಸ್ ದಾಖಲಾದಾಗ ಶಾಸಕನ ಪತ್ನಿಯೇ ಊರಿನ ಪಂಚಾಯಿತಿಯ ಪ್ರಧಾನ್ ಆಗಿದ್ದಳು. ವಿಚಿತ್ರವೆಂದರೆ ಆಕೆಯೂ ಅತ್ಯಾಚಾರಿ ಆರೋಪಿ ಪರವೇ ನಿಂತಿದ್ದಳು ಎನ್ನಲಾಗಿದೆ. ಅತ್ಯಾಚಾರದ ನಂತರ, ಸಂತ್ರಸ್ತೆ ಗರ್ಭಿಣಿಯಾಗಿದ್ದಳು, ಒಂದು ವರ್ಷದ ನಂತರ ಅವಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಆದ ಮೇಲೆ ಡಿಎನ್ʻಎ ರಿಪೋರ್ಟ್ ಕೂಡಾ ಬಂದಿದ್ದು, ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ.
ಪೋಕ್ಸೋ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆಯನ್ನು ವಯಸ್ಕಳೆಂದು ತೋರಿಸಲು ಶಾಸಕ ಮತ್ತು ಆತನ ಕಡೆಯವರು ಹಲವಾರು ರೀತಿಯ ಸಂಚು ನಡೆಸಿದ್ದರು. ಸಂತ್ರಸ್ತೆಯ ನಕಲಿ ಶಾಲಾ ಪ್ರಮಾಣಪತ್ರವನ್ನು ಸಹ ಮಾಡಿ ಆಕೆಯ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿದ್ದರು. ವಿಚಾರಣೆಯ ಸಮಯದಲ್ಲಿ, ಸಂತ್ರಸ್ತೆ ತಾನು 1998ರಲ್ಲಿ ಜನಿಸಿದ ಹುಡುಗಿ ಎಂದು ಹೇಳಿದ್ದಾರೆ. ಆದರೆ, ಶಾಸಕ ಮಾತ್ರ ಆಕೆ 1994ರಲ್ಲಿ ಜನಿಸಿದ ಹುಡುಗಿ ಎನ್ನುವುದಕ್ಕೆ ಆಕೆಯ ಶಾಲೆಯ ದಾಖಲೆಯನ್ನು ಕೋರ್ಟ್‌ಗೆ ನೀಡಿದ್ದ. ಅದು ಸುಳ್ಳೆಂದು ಅಭಿಪ್ರಾಯಪಟ್ಟ ನ್ಯಾಯಾಲಯ ಶಾಸಕನಿಗೆ 25 ವರ್ಷ ಜೈಲು ಹಾಗೂ ಹತ್ತೂವರೆ ಲಕ್ಷ ದಂಡ ವಿಧಿಸಿದೆ. 10.5 ಲಕ್ಷವನ್ನು ತಕ್ಷಣವೇ ಬಾಲಕಿಯ ಕುಟುಂಬಕ್ಕೆ ನೀಡಬೇಕೆಂದು ಸೂಚಿಸಿದೆ.
ಆದರೆ ಕೋರ್ಟಿನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಹೋಗುವುದಾಗಿ ಶಾಸಕರ ಪರ ವಕೀಲರು ತಿಳಿಸಿದ್ಧಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮ್‌ದುಲಾರ್ ಗೊಂಡ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿಜಯ್ ಸಿಂಗ್ ಅವರನ್ನು ಸೋಲಿಸಿದ್ದರು. ಆದರೆ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಶಾಸಕ ರಾಮದುಲರ್ ಗೊಂಡ್ ಅವರನ್ನು ವಜಾ ಮಾಡಲಾಗಿದ್ದು, ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾದ ಶಾಸಕರನ್ನು ಅನರ್ಹಗೊಳಿಸಲಾಗುತ್ತದೆ ಮತ್ತು ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲಾಗುತ್ತದೆ.



