ಇತ್ತೀಚೆಗೆ ನಟಿ ರನ್ಯಾ ರಾವ್ ಅವರು ಚಿನ್ನದ ಸ್ಮಗ್ಲಿಂಗ್ ಮಾಡಿ ಬೆಂಗಳೂರು ಏರ್ ಪೋರ್ಟಿನಲ್ಲಿ ಸಿಕ್ಕಬಿದ್ದಿದ್ದರು. ಆ ನಟಿ ಸುದೀಪ್ ಅವರ ಮಾಣಿಕ್ಯದಲ್ಲಿ ಸೆಕೆಂಡ್ ಹೀರೋಯಿನ್. ಗಣೇಶ್ ಜೊತೆ ಪಟಾಕಿಯಲ್ಲಿ ನಾಯಕಿ. ಈಕೆಯ ತಂದೆ ಡಿಜಿಪಿ. ರಾಮಚಂದ್ರ ರಾವ್. ಈ ರಾಮಚಂದ್ರ ರಾವ್ ಅವರ ಪತ್ನಿಯ ಮೊದಲ ಪತಿಗೆ ಜನಿಸಿದ ಇಬ್ಬರು ಮಕ್ಕಳಲ್ಲಿ ಒಬ್ಬಾಕೆಯೇ ರನ್ಯಾ ರಾವ್. ಈ ರಾಮಚಂದ್ರ ರಾವ್ ಅವರ ಮತ್ತೊಬ್ಬ ಮಲಮಗ ರುಷಬ್ ಮದುವೆಯಾಗಿರೋದು ಜಯಮಾಲಾ ಅವರ ಮಗಳು ಸೌಂದರ್ಯ ಅವರನ್ನ.
ಯಾರು ಆ ಮಿನಿಸ್ಟರ್..?
ಕನ್ನಡ ಚಿತ್ರ ನಟಿ ರನ್ಯಾ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಒಂದೊಂದೇ ಸ್ಫೋಟಕ ವಿಷಯಗಳು ಹೊರಬರುತ್ತಿವೆ. ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಳಿಕ ಕೇಂದ್ರ ತನಿಖಾ ದಳ (ಸಿಬಿಐ) ರಂಗ ಪ್ರವೇಶ ಮಾಡಿದೆ. 12 ಕೋಟಿ ಮೌಲ್ಯದ ಚಿನ್ನವನ್ನು ಬೆಲ್ಟಿನಲ್ಲಿ ಅಡಗಿಸಿಕೊಟ್ಟು ಬಂದು ಸಿಕ್ಕಿಬಿದ್ದ ನಟಿ ರನ್ಯಾ ರಾವ್. ಅಪ್ಪ ಡಿಜಿಪಿ ರಾಮಚಂದ್ರ ರಾವ್. ವಿಚಾರಣೆ ನಡೆಯುತ್ತಿರುವಾಗಲೇ ನಟಿ ರನ್ಯಾಗೆ ಸರ್ಕಾರದಿಂದ 12 ಎಕರೆ ಭೂಮಿ ಪಡೆದಿದ್ದ ವಿಷಯ ಬಹಿರಂಗವಾಗಿದೆ.
ರನ್ಯಾ ರಾವ್ಗೆ ರಾಜಕೀಯ ವ್ಯಕ್ತಿಗಳಿಗೂ ಇದೆ ದೊಡ್ಡ ನಂಟು ಇರುವುದರಿಂದ ಅವರ ಕಂಪನಿಗೆ ಸರ್ಕಾರದಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ. ರನ್ಯಾ ಅವರಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ತುಮಕೂರಿನ ಸಿರಾದಲ್ಲಿ 2023 ರಲ್ಲಿ 12 ಎಕರೆ ಮಂಜೂರಾಗಿರುವ ವಿಷಯ ಈಗ ಗೊತ್ತಾಗಿದೆ. ರಾಜಕೀಯ ವ್ಯಕ್ತಿಗಳ ಜತೆಗಿನ ನಂಟಿನ ಕಾರಣದಿಂದಲೇ ಜಮೀನು ಮಂಜೂರಾಗಿದೆ. ಕಾಂಗ್ರೆಸ್ ಸರಕಾರದ ಪ್ರಭಾವಿ ರಾಜಕಾರಣಿಯ ಹೆಸರು ಸಹ ಇದರಲ್ಲಿ ಕೇಳಿ ಬಂದಿದ್ದು ಅವರು ಯಾರು ಎನ್ನುವುದು ಮಾತ್ರ ಸದ್ಯಕ್ಕೆ ಗುಟ್ಟು.
ಆ ರಾಜಕಾರಣಿಯ ಪ್ರಭಾವದಿಂದಲೇ ರನ್ಯಾ ಅವರ ಮೆಸರ್ಸ್ ಕ್ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನಿರ್ದೇಶಕಿಯಾಗಿದ್ದಾರೆ. ಈ ಕಂಪೆನಿಗೇ 12 ಎಕರೆ ಜಮೀನು ಕೊಟ್ಟಿರುವುದು. ಒಬ್ಬ ನಟಿ ನಿರ್ದೇಶಕಿಯಾಗಿರುವ ಕಂಪನಿಗೆ 12 ಎಕರೆ ಜಮೀನು ಮಂಜೂರಾಗಿದ್ದು ಹೇಗೆ? ಇದು ಉತ್ತರ ಸಿಗದ ಪ್ರಶ್ನೆ.
ಜಯಮಾಲಾ ಮಗಳ ಮದುವೆಯಲ್ಲಿ ರನ್ಯಾ ರಾವ್
ಇನ್ನು ಜಯಮಾಲಾ ಅವರ ಮಗಳ ಮದುವೆಯಲ್ಲಿ ನಟಿ ರನ್ಯಾ ರಾವ್ ಅವರು ಕೂಡಾ ಭಾಗವಹಿಸಿದ್ದರು. ಜಯಮಾಲಾ ಕೂಡ ನಟಿ ಮತ್ತು ರಾಜಕಾರಣಿ. ಆದರೆ ಈ ರನ್ಯಾ ರಾವ್ ಅವರು ಜಯಮಾಲ ಅವರಿಗೆ ಈಗ ಸಂಬಂಧಿಕರೂ ಹೌದು. ಏಕೆಂದರೆ ಜಯಮಾಲಾ ಅವರ ಮಗಳು ಸೌಂದರ್ಯ ಮದುವೆಯಾಗಿರುವುದು, ಇದೇ ರನ್ಯಾ ಅವರ ಸಹೋದರನನ್ನ. ಅಣ್ಣನ ಮದುವೆಯಲ್ಲಿ ರನ್ಯಾ ರಾವ ಕಳಸ ಹಿಡಿದುಕೊಂಡಿದ್ದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ನಟಿ ರನ್ಯಾ ಅವರ ಮಲತಂದೆ ಡಿಜಿಪಿ ರಾಮಚಂದ್ರ ರಾವ್. ರನ್ಯಾ ಅವರ ಅಣ್ಣ ರುಷಬ್ ಅವರನ್ನೇ, ಸೌಂದರ್ಯ ಅವರು ಮದುವೆಯಾಗಿರುವುದು. ಫೆಬ್ರವರಿಯಲ್ಲಿ ನಡೆದಿದ್ದ ಸೌಂದರ್ಯ ಜಯಮಾಲಾ ಹಾಗೂ ರುಷಬ್ ಮದುವೆಯಲ್ಲಿ ನಟಿ ರನ್ಯಾ ಮಿಂಚಿದ್ದರು. ಸಹೋದರನ ಮದುವೆಯಲ್ಲಿ ಆಕೆಯ ತಾಯಿ ರೋಹಿಣಿ ಜೊತೆ ಕಳಸ ಹಿಡಿದುಕೊಂಡು ಓಡಾಡಿದ್ದರು. ತಿಂಗಳ ಹಿಂದೆಯಷ್ಟೇ ತಮ್ಮ ಕುಟುಂಬದವರೊಂದಿಗೆ ರನ್ಯಾ ಖುಷಿಯಾಗಿದ್ದರು.
ಸುಳ್ಳು ಹೇಳಿದ್ರಾ ಡಿಜಿಪಿ ರಾಮಚಂದ್ರ ರಾವ್..?
ಅಂದಹಾಗೆ ರಾಮಚಂದ್ರ ರಾವ್ ಅವರು, ತಮ್ಮ ಮಗಳು ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಅರೆಸ್ಟ್ ಆಗುತ್ತಿದ್ದಂತೆಯೇ ತಮಗೂ ಮಗಳಿಗೂ ಸಂಬಂಧವೇ ಇಲ್ಲ. ಸುಮಾರು 4 ತಿಂಗಳಿಂದ ನಾನು ಅವಳ ಮುಖವನ್ನೇ ನೋಡಿಲ್ಲ ಎಂದೆಲ್ಲ ಹೇಳಿದ್ದರು. ಆದರೆ ಮದುವೆ ನಡೆದಿರೋದು ಫೆಬ್ರವರಿಯಲ್ಲಿ. ಡಿಜಿಪಿ ರಾಮಚಂದ್ರ ರಾವ್ ಸುಳ್ಳು ಹೇಳಿದರಾ..?



