ಅವತ್ತು ಚಿವುಟಿದ್ದರು.. ಇವತ್ತು ತಳ್ಳಿದರು.. ಅಷ್ಟೆ. ಸಿಂಪಲ್ಲಾಗ್ ಹೇಳ್ಬೇಕಂಂದ್ರೆ ಆಗಿರೋದು ಇಷ್ಟ. ಆದರೆ.. ಹಾಗೆ ಚಿವುಟಿದ್ದಾಗಲೇ ಏನನ್ನೂ ಮಾತನಾಡದೇ ಇದ್ದ ಅಂಜಲಿ ಈಗ ಮಾತನಾಡ್ತಾರಾ..? ಇಷ್ಟಕ್ಕೂ ಬಾಲಯ್ಯ-ಅಂಜಲಿ ನಡುವಿನ ಬಾಂಧವ್ಯ ಎಂಥದ್ದು..? ಅವರಿಬ್ಬರ ನಡುವಿನ ಬಾಂಡಿಂಗ್ ಎಂಥದ್ದು..? ನೋಡ್ತಾ ಹೋದ್ರೆ.. ಸಖತ್ ಇಂಟ್ರೆಸ್ಟಿಂಗ್ ಅನ್ಸುತ್ತೆ.
ಇಷ್ಟಕ್ಕೂ ಆಗಿದ್ಧೇನಂದ್ರೆ..
ಹೈದರಾಬಾದ್‌ನಲ್ಲಿ ವಿಶ್ವಕ್ ಸೇನ್ ನಟನೆಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಕಾರ್ಯಕ್ರಮ ನಡೀತಾ ಇತ್ತು. ಅಲ್ಲಿ ನಟ ನಂದಮೂರಿ ಬಾಲಕೃಷ್ಣ ಹಾಗೂ ನಟಿ ಅಂಜಲಿ ನಡುವೆ ನಡೆದ ಒಂದು ಘಟನೆ.. ವಿಶೇಷವಾಗಿ ಬಾಲಿವುಡ್ ಪ್ರೇಮಿಗಳನ್ನು ದಿಗ್ಭ್ರಮಗೊಳಿಸಿದೆ. ಟಾಲಿವುಡ್ʻನಲ್ಲಿ ಅಂತಹ ನೆಗೆಟಿವ್ ರಿಯಾಕ್ಷನ್ ಇಲ್ಲ.
ಕನ್ನಡದಲ್ಲಿ ರಣವಿಕ್ರಮ ಚಿತ್ರದಲ್ಲಿಯೂ ನಟಿಸಿರುವ ಅಂಜಲಿ, ತೆಲುಗು ಹಾಗೂ ತಮಿಳಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ನಟಿ ಅಂಜಲಿ ಪುನೀತ್ ಎದುರು ಜೋಡಿಯಾಗಿ ನಟಿಸಿದ್ದರು. ಹೊಂಗನಸು, ಅಂಜಲಿ ನಟಿಸಿದ್ದ ಮೊದಲ ಕನ್ನಡ ಸಿನಿಮಾ. ನೆನಪಿರಲಿ ರತ್ನಜ ಹಾಗೂ ನೆನಪಿರಲಿ ಪ್ರೇಮ್ ಮತ್ತೊಮ್ಮೆ ಜೋಡಿಯಾಗಿದ್ದ ಸಿನಿಮಾ ಸೋತ ಕಾರಣ, ಜನ ಮರೆತಿರಬಹುದು. ಅದಾದ ಮೇಲೆ ಶಿವಣ್ಣ ಬೈರಾಗಿಯಲ್ಲೂ ನಟಿಸಿದ್ದರು ಅಂಜಲಿ.
ಈಗ ನಟಿಸಿರುವ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದಲ್ಲಿ ವಿಶ್ವಕ್ ಸೇನ್ ಹೀರೋ. ಮುಂಗಾರು ಮಳೆ ೨ ಖ್ಯಾತಿಯ ನೇಹಾ ಶೆಟ್ಟಿ ಹಾಗೂ ಅಂಜಲಿ ನಾಯಕಿಯರು. ಈ ಸಿನಿಮಾ ಕಾರ್ಯಕ್ರಮಕ್ಕೆ ಬಾಲಕೃಷ್ಣ ಅತಿಥಿಯಾಗಿ ಆಗಮಿಸಿದ್ದರು.
ಆಗ.. ವೇದಿಕೆ ಮೇಲೆ ನೇಹಾ ಶೆಟ್ಟಿ ಹಾಗೂ ಅಂಜಲಿ ಇಬ್ಬರೂ ಇದ್ದು, ಅಂಜಲಿಯನ್ನು ತಳ್ಳಿ, ನೇಹಾ ಪಕ್ಕ ನಿಂತುಕೊಂಡು ʻಯಾರು ಈ ಕೊಳಕುʼ ಎಂದು ಕಾಮಿಡಿ (?) ಮಾಡಿದ್ಧಾರೆ. ಮೊದಲು ಗಾಬರಿಯಾದ ಅಂಜಲಿ, ಆನಂತರ ತಳ್ಳಿದ್ದು ಬಾಲಕೃಷ್ಣ ಎಂದು ಗೊತ್ತಾದ ನಂತರ ನಕ್ಕು ಸುಮ್ಮನಾಗಿದ್ಧಾರೆ.
ಅವರಿಬ್ಬರೂ ನಕ್ಕು ಸುಮ್ಮನಾದರೂ.. ಜನ ಸುಮ್ಮನಾಗಿಲ್ಲ. ವಿಶೇಷವಾಗಿ ಬಾಲಿವುಡ್ ಪ್ರೇಮಿ ನೆಟ್ಟಿಗರು ಬಾಲಕೃಷ್ಣ ವಿರುದ್ಧ ಮುಗಿಬಿದ್ದಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಕೂಡಾ ಆಕ್ರೋಶ ವ್ಯಕ್ತಪಡಿಸುವುದರೊಂದಿಗೆ ವಿವಾದ ಇನ್ನಷ್ಟು ದೊಡ್ಡದಾಯ್ತು.
ಆದರೆ.. ಬಾಲಯ್ಯ ಮತ್ತು ಅಂಜಲಿ ಅವರಿಬ್ಬರ ನಡುವೆ ವೃತ್ತಿಯನ್ನೂ ಮೀರಿದ ಸ್ನೇಹ ಇದೆ. ೨೦೧೫ರಲ್ಲಿ ಬಾಲಕೃಷ್ಣ, ಅಂಜಲಿ ಅವರೊಂದಿಗೆ ಡಿಕ್ಟೇಟರ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಕಾರ್ಯಕ್ರಮದಲ್ಲಿ ಅಂಜಲಿ ಅವರನ್ನು ವೇದಿಕೆ ಮೇಲೆ ಇರುವಷ್ಟು ಹೊತ್ತೂ ಚಿವುಟುತ್ತಲೇ ಇದ್ದರು. ಆಗಲೂ.. ವಿವಾದವಾಗಿತ್ತು. ಬಾಲಕೃಷ್ಣ ಕ್ಷಮೆಯನ್ನೂ ಕೇಳಿರಲಿಲ್ಲ. ನನ್ನ ಮತ್ತು ಬಾಲಕೃಷ್ಣ ಅವರಿಬ್ಬರ ಒಳ್ಳೆಯ ಸ್ನೇಹ ಇದೆ ಎಂದು ವಿವಾದಕ್ಕೆ ಸಂಬಂಧಪಟ್ಟಂತೆ ಅಂಜಲಿಯೇ ಸ್ಪಷ್ಟನೆ ಕೊಟ್ಟಿದ್ದರು.
ಸಹ ಕಲಾವಿದರ ಜೊತೆಗೆ ಬಾಲಯ್ಯ ಯಾವಾಗಲೂ ಸಲುಗೆಯನ್ನು ಹೊಂದಿರುತ್ತಾರೆ. ಹಾಗಾಗಿ, ಅಲ್ಲಿದ್ದವರಿಗೆ ಯಾವುದೇ ಸಮಸ್ಯೆ ಎನಿಸಿಲ್ಲ. ಈ ಬಗ್ಗೆ ಅಂಜಲಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಾಲಕೃಷ್ಣ ಅವರ ಇಂತಹ ವರ್ತನೆಗಳು ಹೊಸದೇನೂ ಅಲ್ಲ. ಯಾವುದೇ ಕಾಂಟ್ರವರ್ಸಿಗೂ ಅವರು ಕ್ಷಮೆ ಕೇಳಿಲ್ಲ. ಅವರು ಒಮ್ಮೆಯೇ ಒಮ್ಮೆ ಕ್ಷಮೆ ಕೇಳಿದ್ದರು. ಜೈ ಸಿಂಹ ಚಿತ್ರದ ಈವೆಂಟ್ʻನಲ್ಲಿ ಬಾಲಕೃಷ್ಣ ʻʻನನ್ನ ಫ್ಯಾನ್ಸ್ ಎಂಥವರು ಎಂದರೆ.. ನಾನು ಸಿನಿಮಾದಲ್ಲಿ ನಾಯಕಿಗೆ ಮುತ್ತು ಕೊಟ್ಟರೂ ಥ್ರಿಲ್ ಆಗ್ತಾರೆ. ನಾಯಕಿಯನ್ನು ಗರ್ಭಿಣಿ ಮಾಡಿದರೆ.. ಇನ್ನೂ ಖುಷಿಯಾಗಿದ್ಧಾರೆʼʼ ಎಂದು ಹೇಳಿಕೆ ನೀಡಿದ್ದರು. ಆ ಚಿತ್ರದಲ್ಲಿ ನಯನತಾರಾ ನಾಯಕಿ. ಅದು ವಿವಾದವಾದಾಗ.. ಬಾಲಕೃಷ್ಣ ಕ್ಷಮೆ ಕೇಳಿದ್ದರು. ಅಷ್ಟು ಬಿಟ್ಟರೆ.. ಬಾಲಕೃಷ್ಣ ಸಾರಿ ಕೇಳಿದ ಘಟನೆಗಳು ಇಲ್ಲ. ಆದರೆ.. ವಿವಾದಗಳಂತೂ ಆಗಿವೆ. ಆಗುತ್ತಲೇ ಇವೆ.



