ಅಭಿಮಾನಿ ಎಂದ ಮೇಲೆ ಅದು ಯಾರೇ ಆದರೂ ಅದಕ್ಕೊಂದು ಲಿಮಿಟ್ ಇರುತ್ತದೆ. ಫ್ರೆಂಡ್ಸ್ ಮಧ್ಯೆ ಅಮಲಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಆಡುವ ಮಾತನ್ನು ಸೋಷಿಯಲ್ ಮೀಡಿಯಾದಲ್ಲಿ ಆಡಿದರೆ ಏನಾಗುತ್ತದೋ.. ಅದೇ ಇವರಿಗೂ ಆಗಿದೆ. ಅದರ ಪರಿಣಾಮ.. ಕೋರ್ಟ್ ಜಾಮೀನು ಕೊಟ್ಟಿದ್ದರೂ.. ಜೈಲಿನಿಂದ ಬಿಡುಗಡೆ ಆಗುವುದಕ್ಕೆ ಸಾಧ್ಯ ಆಗಿಲ್ಲ.
ನಟಿ ರಮ್ಯಾಗೆ ರೇಪ್ ಮಾಡ್ತೇನೆ, ಮರ್ಡರ್ ಮಾಡ್ತೇನೆ.. ಎಂದು ಪೋಸ್ಟ್ ಹಾಕಿದ್ದವರು.. ರಮ್ಯಾ ಕೇಸು ಹಾಕಿದ ನಂತರ ಓಡೋಡಿ ಹೋಗಿ ತಪ್ಪಿಸಿಕೊಳ್ಳೋಕೆ ಟ್ರೈ ಮಾಡಿದ್ದರು. ಆಗಲಿಲ್ಲ. ಅರೆಸ್ಟ್ ಆದರು. ಅವರ ಕುಟುಂಬದವರು ಕಣ್ಣೀರಿಟ್ಟರು. ಅರೆಸ್ಟ್ ಆಗಿದ್ದು ಒಟ್ಟು 12 ಮಂದಿ. ಆ 12ರಲ್ಲಿ ಕೇವಲ 6 ಜನಕ್ಕೆ ಬೇಲ್ ಆಗಿತ್ತು.
ಉಳಿದವರು ನೇರಾನೇರವಾಗಿ ಅಮ್ಮ.. ಅಕ್ಕ.. ರೇಪ್ ಮಾಡ್ತೇನೆ ಎಂದು ಡೈರೆಕ್ಟ್ ಆಗಿ ಮೆಸೇಜ್ ಮಾಡಿದ್ದವರು. ಅವರಿಗೆ ಬೇಲ್ ಕೂಡಾ ಸಿಕ್ಕಿಲ್ಲ. ʻಡ್ಯಾಷ್ ಡ್ಯಾಷ್ʼ ಭಾಷೆಗಳಲ್ಲಿ ಬಯ್ಯುವುದನ್ನೆಲ್ಲ ಮಾಡಿ.. ಓಪನ್ ಆಗಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಅರೆಸ್ಟ್ ಆಗಿ ಒಂದು ತಿಂಗಳು ಜೈಲಲ್ಲಿ ಕಳೆದ ಮೇಲೆ ಒಟ್ಟು 6 ಮಂದಿಗೆ ಬೇಲ್ ಆಗಿತ್ತು. ಅಕ್ಟೋಬರ್ 10ನೇ ತಾರೀಕು ಬೇಲ್ ಆಗಿದೆಯಾದರೂ.. ಈವರೆಗೂ ಜಾಮೀನು ಪಡೆದ 6 ಜನ ಆರೋಪಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಕೆ. ಪ್ರಮೋದ್, ಮಂಜುನಾಥ್, ಸಿ.ವೈ.ರಾಜೇಶ್, ಟಿ.ಓಬಣ್ಣ, ಕೆ.ಎಂ.ಗಂಗಾಧರ್, ಚಿನ್ಮಯ್ ಶೆಟ್ಟಿ.. ಅವರಿಗೆ ಜಾಮೀನು ಸಿಕ್ಕಿದೆ. ಕೋರ್ಟ್ ಬೇಲ್ ಕೊಟ್ಟಿದೆ. ಆದರೆ ಈವರೆಗೆ ಯಾರೂ ರಿಲೀಸ್ ಆಗಿಲ್ಲ. ಏಕೆಂದರೆ.. ಎಲ್ಲ ಆರೋಪಿಗಳು ಒಂದು ಲಕ್ಷ ರೂ.ಗಳ ಬಾಂಡ್, ಅಷ್ಟೇ ಮೌಲ್ಯದ ಒಂದು ಶ್ಯೂರಿಟಿ ಒದಗಿಸುವಂತೆ ಕೋರ್ಟ್ ಸೂಚಿಸಿತ್ತು. ಕೋರ್ಟಿನಲ್ಲಿ ಜಾಮೀನು ನೀಡುವುದಕ್ಕೆ ಬೇಕಿರುವ ಒಂದು ಲಕ್ಷ ರೂ. ಬಾಂಡ್ ಹಾಗೂ ಶ್ಯೂರಿಟಿದಾರರು ಸಿಗದೇ ಇರುವ ಕಾರಣ ಯಾರೂ ಕೂಡಾ ಜೈಲಿನಿಂದ ಹೊರಬಂದಿಲ್ಲ.
ಯೋಚನೆ ಮಾಡಿ ನೋಡಿ.. ಒಂದು ಲಕ್ಷದ ಬಾಂಡ್ ಕೂಡಾ ಕೊಡುವುದಕ್ಕೆ ಶಕ್ತಿ ಇಲ್ಲದವರಿಗೆ ಈಗ ಯಾರೂ ನೆರವಿಗೆ ಬಂದಿಲ್ಲ. ನಟ ದರ್ಶನ್ ಆಗಲೀ.. ಕೆರಳಿಸುವ ಗೆಳೆಯನಾಗಲೀ ಯಾರೂ ಇಲ್ಲ.
ಏಕೆಂದರೆ.. ಆರೋಪಿಗಳ ವಿರುದ್ಧ
ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66(ಸಿ), 67 ಮತ್ತು ಬಿಎನ್ಎಸ್ ಕಾಯಿದೆಯ ಸೆಕ್ಷನ್ 351(3)(ಕ್ರಿಮಿನಲ್ ಬೆದರಿಕೆ, 351(2)(ಉದ್ದೇಶಪೂರ್ವಕವಾಗಿ ಅವಮಾನಿಸುವ ಮೂಲಕ ಶಾಂತಿಗೆ ಧಕ್ಕೆ ತರುವುದು), 75(1)(5)( ಪುರಷನಿಂದ ಲೈಂಗಿಕ ಹೇಳಿಕೆಗಳನ್ನು ನೀಡಿ ಕಿರುಕುಳ ), 79 (ಮಹಿಳೆಯ ಘನತೆಯನ್ನು ಅವಮಾನಿಸುವ ಉದ್ದೇಶದ ಹೇಳಿಕೆ, ಸನ್ನೆ ಅಥವಾ ಕೃತ್ಯ)ಗಳ ಅಡಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ. ಈ ಆರೋಪಿಗಳು ಇದೇ ತಪ್ಪನ್ನು ರಿಪೀಟ್ ಮಾಡಿದರೆ..ಆಗ ಪ್ರಕರಣ ಇನ್ನಷ್ಟು ಸೀರಿಯಸ್ ಆಗುತ್ತದೆ. ಯಾಕೆ ಬೇಕು ಸಹವಾಸ ಎಂದು ದೂರ ಉಳಿಯುತ್ತಿದ್ದಾರೆ ಎಲ್ಲರೂ. ಅಂದಹಾಗೆ ಆರೋಪಿಗಳೆಲ್ಲರೂ ದರ್ಶನ್ ಅಭಿಮಾನಿಗಳೇ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರಿಗೆ ಬೆದರಿಕೆ ಹಾಕಿದ್ದವರು. ಜೈಲು ಸೇರಿದ್ದವರು.



