ದರ್ಶನ್ ಕೇಸಿನಲ್ಲಿ ಜಾಮೀನು ಕೊಟ್ಟಿದ್ದು ಸರೀನಾ.. ತಪ್ಪಾ.. ಎಂದು ಸುಪ್ರೀಂಕೋರ್ಟ್ ಪರಿಶೀಲನೆ ಮಾಡುವುದಕ್ಕೆ ಒಪ್ಪಿಕೊಂಡಾಗ ರಮ್ಯಾ ಮಾಡಿದ್ದ ಒಂದು ಪೋಸ್ಟಿಗೆ ಎಗರಿಬಿದ್ದ ದರ್ಶನ್ ಫ್ಯಾನ್ಸ್.. ರಮ್ಯಾ ತಿರುಗಿಬಿದ್ದಾಗ ಊರನ್ನೇ ಬಿಟ್ಟರು. ಅದಾದ ಮೇಲೆ ಒಬ್ಬೊಬ್ಬರನ್ನಾಗಿಯೇ ಅರೆಸ್ಟ್ ಮಾಡಿದ್ದೂ ಆಯ್ತು. ಚಾರ್ಜ್ ಶೀಟ್ ಆಗಿ.. ಕೆಲವರಿಗೆ ಜಾಮೀನು ಸಿಕ್ಕಿ ಹೊರಬಂದಿದ್ದರೆ.. ಇನ್ನೂ ಕೆಲವರು ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ. ಚಾರ್ಜ್‌ಶೀಟ್ ಹಾಕಿರುವ ಪೊಲೀಸರು ಆರೋಪಪಟ್ಟಿಯನ್ನು ಬಲವಾಗಿಯೇ ಸಲ್ಲಿಸಿದ್ದಾರೆ. ಜಾಮೀನು ಸಿಗದೇ ಇರುವವರು ನೇರವಾಗಿಯೇ ರೇಪ್ ಮಾಡುವ, ಕೊಲ್ಲುವ ಬೆದರಿಕೆ ಹಾಕಿದ್ದ ಪೋಸ್ಟ್ ಇರುವ ಕಾರಣ.. ಜಾಮೀನು ಕಷ್ಟವಾಗುತ್ತಿದೆ. ಈ ನಡುವೆ ಆರೋಪಿಗಳ ಕುಟುಂಬದವರು ಸಂಕಟ ಅನುಭವಿಸುತ್ತಿದ್ದಾರೆ.
ಅಂತಹ ಕುಟುಂಬದವರು ಅನುಭವಿಸುತ್ತಿರುವ ಸಂಕಟ ಒಂದೆರಡಲ್ಲ. ಅವರು ಕಣ್ಣೀರು ಹಾಕ್ತಿದ್ದಾರೆ. ಕಾಲಿಗೆ ಬೀಳ್ತೀವಿ ಅಂದ್ರೂ ರಮ್ಯಾ ಮೇಡಂ ಹೃದಯ ಕರಗುತ್ತಿಲ್ಲ. ಜೈಲಿಗೆ ಹೋಗಿರುವ ಯಾವೊಬ್ಬ ಅಭಿಮಾನಿಯೂ ಶ್ರೀಮಂತ ಅಲ್ಲ. ಬಡ ಅಥವಾ ಮಧ್ಯಮ ವರ್ಗದ ಕುಟುಂಬದವರು. ಬಹುತೇಕರ ಕುಟುಂಬಕ್ಕೆ ಅವರೊಬ್ಬರೇ ದುಡಿಮೆಯ ಆಧಾರ.
ಇಲ್ಲೇ ನೋಡಿ.. ಚಾಮರಾಜನಗರ ತಾಲೋಕು ನಂಜೇದೇವನಪುರ ಗ್ರಾಮದ ಅಭಿಷೇಕ್, ಜೈಲಿನಲ್ಲಿದ್ದಾನೆ. ಆತ ಗೂಡ್ಸ್ ಆಟೋ ಡ್ರೈವರ್. ಕುಟುಂಬಕ್ಕೆ ಅವನೊಬ್ಬನೇ ಆಧಾರ. ತಂದೆಗೆ ಕೆಲವು ತಿಂಗಳ ಹಿಂದೆ ಸ್ಟ್ರೋಕ್ ಆಗಿದ್ದು, ಇನ್ನೂ ಪೂರ್ತಿ ರಿಕವರ್ ಆಗಿಲ್ಲ. ತಾಯಿಗೂ ಅಷ್ಟೇ.. ಕೆಲವೇ ತಿಂಗಳ ಹಿಂದೆ ಗರ್ಭಕೋಶದ ಆಪರೇಷನ್ ಆಗಿದೆ. ಇನ್ನು ವಯಸ್ಸಾದ ಅಜ್ಜಿ ಇದ್ದಾರೆ. ಮದುವೆ ಆಗಿಲ್ಲ. ಮಗ ಜೈಲಲ್ಲಿದ್ದಾನೆ. ಊಟ ಉಪಹಾರಕ್ಕೂ ಸಾಲ ಮಾಡಬೇಕು.
ʻನನ್ನ ಮಗ ತಪ್ಪು ಮಾಡಿಲ್ಲ. ಅವನು ಆಟೋ ಓಡಿಸಿದ್ದ. ಅ ಗೂಡ್ಸ್ ಆಟೋ ಮಾಲಿಕ ಕಾರ್ತಿಕ್ ಎಂಬುವವನು ಅಭಿಷೇಕ್ ಮೊಬೈಲಿನಲ್ಲಿ ಆ ರೀತಿಯ ಪೋಸ್ಟ್ ಮಾಡಿದ್ದಾನೆ. ನನ್ನ ಮಗನಿಗೆ ದಿನಸಿ ಸಾಮಾನು ಚೀಟಿ ಬರೆಯೊಕೂ ಬರಲ್ಲ,ಇಂಗ್ಲಿಷ್ ಅಂತೂ ಮೊದ್ಲೇ ಬರೊಲ್ಲ. ರಮ್ಯಾ ಮೇಡಂ ನಿಮ್ಮ ಕಾಲಿಗೆ ಬೀಳ್ತಿವಿ ನನ್ನ ಮಗನನ್ನು ಬಿಡಿಸಿಕೊಡಿʼʼ ಎಂದು ಕಣ್ಣೀರು ಹಾಕಿದ್ದಾರೆ ಅಭಿಷೇಕ್ ತಾಯಿ.
ಇನ್ನೊಬ್ಬ ಅಭಿಮಾನಿ ಇದ್ದಾನೆ. ಆತ ಬೆಂಗಳೂರಿನವನೇ. ತಂದೆ ತಾಯಿ ಇಬ್ಬರೂ ಇಲ್ಲ. ಒಬ್ಬ ತಂಗಿ ಇದ್ದಾಳೆ. ತಂಗಿಯನ್ನು ಹೇಗೋ ಕಷ್ಟಪಟ್ಟು ಓದಿಸುತ್ತಿದ್ದ ಆತ, ಈಗ ಜೈಲಿನಲ್ಲಿದ್ದಾನೆ. ತಂಗಿಯ ಓದು ಇರಲಿ.. ಊಟಕ್ಕೂ ಕಷ್ಟವಾಗಿದೆ.
ಮತ್ತೊಬ್ಬನದ್ದು ಇನ್ನೂ ಘೋರ. ಆತನ ಅಕ್ಕನಿಗೆ ಮದುವೆ ಫಿಕ್ಸ್ ಆಗಿತ್ತಂತೆ. ತಮ್ಮ ಜೈಲಿಗೆ ಹೋದ ಎಂದು ಗೊತ್ತಾದ ನಂತರ ಅಕ್ಕನ ಮದುವೆಯೇ ಕ್ಯಾನ್ಸಲ್ ಆಗಿದೆ.
ಬೇಲ್ ಆಗಿರುವ ಕೆಲವರಿಗೆ ಜಾಮೀನಿನಲ್ಲಿರುವ ಷರತ್ತಿನ ಲಕ್ಷ ರೂ. ಬಾಂಡ್ ಪೂರೈಸಲು ಆಗದೆ ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಎಂಬ ಹೆಸರಿನಲ್ಲಿ ನಡೆದ ಈ ಹುಚ್ಚಾಟಕ್ಕೆ ಬ್ರೇಕ್ ಹಾಕಲೇಬೇಕು ಎಂದು ರಮ್ಯಾ ಮನಸ್ಸು ಮಾಡಿದಂತೆ ಇದೆ. ಈ ಬಾರಿಯೂ ಕೂಡಾ ಕೆಲವು ಅಪ್ತಾಪ್ತ ಬಾಲಕರಿದ್ದು, ಅವರ ಬಗ್ಗೆ ಮಾತ್ರ ರಮ್ಯಾ ಕರುಣೆ ತೋರಿಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.



