ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಅವರ ಜನಪ್ರಿಯತೆಗೆ ಸವಾಲು ಹಾಕಬಲ್ಲ ಇನ್ನೊಬ್ಬ ನಟಿ ಇನ್ನೂ ಬಂದಿಲ್ಲ. ರಮ್ಯಾ ಅವರು ಚಿತ್ರವೊಂದರಲ್ಲಿ ಆಕ್ಟ್ ಮಾಡಿ ದಶಕವೇ ಆಗಿದೆ. ಆದರೆ ಈಗಲೂ ಕನ್ನಡ ಚಿತ್ರರಸಿಕರು ರಮ್ಯಾ ಅವರನ್ನೇ ನೆನಪು ಮಾಡಿಕೊಳ್ತಾರೆ. ರಮ್ಯಾ ಅವರು ಈ ಮಧ್ಯೆ ರಾಜಕೀಯಕ್ಕೆ ಹೋಗಿ, ಕಾಂಗ್ರೆಸ್ ಸೇರಿ ಎಂಪಿಯೂ ಆಗಿ, ಪ್ರಚಾರಕಿಯೂ ಆಗಿ.. ಎಲ್ಲವನ್ನೂ ಬಿಟ್ಟು ವಾಪಸ್ ಬಂದಿದ್ದೂ ಆಗಿದೆ. ವಿಶೇಷವೆಂದರೆ ಕಾಂಗ್ರೆಸ್ ಇಷ್ಟಪಡದೇ ಇದ್ದವರೂ ಕೂಡಾ, ರಮ್ಯಾ ಅವರನ್ನು ಇಷ್ಟ ಪಡುತ್ತಿದ್ದರು. ಅದು ರಮ್ಯಾ ಕ್ರೇಜ್.
ಇದೀಗ ರಮ್ಯಾ ಅವರು ಅಂತೂ ಇಂತೂ ಚಿತ್ರರಂಗಕ್ಕೆ ರಿಟರ್ನ್ ಆಗುವ ಮನಸ್ಸು ಮಾಡಿದ್ದಾರೆ. ಮದ್ಯದಲ್ಲೊಂದು ಹಾಸ್ಟೆಲ್ ಹುಡುಗರು ಎಂಬ ಚಿತ್ರದಲ್ಲಿ ಪುಟ್ಟದೊಂದು ದೃಶ್ಯದಲ್ಲಿ ನಟಿಸಿ, ಅದೂ ಕೂಡಾ ವಿವಾದವಾಗಿದೆ. ಕೋರ್ಟಿನಲ್ಲಿ ಇನ್ನೂ ಕೇಸ್ ನಡೆಯುತ್ತಲೇ ಇದೆ. ಇದರ ಮಧ್ಯೆ ಅವರದ್ದೇ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿ, ಕೊನೆಗೆ ಆ ಚಿತ್ರಕ್ಕೆ ಬೇರೊಬ್ಬರನ್ನು ನಾಯಕಿಯನ್ನಾಗಿ ಮಾಡಿದ್ದರು ರಮ್ಯಾ. ಉತ್ತರಕಾಂಡ ಚಿತ್ರದಲ್ಲೂ ಅಷ್ಟೇ, ಮುಹೂರ್ತಕ್ಕೆ ಬಂದವರು, ಚಿತ್ರೀಕರಣದ ವೇಳೆ ಮಿಸ್ ಆದರು. ಇದೀಗ ಕಾಲ ಕೂಡಿ ಬಂದಂತಿದೆ. ಯೋಗರಾಜ್ ಭಟ್ಟರ ಜೊತೆ ಹೊಸ ಸಿನಿಮಾಗೆ ಓಕೆ ಎಂದಿದ್ದಾರೆ.
ರಂಗ SSLC ಗಲಾಟೆ ಮರೆತರಾ ರಮ್ಯಾ..?
ರಮ್ಯಾ ಅವರಿಗೆ ಯೋಗರಾಜ್ ಭಟ್ಟರು ಹೊಸಬರೇನಲ್ಲ. ಈ ಹಿಂದೆ ರಂಗ ಎಸ್ ಎಸ್ ಎಲ್ ಸಿ ಚಿತ್ರದಲ್ಲಿ ಭಟ್ಟರ ಜೊತೆ ಕೆಲಸ ಮಾಡಿದ್ದರು. ರಂಗ SSLC ಚಿತ್ರ ಸೂಪರ್ ಡ್ಯೂಪರ್ ಹಿಟ್ ಅಲ್ಲದೇ ಹೋದರೂ, ಆವರೇಜ್ ಲೆವೆಲ್ಲಿಗೆ ಹೋಗಿತ್ತು. ಊರ ಕಣ್ಣು.. ಮಾರಿ ಕಣ್ಣು.. ಇವತ್ತಿಗೂ ಕೇಳಲು ಇಷ್ಟಪಡುವಂತಹ ಹಾಡು. ಡವ್ ಡವ್ ದುನಿಯಾ ಕಣೋ.. ಮತ್ತು ಚಿಟ್ಟೆ ಚಿಟ್ಟೆ ಪಡ್ಡೆಗಳಿ ಇಷ್ಟವಾದರೆ, ಮನಸೇ ಮನಸೇ.. ಹಾಡು ಪ್ರೇಮಿಗಳಿಗೆ ಮೆಚ್ಚುಗೆಯಾಗಿತ್ತು. ಭೂಮಿ ಯಾಕೆ ತಿರುಗುತೈತೆ.. ಹಾಡು.. ಕುಡುಕರಿಗೆ ಪ್ರಿಯವಾಗಿತ್ತು.
ಆದರೆ ಈ ಚಿತ್ರದಲ್ಲಿ ಭಟ್ಟರು, ಸುದೀಪ್ ಮತ್ತು ರಮ್ಯಾ ನಡುವೆ ಎಲ್ಲವೂ ಸರಿ ಇರಲಿಲ್ಲ. ಚಿತ್ರೀಕರಣದಲ್ಲಿ ಸುದೀಪ್ ಅನಗತ್ಯವಾಗಿ ಮಧ್ಯ ಪ್ರವೇಶ ಮಾಡ್ತಾರೆ ಅನ್ನೋ ಕಾರಣಕ್ಕೆ ಭಟ್ಟರು, ಅನಗತ್ಯವಾಗಿ ಎಕ್ಸ್‌ಪೋಸ್ ಮಾಡಿಸ್ತಿದ್ದಾರೆ ಅನ್ನೋ ಕಾರಣಕ್ಕೆ ರಮ್ಯಾ ಮಧ್ಯೆ ಗಲಾಟೆಯೂ ಆಗಿತ್ತು. ಅದೆಲ್ಲವೂ ಚಿತ್ರದ ಮೇಲೂ ಪ್ರಭಾವ ಬೀರಿತ್ತು. ಅದಾದ ಮೇಲೆ ಸುಮಾರು ದಿನಗಳ ಕಾಲ ಎಲ್ಲರ ಮಧ್ಯೆ ಒಂದು ಗ್ಯಾಪ್ ಸೃಷ್ಟಿಯಾಗಿತ್ತು.
ಮುಂಗಾರು ಮಳೆ ಚಿತ್ರಕ್ಕೆ ಮೊದಲು ನಾಯಕಿಯಾಗಿದ್ದವರು ರಮ್ಯಾ. ಪೂಜಾ ಗಾಂಧಿಯವರಿಗೆ ಸ್ಟಾರ್ ಪಟ್ಟ ಕೊಟ್ಟ ಆ ಚಿತ್ರದಲ್ಲಿ ರಮ್ಯಾ ನಟಿಸಬೇಕಿತ್ತು. ಆದರೆ ಆಗಲಿಲ್ಲ. ಅದಾದ ಮೇಲೆ ಭಟ್ಟರು ಮತ್ತು ರಮ್ಯಾ ಕಾಂಬಿನೇಷನ್ ಬಗ್ಗೆ ಪ್ರೇಕ್ಷಕರು ಕೇಳುತ್ತಲೇ ಇದ್ದರು. ಆಗ ಇಬ್ಬರೂ ಕೂಡಾ ಒಳ್ಳೆ ಕಥೆ ಸಿಗಲಿ ಎನ್ನುತ್ತಿದ್ದರು. ಈಗ ಎಲ್ಲವೂ ಕೂಡಿ ಬಂದಂತಿದೆ.
‘ಮನದ ಕಡಲು’ ಸಿನಿಮಾಗೆ ಬಂಡವಾಳ ಹೂಡಿರುವ ಇ. ಕೃಷ್ಣಪ್ಪ ಹಾಗೂ ಜಿ. ಗಂಗಾಧರ್ ಅವರು ರಮ್ಯಾ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ನ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ರಮ್ಯಾ ಅವರ ‘ಆ್ಯಪಲ್ ಬಾಕ್ಸ್’ ನಿರ್ಮಾಣ ಸಂಸ್ಥೆ ಕೂಡ ಕೈ ಜೋಡಿಸಲಿದೆ. ‘ಇ.ಕೆ.ಎಂಟರ್ ಟೈನರ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯ ಯೋಗರಾಜ್ ಭಟ್ ಅವರ ಗಮನವೆಲ್ಲ ‘ಮನದ ಕಡಲು’ ಸಿನಿಮಾದ ಮೇಲಿದೆ. ಮಾರ್ಚ್ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕ ರಮ್ಯಾ ಜೊತೆಗಿನ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.



