ರಾಮೋಜಿ ರಾವ್. ಈ ವ್ಯಕ್ತಿಯ ಹೆಸರು ಮಾಧ್ಯಮಲೋದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯುವಂಥದ್ದು. ಕನ್ನಡಿಗರಿಗೆ ಈಟಿವಿ ಸಂಸ್ಥಾಪಕರಾಗಿ ಗೊತ್ತು. ಅದನ್ನೂ ಮೀರಿದ ಸಾಧನೆ ರಾಮೋಜಿ ರಾವ್ ಅವರದ್ದು.
ಮಾಧ್ಯಮ ರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್ ಅವರು ಇಹಲೋಕ ತ್ಯಜಿಸಿದ್ದಾರೆ. ಜೂನ್ 8 ಶನಿವಾರ ಬೆಳಗ್ಗೆ 4.50ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ್ ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ರಾಮೋಜಿ ರಾವ್ ಅವರನ್ನು ಜೂನ್ 5 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್‌ನ ನಾನಾಕರಮ್‌ಗುಡದಲ್ಲಿ ಇರುವ ಸ್ಟಾರ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ. ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
1936ರ ನವೆಂಬರ್ 16 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದ ರಾಮೋಜಿ ರಾವ್ ಅವರು ಸಾಗಿ ಬಂದ ಹಾದಿ ನಿಜಕ್ಕೂ ರೋಚಕ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಜನಿಸಿದ ರಾಮೋಜಿ ರಾವ್, ಉದ್ಯಮಿಯಾಗಿ, ಪತ್ರಕರ್ತನಾಗಿ, ಸಿನಿಮಾ ನಿರ್ಮಾಪಕನಾಗಿ, ಅಪರೂಪದ ಕನಸುಗಾರನಾಗಿ ಗೆದ್ದವರು.
ಈಟಿವಿ ಸಂಸ್ಥೆಯ ಮೂಲಕ ಕನ್ನಡ, ತೆಲುಗು ಸೇರಿದಂತೆ ರಾಜ್ಯದ ಒಟ್ಟು 13 ಭಾಷೆಗಳಲ್ಲಿ ಟಿವಿ ಚಾನೆಲ್ ಸ್ಥಾಪಿಸಿದ ರಾಮೋಜಿ ರಾವ್, ತೆಲುಗಿನಲ್ಲಿ ಈನಾಡು ಪತ್ರಿಕೆಯ ಮಾಲೀಕರೂ ಹೌದು. ಮಾರ್ಗದರ್ಶಿ ಚಿಟ್ ಫಂಡ್ ನಡೆಸುತ್ತಿದ್ದ ರಾಮೋಜಿ ರಾವ್, ಆ ಸಂಸ್ಥೆಯ ಮೇಲೆ ಕಾಂಗ್ರೆಸ್ ಕಣ್ಣು ಬಿದ್ದಾಗಲೂ ಎದೆಗುಂದಿರಲಿಲ್ಲ.
ಆಂಧ್ರಪ್ರದೇಶದಲ್ಲಿ ಮೇಲ್ಮನೆಯೇ ಇರಲಿಲ್ಲ
ಈನಾಡು ಪತ್ರಿಕೆಯಲ್ಲಿ ʻಪೆದ್ದರ ಗದ್ದಲುಮುʼ ಎಂಬ ಒಂದು ಹೆಡ್ ಲೈನ್ ಪರಿಣಾಮದಿಂದಾಗಿ ಮೇಲ್ಮನೆಯೇ ಇಲ್ಲದಂತಾಗಿದ್ದು ರಾಮೋಜಿ ರಾವ್ ಅವರ ಸಾಧನೆ. ವಿಧಾನಪರಿಷತ್ʻನಲ್ಲಿ ಕೇವಲ ಟೈಂಪಾಸ್ ನಡೆಯುತ್ತಿದೆ. ರಾಜ್ಯಕ್ಕೆ ಸಂಬಂಧಪಟ್ಟ ಒಂದು ವಿಷಯದ ಚರ್ಚೆಯೂ ಆಗುತ್ತಿಲ್ಲ. ಪೆದ್ದರ ಗದ್ದಲ ಅಂದರೆ ದೊಡ್ಡವರ ಗಲಾಟೆ ಎಂಬರ್ಥದಲ್ಲಿ ಈನಾಡು ಪತ್ರಿಕೆಯಲ್ಲಿ ವರದಿ ಬಂದಿತ್ತು ಆ ವರದಿಯ ಮೇಲೆ ಸುಪ್ರೀಂಕೋರ್ಟ್ʻವರೆಗೂ ಹೋಗಿ ಹೋರಾಟ ನಡೆಸಿತ್ತು ಆಗಿನ ಕಾಂಗ್ರೆಸ್ ಸರ್ಕಾರ. ಸುಪ್ರೀಂಕೋರ್ಟ್‌ನಲ್ಲಿ ಗೆದ್ದದ್ದವರು ರಾಮೋಜಿ ರಾವ್. ಕೊನೆಗೆ ಮೇಲ್ಮನೆಯನ್ನೇ ರದ್ದು ಮಾಡಿತ್ತು ಆಂಧ್ರಪ್ರದೇಶ.
ಎನ್.ಟಿ.ಆರ್. ಅವರ ತೆಲುಗುದೇಶಂ ಉತ್ಥಾನಕ್ಕೆ ಬೆನ್ನೆಲುಬಾಗಿದ್ದ ರಾಮೋಜಿರಾವ್, ಪತ್ರಿಕೋದ್ಯಮದಲ್ಲಿ ಸಾಧಿಸಿದ್ದು ಕಡಿಮೆ ಏನಲ್ಲ.
ರಮಾ ದೇವಿ ಪಬ್ಲಿಕ್ ಶಾಲೆ, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಷನ್, ಡಾಲ್ಫಿನ್ಸ್ ಹೋಟೆಲ್ಸ್.. ಹೀಗೆ ರಾಮೋಜಿ ರಾವ್ ಅವರ ಉದ್ಯಮ ಸಾಹಸಗಳು ಒಂದೆರಡಲ್ಲ. ಚಿತ್ರರಂಗಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿರುವ ರಾಮೋಜಿ ಫಿಲ್ಮ್ ಸಿಟಿಯ ಮೂಲಕ, ಸಿನಿಮಾ ಇಂಡಸ್ಟ್ರಿ ದೊಡ್ಡದಾಗಿ ಬೆಳೆಯಿತು. ಹಾಲಿವುಡ್ ಸ್ಟುಡಿಯೋ ಮಾದರಿಯಲ್ಲಿ ಕಟ್ಟಿದ ರಾಮೋಜಿ ಫಿಲ್ಮ್ ಸಿಟಿಗೆ ಸರಿಸಾಟಿಯಾಗುವ ಫಿಲ್ಮ್ ಸಿಟಿ ಇಡೀ ದೇಶದಲ್ಲೇ ಇಲ್ಲ.
ಕನ್ನಡದಲ್ಲಿ ಹಲವು ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದಾರೆ. ಉಷಾ ಕಿರಣ್ ಸಂಸ್ಥೆಯ ಮೂಲ ನೂರಾರು ಸಿನಿಮಾ ನಿರ್ಮಿಸಿದ್ಧಾರೆ. ಕನ್ನಡದಲ್ಲಿ ನಿನಗಾಗಿ (ವಿಜಯ್ ರಾಘವೇಂದ್ರ ಹೀರೋ ಆಗಿ ಮೊದಲ ಸಿನಿಮಾ, ರಾಧಿಕಾ ಕುಮಾರಸ್ವಾಮಿ), ಸಿಕ್ಸರ್ (ಪ್ರಜ್ವಲ್ ದೇವರಾಜ್ ಮೊದಲ ಸಿನಿಮಾ), ಊ ಲಾಲಾ, ಧೀರ, ಆನಂದ, ಸವಾರಿ (ರಘು ಮುಖರ್ಜಿ) ಸೇರಿದಂತೆ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ.



