ಶ್ರೀರಾಮ ಭಾರತದಲ್ಲಿ ಕೇವಲ ದೇವರಲ್ಲ. ಅದೊಂದು ನಂಬಿಕೆ. ಶ್ರೀರಾಮ ಕೇವಲ ಹಿಂದೂ ಧರ್ಮಕ್ಕೆ ಸೀಮಿತನಾದವನಲ್ಲ. ಶ್ರೀರಾಮ ಎಂದರೆ ಆದರ್ಶ. ಧರ್ಮವನ್ನು ಮೀರಿದವನು. ಹಾಗೆ ನೋಡಿದರೆ ಹಿಂದೂ ದೇವರು ಎಲ್ಲರನ್ನೂ ಪ್ರೀತಿಸ್ತಾರೆ. ಆರಾಧಿಸ್ತಾರೆ. ಹೀಗಾಗಿಯೇ ಶ್ರೀರಾಮನ ಭಕ್ತರಲ್ಲಿ ಭಕ್ತ ರಾಮದಾಸರೂ ಇದ್ದಾರೆ. ಸಂತ ಕಬೀರರೂ ಇದ್ಧಾರೆ. ಇಂತಹುದೇ ಒಂದು ರಾಮಜ್ಯೋತಿ ಯಾತ್ರೆ ಇದೀಗ ಕಾಶಿಯಲ್ಲಿ ಶುರುವಾಗಿದೆ.
ಕಾಶಿಯ ಮುಸ್ಲಿಂ ಮಹಿಳೆಯರ ರಾಮಜ್ಯೋತಿ ಯಾತ್ರೆ : ನಜ್ನೀನ್ ಅನ್ಸಾರಿ ಮತ್ತು ಡಾ.ನಜ್ಮಾ ಪರ್ವೀನ್ ರಾಮ ಭಕ್ತರು. ಇತ್ತೀಚೆಗಲ್ಲ. ಸುಮಾರು 20 ವರ್ಷಗಳಿಂದಲೂ ಇವರ ರಾಮಜಪ ಮಾಡುತ್ತಿದ್ಧಾರೆ. 2006ರಲ್ಲಿ ಭಯೋತ್ಪಾದಕರು ಕಾಶಿಯ ಸಂಕಟ್ ಮೋಚನ್ ದೇಗುಲದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದಾಗ ನಜ್ನೀನ್ ಮತ್ತು ಡಾ.ನಜ್ಮಾ ಅವರು 70 ಮುಸ್ಲಿಂ ಮಹಿಳೆಯರೊಂದಿಗೆ ಸಂಕತ್ ಮೋಚನ್ ದೇವಸ್ಥಾನಕ್ಕೆ ತೆರಳಿ ಹನುಮಾನ್ ಚಾಲೀಸಾ ಪಠಿಸಿದ್ದರು. ಹಿಂದೂ ಮುಸ್ಲಿಂ ದ್ವೇಷವನ್ನು ತೊಡೆದು ಹಾಕುವ ಪ್ರಯತ್ನವನ್ನಷ್ಟೇ ಅಲ್ಲ, ಭಯೋತ್ಪಾದಕರಿಗೆ ದಿಟ್ಟ ಸಂದೇಶವನ್ನೂ ರವಾನಿಸಿದ್ದರು. ಪ್ರತಿ ವರ್ಷ ರಾಮನವಮಿ ಮತ್ತು ದೀಪಾವಳಿಯಂದು ಅವರು ನೂರಾರು ಮುಸ್ಲಿಂ ಮಹಿಳೆಯರೊಂದಿಗೆ ಭಗವಾನ್ ಶ್ರೀರಾಮನ ಮಹಾ ಆರತಿಯನ್ನು ಮಾಡುತ್ತಾರೆ. ನಜ್ನೀನ್ ಅವರು ಹನುಮಾನ್ ಚಾಲೀಸಾವನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಡಾ. ನಜ್ಮಾ ಅವರು ಬಿಎಚ್‌ಯುನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪಿಎಚ್‌ಡಿ ಮಾಡಿದ್ದಾರೆ.
ಇಂತಹ ನಜ್ನೀನ್ ಅನ್ಸಾರಿ. ಮುಸ್ಲಿಂ ಮಹಿಳಾ ಪ್ರತಿಷ್ಠಾನದ ರಾಷ್ಟ್ರೀಯ ಅಧ್ಯಕ್ಷೆ. ರಾಮಪಂಥ್ ಆಯೋಜಿಸಿದ್ದ ರಾಮಜ್ಯೋತಿ ಯಾತ್ರೆಯ ನೇತೃತ್ವ ವಹಿಸಿ ಕಾಶಿಯಿಂದ ಅಯೋಧ್ಯೆಗೆ ಮುನ್ನಡೆಸಿದ್ದಾರೆ. ಮಹಾಂತ ಶಂಭು ಪ್ರಭು ದೇವಾಚಾರ್ಯ ಅವರಿಂದ ರಾಮಜ್ಯೋತಿ ಪಡೆದ ಆಕೆ, ಈ ದೇಶ ಶ್ರೀರಾಮ ಚಂದ್ರನ ಪುಣ್ಯಭೂಮಿ ಎಂದಿದ್ದಾರೆ. ಇದು ರಾಮನ ರಾಷ್ಟ್ರ. , ಅವನಿಲ್ಲದೆ ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ವಿವರಿಸಲು ಸಾಧ್ಯವಿಲ್ಲ. ಶಾಂತಿ ಮತ್ತು ಏಕತೆಗಾಗಿ ಪ್ರತಿ ಮನೆಯಲ್ಲೂ ರಾಮಜ್ಯೋತಿ ಬೆಳಗಿಸುವುದು ಅಗತ್ಯ. ನಾವು ರಾಮನ ಮಕ್ಕಳೇ. ಯಾವುದೇ ಕಾರಣಕ್ಕೂ ಅವನಿಂದ ಬೇರ್ಪಡುವುದು ಸಾಧ್ಯವಿಲ್ಲ. ಮುಸ್ಲಿಮರು ಈ ಸಂತೋಷದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ‘ ಎಂದು ಕರೆ ನೀಡಿದ್ದಾರೆ.



