ಹಸು ಸಾಕುವುದು, ಹಾಲು ಮಾರುವುದು ಬಹಳಷ್ಟು ರೈತ ಕುಟುಂಬಗಳ ಪರ್ಯಾಯ ಆದಾಯದ ಮೂಲ. ಅಂದರೆ ಮೂಲ ಕಸುಬಾಗಿ ಕೃಷಿ ಇದ್ದು, ಹಸು ಅಥವಾ ಎಮ್ಮೆ ಸಾಕುವುದು, ಅವುಗಳಿಂದ ಬಂದ ಹಾಲು, ಮೊಸರು, ಬೆಣ್ಣೆ ತುಪ್ಪವನ್ನು ಕುಟುಂಬಕ್ಕೆ ಇಟ್ಟುಕೊಂಡು ಉಳಿದಿದ್ದನ್ನು ಮಾರುವುದು ತಲೆತಲಾಂತರಗಳಿಂದಲೂ ರೈತರು ನಡೆಸಿಕೊಂಡು ಬಂದಿರುವ ಪದ್ಧತಿ. ಆದರೆ ಹಸು ಸಾಕುವುದನ್ನೇ ಆದಾಯ ಮಾಡಿಕೊಂಡು, ಅದನ್ನೇ ಬ್ಯುಸಿನೆಸ್ ಮಾಡಿಕೊಂಡಿರುವ ಯಶಸ್ವಿ ಉದ್ಯಮಿಯೊಬ್ಬರ ಕಥೆ ಇದು.
ಇವರ ಹೆಸರು ರಮೇಶ್ ರೂಪರೇಲಿಯಾ. ಗುಜರಾತಿನವರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಮೂರು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಿತ್ತು. ಅಂತಹ ರಮೇಶ್ ರೂಪರೇಲಿಯಾ, 80 ರೂ. ತಿಂಗಳ ಸಂಬಳಕ್ಕೆ ದನ ಕಾಯುತ್ತಿದ್ದರು. ಹೌದು, ದನ ಕಾಯುವುದು ಬೇರೇನೂ ಗೊತ್ತಿಲ್ಲದ ರಮೇಶ್, ತಿಂಗಳಿಗೆ 80 ರೂಪಾಯಿ ಮಾತ್ರ ದುಡಿಯುತ್ತಿದ್ದ ರಮೇಶ್, ಈಗ ವರ್ಷಕ್ಕೆ 8 ಕೋಟಿ ಬ್ಯುಸಿನೆಸ್ ಮಾಡುವ ಉದ್ಯಮಿ. ಈತನನ್ನು ಕೈ ಹಿಡಿದಿದ್ದು ಇದೇ ದನಕಾಯುವ ಕೆಲಸ ಎಂದರೆ ನಂಬಲೇಬೇಕು.
ರಮೇಶ್ ರೂಪರೇಲಿಯಾ ಅವರಿಗೆ ಸ್ವಂತ ಜಮೀನು ಇರಲಿಲ್ಲ. ಭೋಗ್ಯಕ್ಕೆ ಜಮೀನು ತೆಗೆದುಕೊಂಡು, ಬಾಡಿಗೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದವರು. ಅಂತಹ ಕೃಷಿಯಲ್ಲಿಯೇ ಒಮ್ಮೆ ಈರುಳ್ಳಿ ಬೆಳೆದು 35 ಲಕ್ಷ ಗಳಿಸಿದ್ದರು. ಆ 35 ಲಕ್ಷ ಲಾಭ ಪಡೆದ ನಂತರ ಅದನ್ನು ಹಸು ಸಾಕಣೆಗೆ ಬಂಡವಾಳವಾಗಿ ತೊಡಗಿಸಿದರು. ಅವರಿಗೆ ಸಂಗೀತ ಎಂದರೆ ಪ್ರಾಣ. ಹಸುಗಳು ಎಂದರೆ ಜೀವ. ಈ ಎರಡನ್ನೂ ಒಟ್ಟುಗೂಡಿಸಿ ಹುಟ್ಟುಹಾಕಿದ ಸಂಸ್ಥೆಯೇ ಶ್ರೀ ಗಿರ್ ಗೌ ಕೃಷಿ ಜತನ್ ಸಂಸ್ಥೆ ಎಂಬ ಗೋಶಾಲೆ. ಅದೇ ಈಗ ಬೃಹತ್ ಸಂಸ್ಥೆಯಾಗಿ ಬೆಳೆದಿದೆ.
ರಮೇಶ್ ರೂಪರೇಲಿಯಾ ಅವರ ಬಳಿ ಇರೋದು ಗಿರ್ ಹಸುಗಳು ಹೆಚ್ಚು. ಡೈರಿ ಉದ್ಯಮ ಆರಂಭಿಸಿದ ರಮೇಶ್ ಗೀರ್ ಹಸುವಿನ ಹಾಲಿನಿಂದ ತಯಾರಿಸಿದ ಸಾವಯವ ತುಪ್ಪವನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಸೈಕಲ್ ಮೇಲೆ ಹಳ್ಳಿ ಹಳ್ಳಿಗೆ ಹೋಗಿ ತುಪ್ಪ ಮಾರುತ್ತಿದ್ದರು. ಕ್ವಾಲಿಟಿ ಚೆನ್ನಾಗಿತ್ತು. ಹೀಗಾಗಿ ಬೇಡಿಕೆಯೂ ಹೆಚ್ಚಿತು. ತುಪ್ಪ ಉತ್ಪಾದನೆಯತ್ತ ಗಮನ ಹರಿಸಿದ ರಮೇಶ್, ತುಪ್ಪವನ್ನು ಸಾವಯವ ರೀತಿಯಲ್ಲೇ ಮಾಡುತ್ತಾರೆ. ಅಂದರೆ ಹಸುಗಳಿಗೆ ಕೊಡುವ ಆಹಾರದಲ್ಲಾಗಲೀ, ಬೇರೆಯ ಫುಡ್ಡುಕೊಡುವುದರಲ್ಲಾಗಲೀ ಕೆಮಿಕಲ್ ಬಳಸೋದಿಲ್ಲ. ಅಲ್ಲದೆ ತುಪ್ಪವನ್ನು ಹೆಚ್ಚು ದಿನ ಕೆಡದಂತೆ ಸಂಗ್ರಹಿಸುವ ವಿಧಾನವನ್ನೂ ಅಳವಡಿಸಿಕೊಂಡಿರುವ ರಮೇಶ್ ರೂಪರೇಲಿಯಾ ಈಗ 123 ದೇಶಗಳಿಗೆ ತುಪ್ಪ ರಫ್ತು ಮಾಡುತ್ತಿದ್ದಾರಂತೆ.
ಸದ್ಯ ಅವರ ಬಳಿ 250 ಗಿರ್ ಹಸುಗಳಿವೆ. ವರ್ಷಕ್ಕೆ ಸುಮಾರು ರೂ.8 ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಹಸುಗಳಿಗೆ ಸಂಗೀತ ಕೇಳಿಸುವ ರಮೇಶ್, ಅದರಿಂದಲೇ ಹಾಲಿನ ಉತ್ಪಾದನೆ ಹೆಚ್ಚಿದೆ ಎನ್ನುತ್ತಾರೆ.
ಅಂದಹಾಗೆ ರಮೇಶ್ ರೂಪರೇಲಿಯಾ ಅವರ ತುಪ್ಪದ ವ್ಯವಹಾರದಲ್ಲಿ ಹಿನ್ನಡೆ ಆಗಲೇ ಇಲ್ಲವೇ ಎಂದು ಪ್ರಶ್ನಿಸಿದರೆ ಹೌದು, ರಮೇಶ್ ಅವರಿಗೂ ಸವಾಲುಗಳಿದ್ದವು. ನಿಮ್ಮ ತುಪ್ಪದಲ್ಲಿ ಹಾಲಿನ ಕೆಟ್ಟ ವಾಸನೆ ಬರುತ್ತದೆ ಎಂದು ಹಲವರು ರಿಜೆಕ್ಟ್ ಮಾಡಿದ್ದರು. ಒಂದು ಹೊಸ ಉದ್ಯಮ ಆರಂಭಿಸಿದಾಗ ಈ ರೀತಿಯ ಮೂಲ ಸವಾಲುಗಳು ಎದುರಾದರೆ ಎದುರಿಸುವುದು ಕಷ್ಟ. ಆದರೆ ಅದಕ್ಕೆ ಒಂದು ಪರಿಹಾರ ಕಂಡುಕೊಂಡ ರಮೇಶ್ ರೂಪರೇಲಿಯಾ, ತುಪ್ಪವನ್ನು ಗಾಜಿನ ಬಾಟಲ್ಲುಗಳಿಗೆ ಬದಲಾಯಿಸಿದರು. ಜೊತೆಗೆ ಇನ್ನೂ ಒಂದಿಷ್ಟು ಉಪಕ್ರಮ ಕೈಗೊಂಡ್ರು. ವಾಸನೆ ಮಾಯವಾಯ್ತು. ತುಪ್ಪ ಕೈ ಹಿಡೀತು. ಲೈಫು ಅನ್ನೋದೇ ಹಾಗೆ.



