ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವೇದಿಕೆಯಲ್ಲಿ ಪಂಚಪೀಠದ ಗುರುಗಳ ಒಗ್ಗಟ್ಟು ಪ್ರದರ್ಶನದ ನಂತರ, ಟೀಕೆಗಳೂ ಜೋರಾಗಿವೆ. ರಂಭಾಪುರಿ ಶ್ರೀಗಳ ಒಂದು ಹೇಳಿಕೆಯ ವಿರುದ್ಧ ಪಂಚಮಸಾಲಿ, ದಲಿತ, ವಾಲ್ಮೀಕಿ ಮಠಾಧೀಶರು ಕೆರಳಿದ್ದಾರೆ. ಸಭೆಯಲ್ಲಿ ರಂಭಾಪುರಿ ಶ್ರೀಗಳು ಜಾತಿ ಆಧರಿತ ಮಠಗಳಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದರು ಎನ್ನವುದು ಪಂಚಮಸಾಲಿ, ದಲಿತ, ವಾಲ್ಮೀಕಿ ಮಠಾಧೀಶರ ಆರೋಪ. ಈ ಹೇಳಿಕೆ ವಿರುದ್ಧ ಎಲ್ಲ ಮಠಾಧೀಶರೂ ಸಿಡಿದೆದ್ದಿದ್ದಾರೆ.
ಹರಿಹರ ಪಂಚಮಸಾಲಿ ಪೀಠ, ವಚನಾನಂದ ಸ್ವಾಮೀಜಿ
ಪಂಚಪೀಠದವರದ್ದು ಮೈಕ್ರೋ ಜನಾಂಗವಾಗಿದ್ದರೆ, ಪಂಚಮಸಾಲಿ ಸಮಾಜದ್ದು ಮ್ಯಾಕ್ರೋ ಜನಾಂಗವಾಗಿದೆ. ರಾಜಕೀಯವಾಗಿ ಲಿಂಗಾಯತರಿಗೆ ಮತ್ತು ವೀರಶೈವರಿಗೆ ಅಸ್ತಿತ್ವ ಇದೆ. ಆದರೆ ಪೀಠದಲ್ಲಿ ಕುಳಿತವರ ತಪ್ಪು ಹೇಳಿಕೆ, ಮಾರ್ಗದರ್ಶನಗಳಿಂದ ಒಳ ಪಂಗಡಗಳು ಆಗುತ್ತವೆ. ಇನ್ಮುಂದೆ ಆಗಬಾರದು. ಚಿತ್ರದುರ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತಗೊಂಡಿದೆ. ಆದ್ದರಿಂದ ಉಳಿದ ಮಠಗಳನ್ನು ಜಾತಿ ಮಠಗಳು ಎಂದು ಕರೆದಿದ್ದಾರೆ. ಹೀಗೆ ಕರೆಯಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ.
ಕಾಗಿನೆಲೆ ಕನಕ ಗುರುಪೀಠ, ನಿರಂಜನಾನಂದಪುರಿ ಸ್ವಾಮೀಜಿ
ಹಿರಿಯರು, ವಯೋವೃದ್ಧರೂ ಆಗಿರುವ ಶ್ರೀಗಳು ತಮ್ಮ ಹೇಳಿಕೆ ಹಿಂಪಡೆಯಬೇಕು. ಜೊತೆಗೆ ಸಂಕುಚಿತ ಮನೋಭಾವ ಬಿಟ್ಟು, ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು
ರಾಜನಹಳ್ಳಿ ವಾಲ್ಮೀಕಿ ಪೀಠ, ಪ್ರಸನ್ನಾನಂದಪುರಿ ಸ್ವಾಮೀಜಿ
ಜಾತಿ ವ್ಯವಸ್ಥೆ ದೇಶದಲ್ಲಿದೆ. ಜಾತಿ ಕಾರಣಕ್ಕೆ ಸಮಾಜದಿಂದ ದೂರ ಉಳಿದ ಸಮುದಾಯಗಳು ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಮಠ ಕಟ್ಟಿಕೊಂಡು, ಸಮಾಜ ಸಂಘಟನೆ ಜೊತೆ ಸನ್ಮಾರ್ಗ ತೋರುತ್ತಿವೆ. ಸಾಮರಸ್ಯದ, ಸೌಹಾರ್ದತೆಯ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಹೀಗಿದ್ದರೂ ರಂಭಾಪುರಿ ಶ್ರೀಗಳ ಹೇಳಿಕೆ ನೀಡಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ.
ಮಾದಾರ ಚನ್ನಯ್ಯ ಪೀಠ, ಮಾದಾರ ಚನ್ನಯ್ಯ ಸ್ವಾಮೀಜಿ
ರಂಭಾಪುರಿ ಪೀಠಕ್ಕೆ ಧ್ಯೇಯವಿದೆ. ಮಾನವ ದರ್ಮಕ್ಕೆ ಜಯವಾಗಲಿ ಎನ್ನುವ ಪೀಠ ಅದು. ನಾವೆಲ್ಲಾ ಜಾತಿ, ಧರ್ಮದವರೂ ಇದ್ದೇವೆ. ಎಲ್ಲ ಜಾತಿ, ವರ್ಗ, ಸಮುದಾಯಗಳಿಗೆ ಗೌರವಿಸುವ ಕೆಲಸ ಮಾಡಿದರೆ ರಂಭಾಪುರಿ ಪೀಠಾಧ್ಯಕ್ಷರಿಗೂ ಗೌರವ. ಮಾನವ ಧರ್ಮಕ್ಕೆ ತದ್ವಿರುದ್ಧವಾಗಿ ರಂಭಾಪುರಿ ಶ್ರೀಗಳು ಹೇಳಿಕೆ ನೀಡಿರುವುದು ನಮ್ಮ ಮನಸ್ಸಿಗೆ ನೋವುಂಟು ಮಾಡಿದೆ.
ಭಗೀರಥ ಉಪ್ಪಾರ ಪೀಠ, ಪುರುಷೋತ್ತಮಾನಂದಪುರಿ ಸ್ವಾಮೀಜಿ
ಮೇಲ್ವರ್ಗದ ಸ್ವಾಮಿಗಳು ಶಿಕ್ಷಣ, ಸಂಸ್ಕಾರ ಎಲ್ಲರಿಗೂ ನೀಡಿದ್ದರೆ ಇಂದು ಜಾತಿ ಮಠಗಳೇ ಇರುತ್ತಿರಲಿಲ್ಲ. ರಂಭಾಪುರಿ ಸೇರಿದಂತೆ ಪೀಠಾಧೀಶರು ಹಿಂದುಳಿದ, ಶೋಷಿತ, ದಲಿತ ಸಮುದಾಯದವರನ್ನು ಪಕ್ಕಕ್ಕೂ ಕೂಡಿಸುವುದಿಲ್ಲ. ದಲಿತ ವರ್ಗದ ಎಷ್ಟು ಜನರನ್ನು ತಮ್ಮ ಮಠ, ಕಚೇರಿ, ಸಂಸ್ಥೆಗಳಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ..
ಭೋವಿ ಪೀಠ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ರಂಭಾಪುರಿ ಪೀಠದ ಲಾಂಛನಕ್ಕೆ ಗೌರವಪೂರ್ವಕ ಶರಣು. ಶ್ರೀಪೀಠ ಜಾತ್ಯತೀತವೇ? ಸ್ವಜಾತಿಯವರನ್ನು ಹೊರತುಪಡಿಸಿ ಎಷ್ಟು ಜನರಿಗೆ ದೀಕ್ಷೆ ಕೊಟ್ಟು, ಪೀಠಾಧ್ಯಕ್ಷರಾಗಿ ಮಾಡಿದ್ದೀರಿ.. ಶ್ರೀ ಪೀಠದ ಸಂಸ್ಥೆಗಳಲ್ಲಿ ರೋಸ್ಟರ್ ಹೊರತುಪಡಿಸಿ, ಎಷ್ಟು
ಜನ ಇತರೆ ಸಮುದಾಯದವರಿಗೆ ಉದ್ಯೋಗ ನೀಡಿದ್ದೀರಿ. ನಮ್ಮ ಮಠಗಳಿಗೆ ಕೊಟ್ಟ ಅನುದಾನ ಸಮಾಜಕ್ಕೆ ಸದ್ಬಳಕೆ ಮಾಡಿದ್ದೇವೆ. ನೀವು ಬೇಡ ಜಂಗಮ ಹೆಸರಿನಲ್ಲಿ ಪಡೆದ ಅನುದಾನ ಸರ್ಕಾರಕ್ಕೆ ವಾಪಸ್ ಕೊಡುತ್ತೀರಾ..?
ಹೀಗೆ ದಲಿತ ಮತ್ತು ಹಿಂದುಳಿದ ವರ್ಗದವರ ಮಠಗಳು ಟೀಕೆ ಮಾಡುತ್ತಿದ್ದಂತೆಯೇ ತಮ್ಮ ಹೇಳಿಕೆಗೆ ರಂಭಾಪುರಿ ಶ್ರೀಗಳು ಸ್ಪಷ್ಟನೆ ಕೊಟ್ಟಿದ್ದಾರೆ. ರಂಭಾಪುರಿ ಪೀಠದ ಡಾ। ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸ್ಪಷ್ಟನೆ ಇದು.
ನಮ್ಮ ಸಂಸ್ಕೃತಿ, ಪರಂಪರೆ, ಆದರ್ಶಗಳ ಬಗ್ಗೆ ಮಾತನಾಡಿದ್ದೇವೆ. ಇದರ ಹೊರತು, ಅನ್ಯ, ಬೇರೆ ಯಾವುದೇ ಜಾತಿಗಳ ಕುರಿತಂತೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿಯಲ್ಲಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ಮಾತನಾಡಿದ್ದೇನೆ. ಹಿಂದುಳಿದ, ದಲಿತ ಮಠಾಧೀಶರು ಅದನ್ನೇ ತಪ್ಪುಗ್ರಹಿಕೆ ಮಾಡಿಕೊಂಡು, ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವುದಕ್ಕೆ ವಿಷಾದಿಸುತ್ತೇವೆ. ತಮ್ಮ ಭಾಷಣದಲ್ಲಿ ಅವರವರ ಸಮುದಾಯದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪವಾಗಲೀ, ಅಲ್ಲಸಲ್ಲದ ಮಾತುಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ.
ಆದರೆ ವಿವಾದ ಮುಗಿದಿಲ್ಲ.



