ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ರಾಮನಗರದ ಬಿಡದಿ ಹೋಬಳಿಯ 10 ಗ್ರಾಮಗಳ ಸೇರ್ಪಡೆಯಾಗಿದೆ. ಬದಲಾಗಲಿದೆ ರಾಮನಗರ ಜಿಲ್ಲೆಯ ಬಿಡದಿಯ 10 ಗ್ರಾಮಗಳ ಭವಿಷ್ಯ. ಹೌದು, ಬಿಡದಿ ಹೋಬಳಿಯ 10 ಗ್ರಾಮಗಳಿಗೆ ʻಗ್ರೇಟರ್ ಬೆಂಗಳೂರು ಸಮಗ್ರ ಉಪನಗರʼ ಎಂದು ಕ್ಯಾಬಿನೆಟ್ ಅನುಮೋದಿಸಿದೆ. ಅದರ ಪ್ರಕಾರ ಬಿಡದಿ ಹೋಬಳಿಯ ಬನ್ನಿಗೆರೆ, ಹೊಸೂರು, ಕೆಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನ ಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಮತ್ತು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರೇಟರ್ ಬೆಂಗಳೂರಿಗೆ ಸೇರಲಿವೆ. 10 ಗ್ರಾಮಗಳ 8032 ಎಕರೆ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
2009ರ ಭೂ ಹಂಚಿಕೆ ಮಾದರಿಯಲ್ಲಿ ಶೇ.35-50 ಅಭಿವೃದ್ಧಿ ಹೊಂದಿದ ಭೂಮಿ ಮಾಲೀಕರಿಗೆ ಪರಿಹಾರ ಸಿಗಲಿದೆ. ಬೆಂಗಳೂರು ನಗರದ ವಾಹನ ಮತ್ತು ಜನ ದಟ್ಟಣೆ ತಪ್ಪಿಸಲು ಗ್ರೇಟರ್ ಬೆಂಗಳೂರು ಸಿಟಿ ಪ್ಲಾನ್ ಮಾಡಲಾಗುತ್ತಿದೆ.
ಒಟ್ಟು 8,943 ಎಕರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಬಿಡದಿ ಸಮಗ್ರ ಉಪನಗರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಪ್ರಕ್ರಿಯೆ ಆರಂಭಿಸಲು ತಾತ್ವಿಕ ಅನುಮೋದನೆ ನೀಡಲಾಗಿದ್ದು, ಯೋಜನೆ ಅನುಷ್ಠಾನಕ್ಕಾಗಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಕ್ಷಮ ಪ್ರಾಧಿಕಾರ, ಇಲಾಖೆ ಹಾಗೂ ಸಂಸ್ಥೆಗಳನ್ನು ಒಳಗೊಂಡ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ. ‘ವರ್ಕ್, ಲಿವ್ ಆ್ಯಂಡ್ ಪ್ಲೇ’ ಪರಿಕಲ್ಪನೆಯಲ್ಲಿ ಟೌನ್‌ಶಿಪ್ ವಿನ್ಯಾಸಗೊಳಿಸಲು ಜಾಗತಿಕ ಟೆಂಡರ್ ಕರೆದು ಅರ್ಹ ಸಂಸ್ಥೆ ನೇಮಕಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಬೆಂಗಳೂರಿನ ಜನದಟ್ಟಣೆ ತಪ್ಪಿಸಲು ನಗರ ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್‌ಗಳಾಗಿ ಅಭಿವೃದ್ಧಿ ಪಡಿಸುವುದು ಸರಕಾರದ ಆಶಯವಾಗಿದೆ. ಆಕರ್ಷಕ ನಗರಗಳನ್ನು ಅಭಿವೃದ್ಧಿ ಪಡಿಸಿ ಆ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಪ್ರಮುಖ ಉದ್ದೇಶ.
ಈ 10 ಗ್ರಾಮಗಳ ವ್ಯಾಪ್ತಿಯ 6,023 ಎಕರೆ 24 ಗುಂಟೆ ಸಾಗುವಳಿ ಭೂಮಿ, 101 ಎಕರೆ ‘ಎ’ ಖರಾಬು ಮತ್ತು 2,818 ಎಕರೆ ‘ಬಿ’ ಖರಾಬು ಒಳಗೊಂಡು ಒಟ್ಟು 8,943 ಎಕರೆ ಪ್ರದೇಶದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಖಾತೆ ಹೊಂದಿರುವ ನಿವೇಶನ, ವಸತಿ ಪ್ರದೇಶ, ಶಾಲೆ/ಕಾಲೇಜು, ಕೆರೆ, ಸ್ಮಶಾನ ಮತ್ತಿತರ ಸಾರ್ವಜನಿಕ ಜಾಗಗಳನ್ನು ಯಥಾವತ್ತಾಗಿ ಕಾಯ್ದಿರಿಸಿ ಉಳಿದ ಪ್ರದೇಶದಲ್ಲಿ ಯೋಜನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಪ್ರಕ್ರಿಯೆ ಕೈಗೊಳ್ಳಲಾಗುವುದು.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಒಟ್ಟು 5,678 ಎಕರೆ 32 ಗುಂಟೆ (2,298 ಹೆಕ್ಟೇರ್) ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮದಡಿ ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯಿಸಿದೆ.



