ರಾಮಕೃಷ್ಣ ಮಿಷನ್ ಹಾಗೂ ಭಾರತ್ ಸೇವಾಶ್ರಮಗಳ ವಿರುದ್ಧ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇರ ಆರೋಪ ಮಾಡಿದ್ಧಾರೆ. ಎರಡೂ ಸಂಘಟನೆಗಳು ಬಿಜೆಪಿ ಹೇಳಿದಂತೆ ಕೇಳುತ್ತಿವೆ ಎಂದು ದೂಷಿಸಿದ್ದಾರೆ. ಇದು ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ನೇರಾನೇರ ಸವಾಲು ಹಾಕುವಂತೆ ಮಾಡಿದೆ.
ಮಮತಾ ಬ್ಯಾನರ್ಜಿ ಹೇಳಿದ್ದು :
ಭಾರತ ಸೇವಾಶ್ರಮ ಸಂಘದ ಸನ್ಯಾಸಿ ಕಾರ್ತಿಕ್ ಮಹಾರಾಜ್ (ಸ್ವಾಮಿ ಪ್ರದೀಪ್ತಾನಂದ ಎಂದೂ ಕರೆಯುತ್ತಾರೆ) ತಮ್ಮ ಮತಗಟ್ಟೆಯಲ್ಲಿ ಯಾವುದೇ ಟಿಎಂಸಿ ಏಜೆಂಟ್‌ಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ. ಅವರು ದೆಹಲಿ ಬಿಜೆಪಿ ನಾಯಕರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದಾರೆ. ನಾನು ಭಾರತ್ ಸೇವಾಶ್ರಮ ಸಂಘವನ್ನು ತುಂಬಾ ಗೌರವಿಸುತ್ತಿದ್ದೆ. ಇದು ಬಹಳ ಹಿಂದಿನಿಂದಲೂ ಇರುವ ಗೌರವಾನ್ವಿತ ಸಂಸ್ಥೆಗಳಲ್ಲೊಂದು. ಆದರೆ ಇಂಥ ಕಾರ್ತಿಕ್ ಮಹಾರಾಜ್ʻನನ್ನು ನಾನು ಸಂತನೆಂದು ಪರಿಗಣಿಸುವುದಿಲ್ಲ. ಏಕೆಂದರೆ ಅವರು ರಾಜಕೀಯ ಮಾಡುತ್ತ ದೇಶ ಹಾಳು ಮಾಡುತ್ತಿದ್ದಾರೆ. ಅಲ್ಲದೆ.. ‘ರಾಮಕೃಷ್ಣ ಮಿಷನ್‌ಗೆ ಕೂಡ ದೆಹಲಿಯಿಂದ ಸೂಚನೆಗಳು ಬಂದಿವೆ. ಬಿಜೆಪಿಗೆ ಮತ ಹಾಕುವಂತೆ ಭಕ್ತರಿಗೆ ಹೇಳುವಂತೆ ನಿಮ್ಮ ಸನ್ಯಾಸಿಗಳಿಗೆ ಹೇಳಿ ಎಂಬ ಸೂಚನೆಗಳು ಅವರಿಗೆ ಸಿಕ್ಕಿವೆ. ಸನ್ಯಾಸಿಗಳು ಮತ್ತು ಸಂತರು ಈ ಕೆಲಸಗಳನ್ನು ಏಕೆ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ ಮಮತಾ.
ಸಿಪಿಎಂ ಸರ್ಕಾರ ಇದ್ದಾಗ ರಾಮಕೃಷ್ಣ ಮಿಷನ್ ಆಹಾರ ಪೂರೈಕೆ ಮಾಡುವುದಕ್ಕೆ ತಡೆ ಒಡ್ಡಲಾಗಿತ್ತು. ನಾನು ಅದನ್ನು ವಿರೋಧಿಸಿದೆ. ಇನ್ನು ಇಸ್ಕಾನ್‌ಗೆ 700 ಎಕರೆ ಭೂಮಿ ನೀಡಿದ್ದೇನೆ. ಅಲ್ಲದೆ ಸ್ವಾಮಿ ವಿವೇಕಾನಂದರ ಪೂರ್ವಜರ ಆಸ್ತಿಗಳನ್ನು ಅನ್ಯರು ಲೂಟಿ ಮಾಡದಂತೆ ತಡೆದು ರಾಮಕೃಷ್ಣ ಮಿಷನ್‌ಗೆ ಒಪ್ಪಿಸಿದ್ದೇ ತಾವು ಎಂದು ಕೂಡಾ ಹೇಳಿಕೊಂಡಿದ್ಧಾರೆ.
ಇದಕ್ಕೆ ತಿರುಗೇಟು ನೀಡಿರುವ ಮೋದಿ ನಿಮಗೆ ಇಂಥ ಹೇಳಿಕೆ ನೀಡಲು ಎಷ್ಟು ಧೈರ್ಯ ಎಂದಿದ್ದಾರೆ. ಟಿಎಂಸಿ ತನ್ನ ಮುಸ್ಲಿಂ ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಈ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ವಿರುದ್ಧ ಬೆದರಿಕೆ ಹಾಕಲು ಆರಂಭಿಸಿದೆ’ ಎಂದು ಗುಡುಗಿದ್ದಾರೆ. ಸ್ಕಾನ್, ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಟಿಎಂಸಿ ತುಂಬಾ ಕೆಳಮಟ್ಟಕ್ಕಿಳಿಯುವ ಮೂಲಕ ಸಭ್ಯತೆಯ ಮಿತಿ ದಾಟಿದೆ. ದೇಶ ಮತ್ತು ವಿಶ್ವದಲ್ಲಿ ಇಸ್ಕಾನ್, ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘ ಸೇವೆ ಮತ್ತು ನೈತಿಕತೆಗೆ ಹೆಸರಾಗಿವೆ. ಆದರೆ ಬಂಗಾಳ ಮುಖ್ಯಮಂತ್ರಿ ತೆರೆದ ವೇದಿಕೆಯಲ್ಲೇ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಕೇವಲ ತಮ್ಮ ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಅಂದಹಾಗೆ ಈ ಎರಡೂ ಸಂಘಟನೆಗಳಿಗೆ ಶತಮಾನಗಳಿಗಿಂತಲೂ ದೊಡ್ಡದಾದ ಇತಿಹಾಸ ಇದೆ.
ಭಾರತ್ ಸೇವಾಶ್ರಮ ಸಂಘದ ಚರಿತ್ರೆ :
ಭಾರತ್ ಸೇವಾಶ್ರಮ ಸಂಘ ಸ್ಥಾಪನೆಯಾಗಿದ್ದು 1917ರಲ್ಲಿ. ಹಿಂದೂ ಧಾರ್ಮಿಕ ಸಂಘಟನೆ. ಆಚಾರ್ಯ ಶ್ರೀಮತ್ ಸ್ವಾಮಿ ಪ್ರಣವಾನಂದ ಮಹಾರಾಜ್ ಅವರಿಂದ ಸ್ಥಾಪನೆಯಾಯ್ತು, ಇದರ ಕೇಂದ್ರ ಕಚೇರಿ ಇರುವುದು ಕೋಲ್ಕತ್ತಾದಲ್ಲಿ. ಭಾರತದಲ್ಲಿಯೇ ಈ ಸಂಘದ 300ಕ್ಕೂ ಹೆಚ್ಚು ಶಾಖೆಗಳಿವೆ. ಅಮೆರಿಕ, ಬ್ರಿಟನ್, ಗಯಾನಾ, ಟ್ರಿನಿಡಾಡ್, ಕೆನಡಾ, ಬಾಂಗ್ಲಾದೇಶ, ಮಲೇಷಿಯಾ, ಇಂಡೋನೇಷ್ಯಾಗಳಲ್ಲಿ ಭಾರತ್ ಸೇವಾಶ್ರಮ ಸಂಘದ ಶಾಖೆಗಳೆವೆ. ಬೆಂಗಳೂರಿನಲ್ಲೂ ಇದೆ.
ಈ ಸಂಘಟನೆಯಲ್ಲಿ ರಾಜಕೀಯ ಚರ್ಚೆಗೇ ಬರುವುದಿಲ್ಲ. ಜಾತಿ, ವರ್ಗಗಳನ್ನೂ ಮೀರಿದ ಸಂಘಟನೆ ಇದು. ಕೋವಿಡ್, ಪ್ರವಾಹದಂತಹ ದುರಂತಗಳಲ್ಲಿ ಸೇವೆಗೆ ಬರುವ ಸಂಘಟನೆ ಸದಸ್ಯರು, ದೇಶದ ಹಲವು ಕಡೆ ಆಸ್ಪತ್ರೆ ನಡೆಸುತ್ತಿದ್ಧಾರೆ. ಕುಷ್ಟ ರೋಗ ಸೇರಿದಂತೆ ಹಲವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ಧಾರೆ. ಉಳಿದಂತೆ ಕುಂಭಮೇಳ ಮೊದಲಾದ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ರಾಮಕೃಷ್ಣ ಮಿಷನ್ : ರಾಮಕೃಷ್ಣ ಪರಮಹಂಸರ ದಾರಿಯಲ್ಲಿ ಸಾಗುವ ಆಸೆ ಹೊತ್ತು ಸ್ವಾಮಿ ವಿವೇಕಾನಂದರಿಂದ ಸ್ಥಾಪನೆಯಾದ ಸೇವಾ ಸಂಸ್ಥೆ ರಾಮಕೃಷ್ಣ ಮಠ ಅಥವಾ ರಾಮಕೃಷ್ಣ ಮಿಷನ್. 1897ರಲ್ಲಿ ಸ್ಥಾಪನೆಯಾದ ಸಂಸ್ಥೆಗೆ 127 ವರ್ಷಗಳ ಇತಿಹಾಸವಿದೆ.
ಹಿಂದೂ ಧರ್ಮದ ಮೂಲ ಶಕ್ತಿಗಳಾದ ವೇದ, ಯೋಗದ ಪ್ರಚಾರ ಮಾಡುವ ಸಂಸ್ಥೆ, ಶಿಕ್ಷಣದಲ್ಲಿ ದೊಡ್ಡ ಹೆಸರು ಮಾಡಿದೆ. ಪ.ಬಂಗಾಳದಲ್ಲಿ ಸಿಪಿಎಂ ಅಧಿಕಾರದಲ್ಲಿದ್ಧಾಗ ಮಠದಲ್ಲಿ ಸರ್ಕಾರದ ಪ್ರತಿನಿಧಿಗಳನ್ನು ಸೇರ್ಪಡೆ ಮಾಡುವ ಮೂಲಕ ಹತೋಟಿಗೆ ತೆಗೆದುಕೊಂಡಿದೆ. ಮೋದಿಯವರ ಬದುಕಿನಲ್ಲಿಯೂ ಈ ಆಶ್ರಮದ ಪ್ರಭಾವ ಇದೆ.



