ರಕ್ಷಿತ್ ಶೆಟ್ಟಿ (Rakshith Shetty) ಚೆಂದ ಕಥೆ ಹೇಳ್ತಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಸದ್ಯಕ್ಕೆ ರಿಚರ್ಡ್ ಆಂಟನಿ (Richard Antony) ಚಿತ್ರದ ಸ್ಕ್ರಿಪ್ಟ್ ವರ್ಕಿನಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ಸಪ್ತಸಾಗರದಾಚೆ ಎಲ್ಲೋ ಸಿನಿಮ ರಿಲೀಸ್ ಡೇಟ್ ಘೋಷಿಸಿರುವ ರಕ್ಷಿತ್ ಶೆಟ್ಟಿ ಒಂದು ವಿಡಿಯೋ ಬಿಟ್ಟಿದ್ದಾರೆ. ಆ ವಿಡಿಯೋದಲ್ಲಿ ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗಳಿಗೆ ಸ್ಪೂರ್ತಿ ಕರಾವಳಿ ಸೃಷ್ಟಿಕರ್ತನಾದ ಪರಶುರಾಮ ಮತ್ತು ಅವರ ಕೊಡಲಿ ಅರ್ಥಾತ್ ಪರಶು ಎಂದು ಹೇಳಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ‘ನಾ ಕಂಡಂತೆ’ ಎಂಬ ಒಂದು ಸಂವಾದಾತ್ಮಕ ಸರಣಿಯನ್ನು ಪ್ರಾರಂಭಿಸುತ್ತಿದ್ದಾರೆ. ಹೀಗಾಗಿ ತನ್ನ ಅಭಿಮಾನಿಗಳನ್ನು ಈ ಸಂವಾದ ಸರಣಿಯಲ್ಲಿ ಭಾಗಿಯಾಗಿ ಎಂದು ಆಹ್ವಾನಿಸಿದ್ದಾರೆ. ಇದೊಂದು ಕಥಾ ಪ್ರಪಂಚ. ಸೃಷ್ಟಿಸಿರುವುದು ರಕ್ಷಿತ್ ಶೆಟ್ಟಿ.
ತಮ್ಮ ಆಹ್ವಾನಪತ್ರಿಕೆಯಲ್ಲಿ ರಕ್ಷಿತ್ ಶೆಟ್ಟಿ ಉಡುಪಿಯ ಅನಂತೇಶ್ವರ ದೇಗುಲ (Udupi Anantheshwara Temple) ಅದನ್ನು ಸ್ಥಾಪಿಸಿದ ಪರಶುರಾಮರ ಕಥೆ, ಸಂಪೂರ್ಣ ಅಂಗಡಿಯಲ್ಲಿ ಸಿಗುತ್ತಿದ್ದ 5 ರೂಪಾಯಿ ಚಾಕ್ಲೇಟುಗಳ ಕಥೆಯನ್ನೆಲ್ಲ ಹೇಳ್ತಾರಂತೆ. ಗುರುಪೂರ್ಣಿಮೆಯ (Guru Poornima) ದಿನ ಅವರು ಘೋಷಿಸಿರುವ ‘ನಾ ಕಂಡಂತೆ’ ಸರಣಿ ಮುಂದಿನ ದಿನಗಳಲ್ಲಿ ನಮ್ಮ ಪುರಾಣ, ಇತಿಹಾಸವನ್ನು ಇಂದಿನ ಕಥೆಗೆ ಅಳವಡಿಸಿಕೊಳ್ಳುವ ಪ್ರಯತ್ನ. ‘ನನ್ನ ಈ ಕಥಾಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ’ ಎನ್ನುವ ಮೂಲಕ ಈ ಬಗ್ಗೆ ಮುಕ್ತ ಚರ್ಚೆ ನಡೆಯಲಿ ಅನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಗಲಿರುಳೂ ಕ್ರಿಯೇಟಿವಿಟಿಗೆ ತುಡಿಯುವ ಶೆಟ್ಟರ ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.



