ಕನ್ನಡದಲ್ಲಿ ಸೂಪರ್ ಮ್ಯಾನ್ ಚಿತ್ರಗಳು ಅಪರೂಪದಲ್ಲಿ ಅಪರೂಪ ಎನ್ನಬಹುದು. ಒಂದು ಲೆಕ್ಕದಲ್ಲಿ ಅಂಬರೀಷ್ ಅಭಿನಯದ ಜೈ ಕರ್ನಾಟಕ ಬಿಟ್ಟರೆ, ಮಿಕ್ಯಾವ ಸ್ಟಾರ್ ನಟರೂ ಸೂಪರ ಮ್ಯಾನ್ ಅವತಾರದಲ್ಲಿ ಕಾಣಿಸಿಕೊಂಡಿಲ್ಲ. ಹಾಗೆ ನೋಡಿದರೆ ಹಿಂದಿ ಸೇರಿದಂತೆ ಭಾರತೀಯ ಭಾಷೆಗಳಲ್ಲಿಯೇ ಸೂಪರ್ ಮ್ಯಾನ್ ಅವತಾರ ಕಡಿಮೆ ಎಂದೇ ಹೇಳಬೇಕು. ಹೃತಿಕ್ ರೋಷನ್ ಅವರ ಕೃಷ್, ಶಾರೂಕ್ ಖಾನ್ ಅಭಿನಯದ ರಾ ಒನ್, ರಜನಿಕಾಂತ್ ಅಭಿನಯದ ರೋಬೋ ಸರಣಿಗಳನ್ನು ಸೇರಿಸಬಹುದು. ಆದರೆ ಕೃಷ್ ಬಿಟ್ಟರೆ, ಉಳಿದ ಚಿತ್ರಗಳು ಸೈಂಟಿಫಿಕ್ ಫಿಕ್ಷನ್ʻಗಳಾಗುತ್ತವೆ. ಆದರೆ ಇದೀಗ ಆ ಬರ ನೀಗಿಸುವುದಕ್ಕೆ ಬಘೀರ ಬರುತ್ತಿದ್ದಾನೆ.
ದೇವರು ಯಾಕೆ ರಾಮಾಯಣ, ಮಹಾಭಾರತ ಅಂತ ಒಂದೊಂದ್ಸಲ ಬರ್ತಾನೆ. ಎಲ್ಲ ಸಮಯದಲ್ಲೂ ಬರೋದಿಲ್ಲ ಅನ್ನೋ ಪ್ರಶ್ನೆ ಕೇಳುತ್ತೆ ಮಗು. ಸಮಾಜದ ಮೇಲೆ ಪಾಪಗಳು ಮಿತಿ ಮೀರಿದಾಗ.. ಒಳ್ಳೆಯದರ ಮೇಲೆ ಕೆಟ್ಟದ್ದು ಸವಾರಿ ಮಾಡುವಾಗ.. ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಾಳಾದಾಗ.. ಅವನು ಅವತಾರ ಎತ್ತುತ್ತಾನೆ..
ವಾಸ್ತವದಲ್ಲಿ ಬಘೀರ ಟ್ರೇಲರ್ ಶುರುವಾಗುವುದೇ ಸುಧಾರಾಣಿಯ ಧ್ವನಿಯಿಂದ. ಅಲ್ಲಿಂದಾಚೆಗೆ ಟ್ರೇಲರಿನಲ್ಲಿ ದೃಶ್ಯ ವೈಭವ, ಶ್ರೀಮುರಳಿಯ ಆರ್ಭಟ ನಡೆಯುತ್ತೆ. ಹಾಗಾದರೆ ಇದು ಸೂಪರ್ ಮ್ಯಾನ್, ಸೂಪರ್ ಪವರ್ ಇರುವ ವ್ಯಕ್ತಿಯ ಚಿತ್ರವೇನಲ್ಲ. ಚಿತ್ರದ ಟ್ರೇಲರಿನಲ್ಲಿಯೇ ನೋಡುಗರಿಗೆ ವಿಷ್ಯುಯಲ್ ಟ್ರೀಟ್ ಮೆಂಟ್ ಸಖತ್ತಾಗಿ ಸಿಕ್ಕಿದೆ. ಆದರೆ ಬಘೀರನಿಗೆ ಕ್ರಿಷ್, ಹಿಂದಿಯ ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್ ವುಮೆನ್, ಹೀ ಮ್ಯಾನ್ ರೀತಿಯ ಯಾವುದೇ ವಿಶೇಷ ಶಕ್ತಿಗಳಿಲ್ಲ. ಕೇವಲ ಆಕ್ರೋಶ ಇರುತ್ತದೆ, ಅಷ್ಟೇ.
ಚಿತ್ರದಲ್ಲಿ ಶ್ರೀಮುರಳಿ ಸೂಪರ್ ಕಾಪ್ ಆಗಿರ್ತಾರೆ. ಆತನೇ ಸೂಪರ್ ಮ್ಯಾನ್. ಸ್ಪೆಷಲ್ ಪವರುಗಳಿಲ್ಲದೆಯೂ ದುಷ್ಟ ಸಂಹಾರ ಮಾಡುವ ಶ್ರೀಮುರಳಿ, ಟ್ರೇಲರಿನಲ್ಲಿ ಹೆಚ್ಚು ಕಾಣಿಸಿಕೊಳ್ತಾರೆ. ಅವರನ್ನು ಬಿಟ್ಟರೆ ಸುಧಾರಾಣಿ. ಉಳಿದಂತೆ ನಾಯಕಿ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ರಂಗಾಯಣ ರಘು, ಗರುಡಾ ರಾಮ್ ಕಾಣಿಸಿಕೊಳ್ತಾರೆ. ಟ್ರೇಲರಿನಲ್ಲೇ ಹೈಲೈಟ್ ಆಗ್ತಾರೆ ಅನ್ನೋದು ಬಘೀರ ಟ್ರೇಲರ್ ಗೆದ್ದಿರೋದಕ್ಕೆ ಸಾಕ್ಷಿ. ಇನ್ನು ಟ್ರೇಲರಿನಲ್ಲಿ ಗಮನ ಸೆಳೆಯೋದು ಅಜನೀಶ್ ಲೋಕನಾಥ್ ಸಂಗೀತ.
ಅಷ್ಟರಮಟ್ಟಿಗೆ ಒಂದು ಟ್ರೇಲರ್ ಯಾವ ರೀತಿ ಕುತೂಹಲ ಹುಟ್ಟಿಸಬಹುದೋ.. ಅಷ್ಟನ್ನೂ ಮಾಡಲಾಗಿದೆ. ಹೊಂಬಾಳೆ ಫಿಲಂಸ್‌ನವರು ಮತ್ತೊಂದು ಭರ್ಜರಿ ಹಿಟ್ ಕೊಡೋ ಸೂಚನೆ ಕೊಡ್ತಿದ್ದಾರೆ. ಶ್ರೀಮುರಳಿ ಕಳೆದೆರಡು ವರ್ಷಗಳಿಂದ ಇದ್ದ ಸಿನಿಮಾ ಬರವನ್ನು ಈ ಚಿತ್ರದಿಂದ ನೀಗಿಸುವ ಉತ್ಸಾಹವಂತೂ ಟ್ರೇಲರಿನಲ್ಲಿ ಗೋಚರಿಸುತ್ತಿದೆ. ದೀಪಾವಳಿ ಪ್ರಯುಕ್ತ ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ. ಅಲ್ಲಲ್ಲಿ ‘ಕೆಜಿಎಫ್’ನಂತೆ ಬ್ಲ್ಯಾಕ್ಶೇಡ್ನಲ್ಲಿ ಸಿನಿಮಾ ಮೂಡಿ ಬಂದಿದೆ. ಪ್ರಶಾಂತ್ ನೀಲ್ ಕಥೆ ಎಂದ ಮೇಲೆ ಅಷ್ಟು ಕತ್ತಲು ಇರಬೇಕು ಎನ್ನುವ ತಮಾಷೆಯ ನಡುವೆಯೂ, ಟ್ರೇಲರ್ ಬಗ್ಗೆ ನೋಡಿದವರಿಂದ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಕ್ಕೆ ಇದು ಪ್ಲಸ್ ಪಾಯಿಂಟ್.
ಬಘೀರ ಟ್ರೇಲರ್ʻನಲ್ಲಿ ನಿರ್ದೇಶಕ ಡಾ.ಸೂರಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಕಥೆ ಏನು ಅನ್ನೋದು ಗೊತ್ತಾಗುತ್ತದೆ. ಪ್ರಶಾಂತ್ ನೀಲ್ ಕಥೆ ಏನಿದೆ ಅನ್ನೋದರ ಸುಳಿವು ಸುಲಭವಾಗಿ ಸಿಗುತ್ತದೆ. ಕಥೆ ಹೇಗೆ ಹೇಳಿದ್ದೇವೆ ಅನ್ನೋದರ ಕುತೂಹಲ ಹುಟ್ಟಿಸುತ್ತದೆ ಬಘೀರ ಟ್ರೇಲರ್.



