ಒಂದೇ ಸಿನಿಮಾ. ಒಂದೇ ಭಾಷೆ. ಆದರೆ ರಾಜ್ಯ ಬೇರೆ ಬೇರೆಯಾದಾಗ ಲೂಟಿಯೂ ಬೇರೆ ಬೇರೆಯಾಗಿರುತ್ತಾ..? ನೀವು ದೆಹಲಿಯಲ್ಲಿ ಯಾವುದಾದರೂ ಒಂದು ಮಾಲ್`ನಲ್ಲಿ ಒಂದು ಬ್ರಾಂಡೆಡ್ ಚಾಕೊಲೇಟ್`ನ್ನೋ.. ಪೆಪ್ಸಿಯನ್ನೋ.. ಶೂ ಅಥವಾ ಚಪ್ಪಲಿಯನ್ನೋ ಬಟ್ಟೆಯನ್ನೋ, ಆಹಾರವನ್ನೋ ಕೊಂಡುಕೊಳ್ಳಿ. ದೆಹಲಿಯಲ್ಲಾಗಲೀ, ಬೆಂಗಳೂರಿನಲ್ಲಾಗಲೀ.. ಒಂದೇ ರೇಟ್ ಇರುತ್ತಲ್ವಾ? ಆದರೆ ಸಿನಿಮಾಗಳಲ್ಲಿ ಮಾತ್ರ ಬೇರೆ ಬೇರೆ ಬೇರೆ ಹೇಗೆ.. ಕರ್ನಾಟಕದ ಪ್ರೇಕ್ಷಕರ ಮೇಲೆ ಮಾತ್ರ ಹಗಲು ದರೋಡೆಯಾಗುತ್ತೆ ಏಕೆ..?
ಜೈಲರ್. ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ರಜನಿ ಚಿತ್ರಗಳೆಂದರೆ ರಿಲೀಸ್ ಹಬ್ಬವಾಗುತ್ತದೆ. ನೂರಾರು ಅಭಿಮಾನಿಗಳು ಅಂದರೆ ಕಂಪೆನಿಗಳ ಮಾಲೀಕರು, ತಮ್ಮ ತಮ್ಮ ಕಂಪೆನಿಗಳ ಸಿಬ್ಬಂದಿಗೆಲ್ಲ ಟಿಕೆಟ್ ಕೊಡಿಸಿ, ರಜೆ ಕೊಟ್ಟಿದ್ದಾರೆ. ಇಂಥದ್ದೆಲ್ಲ ಆಗುವುದು ರಜನಿ ಚಿತ್ರಗಳಿಗೆ ಮಾತ್ರ. ಚಿತ್ರದ ಬಿಡುಗಡೆಗೆ ಮುನ್ನವೇ ಚಿತ್ರಕ್ಕೆ ಹಾಕಿದ್ದ ಬಂಡವಾಳವೆಲ್ಲ ವಾಪಸ್ ಆಗಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ರಜನಿಕಾಂತ್ ಚಿತ್ರವನ್ನು ಬೆಂಗಳೂರು ಅಥವಾ ಕರ್ನಾಟಕದಲ್ಲಿ ನೋಡಬೇಕು ಎಂದರೆ ಮಿನಿಮಮ್ ರೇಟು 500 ರೂ.ನಿಂದ ಶುರುವಾಗುತ್ತೆ. 500 ರೂ.ಗಿಂತ ಕಡಿಮೆ ಟಿಕೆಟ್ ಸಿಗುತ್ತಿಲ್ಲ. ಎರಡೂ..ಎರಡೂವರೆ ಸಾವಿರ ರೂ.ವರೆಗೂ ಟಿಕೆಟ್ ರೇಟ್ ಇದೆ. ಆದರೆ ಇದು ಕರ್ನಾಟಕದಲ್ಲಿ ಮಾತ್ರ. ತಮಿಳುನಾಡಿಗೆ ಹೋದರೆ, ಅಲ್ಲಿ ಎಲ್ಲಿಯೇ ಆದರೂ ಟಿಕೆಟ್ ರೇಟ್ ಜಸ್ಟ್ 190 ರೂಪಾಯಿ. ಅಷ್ಟೆ. ಮಿನಿಮಮ್ ರೇಟು 60 ರೂಪಾಯಿ. ಚೆನ್ನೈನಲ್ಲೂ ಅಷ್ಟೆ. ತಮಿಳುನಾಡಿನ ಯಾವ ನಗರಕ್ಕೆ ಹೋದರೂ ಅಷ್ಟೆ. ಮಲ್ಟಿಪ್ಲೆಕ್ಸಿಗೆ ಹೋದರೂ ಅಷ್ಟೆ, ಥಿಯೇಟರ್`ಗೆ ಹೋದರೂ ಅಷ್ಟೇ. ರೇಟ್ 190 ರೂ. ದಾಟುವಂತಿಲ್ಲ.
ಆಂಧ್ರಪ್ರದೇಶದಲ್ಲೂ ಅಷ್ಟೇ. ಮ್ಯಾಕ್ಸಿಮಮ್ 350 ರೂಪಾಯಿ. ಗರಿಷ್ಠ ದರವನ್ನು 350 ರೂ. ಮಾಡುವುದಕ್ಕೆ ಸರ್ಕಾರದ ವಿಶೇಷ ಅನುಮತಿಯೂ ಬೇಕು. ಬಜೆಟ್ ಲೆಕ್ಕ ಹೇಳಬೇಕು. ಇಷ್ಟಕ್ಕೂ ಕನ್ನಡಿಗರ ಲೂಟಿಗೆ ಏನು ಕಾರಣ?
ಏಕೆಂದರೆ ಅಲ್ಲಿನ ಸರ್ಕಾರಗಳು ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಿಗೆ ಮೂಗುದಾರ ಹಾಕಿವೆ. ಸ್ಟಾರ್ ನಟರೂ ಇಂತಹುದ್ದಕ್ಕೆಲ್ಲ ಬೆಂಬಲವಾಗಿದ್ದಾರೆ. ಅಲ್ಲಿನ ಚೇಂಬರ್ ಕೂಡಾ ಸಿನಿಮಾ ಪ್ರೇಕ್ಷಕರ ಪರವಾಗಿದೆ. ಇಲ್ಲಿನ ಪರಿಸ್ಥಿತಿ ವಿಭಿನ್ನ. ಇಲ್ಲಿ ಸರ್ಕಾರಗಳು, ಚಿತ್ರೋದ್ಯಮದ ಸಂಘಟನೆಗಳು ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಮಾಲೀಕರು, ಉದ್ಯಮಿಗಳು ಹೇಳಿದಂತೆ ಕೇಳುತ್ತವೆ. ಸರ್ಕಾರವೇ ಮೂಗುದಾರ ಹಾಕಿಸಿಕೊಂಡಿದೆ. ಹೀಗಾಗಿ.. ಕನ್ನಡ ಸಿನಿಮಾ ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕುತ್ತಲೇ ಇವೆ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳು.
ಇದು ತಮಿಳು ಚಿತ್ರರಂಗಕ್ಕಷ್ಟೇ ಅಲ್ಲ, ನೀವು ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ರೇಟ್ ವಿಚಾರದಲ್ಲಿ ಗರಿಷ್ಠ ಮತ್ತು ಕನಿಷ್ಠ ದರವನ್ನು ಫಿಕ್ಸ್ ಮಾಡಲಾಗಿದೆ. ಆಂಧ್ರದಲ್ಲಿ ದೊಡ್ಡ ದೊಡ್ಡ ಬಜೆಟ್ಟಿನ ಚಿತ್ರಗಳು ಪ್ರತ್ಯೇಕವಾಗಿ ಸರ್ಕಾರಕ್ಕೆ ಮನವಿ ಮಾಡಿ, ಟಿಕೆಟ್ ರೇಟ್ ಜಾಸ್ತಿ ಮಾಡಿಸಿಕೊಳ್ಳಬಹುದು. ಅದು ಎಲ್ಲರಿಗೂ ಸಾಧ್ಯವಾಗುವ ಮಾತಲ್ಲ. ಆದರೆ ಇಲ್ಲಿ ಮಾತ್ರ.. ಹಾಗಲ್ಲ. ದೊಡ್ಡ ದೊಡ್ಡ ಸ್ಟಾರ್`ಗಳ ಚಿತ್ರ ಬಂದರೆ ಮೊದಲ ದಿನ.. ಮೊದಲ ಶೋ.. ಫಸ್ಟ್ 4 ದಿನದ ಶೋಗಳ ರೇಟ್ ಬೇರೆಯೇ ಇರುತ್ತೆ. ಸಿನಿಮಾ ಹಿಟ್ ಆಗುತ್ತೆ.. ಜನ ನುಗ್ಗುತ್ತಿದ್ದಾರೆ ಎಂದು ಗೊತ್ತಾದರೆ ಸಾಕು, ಟಿಕೆಟ್ ರೇಟ್ ಕಮ್ಮಿ ಮಾಡುವುದೇ ಇಲ್ಲ. ಅರ್ಜೆಂಟಾಗಿ ಕೋಟಿ ಕೋಟಿ ಗಳಿಸುವ ದುರಾಸೆ. ಇದಕ್ಕೆ ಶಿವಣ್ಣ, ಯಶ್, ಸುದೀಪ್, ಧ್ರುವ ಸರ್ಜಾ, ಗಣೇಶ್, ಉಪೇಂದ್ರ, ದುನಿಯಾ ಚಿತ್ರಗಳೂ ಹೊರತಲ್ಲ.
ಆದರೆ ತಮಿಳುನಾಡಿನಲ್ಲಿ ಹಾಗಲ್ಲ. ಮೂಗುದಾರ ಸರ್ಕಾರದ ಕೈಲಿದೆ. ಇಲ್ಲಿ ಸರ್ಕಾರದ ಮೂಗುದಾರವೇ ಸ್ಟಾರ್ ನಟರು, ನಿರ್ಮಾಪಕರ ಕೈಲಿದೆ.



