ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿದೆ. ಬಾಕ್ಸಾಫೀಸ್ ಕಲೆಕ್ಷನ್ 600 ಕೋಟಿಗೂ ಹೆಚ್ಚು ಆಗಿದೆ. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ, ಮೋಹನ್ ಲಾಲ್ ಕೂಡಾ ನಟಿಸಿದ್ದಾರೆ. ರಮ್ಯಕೃಷ್ಣ, ತಮನ್ನಾ ಭಾಟಿಯಾ, ಜಾಕಿ ಶ್ರಾಫ್ ಕೂಡಾ ಇದ್ದಾರೆ. ಕಾವಾಲಯ್ಯ ಕ್ರೇಜ್ ಮಸ್ತ್ ಆಗಿದೆ. ರಜನಿಕಾಂತ್ ಹಿಮಾಲಯಕ್ಕೆ ಹೋಗಿ, ಆಶ್ರಮದಲ್ಲಿ ಧ್ಯಾನ ಮಾಡಿ, ಅಯೋಧ್ಯೆಗೆ ಭೇಟಿ ಕೊಟ್ಟು, ಯೋಗಿ ಆದಿತ್ಯನಾಥ್ ಅವರಿಗೆ ನಮಸ್ಕರಿಸಿ.. ರಗಡ್ ಸುದ್ದಿಯಲ್ಲಿದ್ದಾರೆ. ಸಂಭ್ರಮಿಸುತ್ತಿದ್ದಾರೆ. ಸುದೀರ್ಘ ಅವಧಿಯ ನಂತರ ರಜನಿಕಾಂತ್ ಮಾಸ್ ಹಿಟ್ ಸಿನಿಮಾ ಕೊಟ್ಟಿದ್ದಾರೆ.
ಅಂತಹ ಸಂಭ್ರಮದಲ್ಲೂ ಆರ್‍ಸಿಬಿ ಟೀಂ ಶಾಕ್ ಕೊಟ್ಟಿದೆ. ಜೈಲರ್ ಚಿತ್ರದಲ್ಲಿ ಕಾಂಟ್ರಾಕ್ಟ್ ಕಿಲ್ಲರ್ ಪಾತ್ರಧಾರಿಯೊಬ್ಬ ಆರ್‍ಸಿಬಿ ಜೆರ್ಸಿ ತೊಟ್ಟಿರುವ ಸೀನ್, ಇಡೀ ಸಿನಿಮಾಗೆ ಡ್ಯಾಮೇಜ್ ಮಾಡುತ್ತಿದೆ.
ಆ ಸೀನ್‍ನ್ನು ತೆಗೆದುಹಾಕಬೇಕು ಎನ್ನುವುದು ಆರ್‍ಸಿಬಿ ಟೀಂ ವಾದ. ಹಾಗಂತ ವಾದ ಮಾಡಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು ಆರ್‍ಸಿಬಿ ಟೀಂ.
ಇದೀಗ ದೆಹಲಿ ಹೈಕೋರ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಇರೋ ಸೀನ್ ಪ್ರದರ್ಶನ ಮಾಡಬಾರದು. ಕೂಡಲೇ ಸಿನಿಮಾದಿಂದ ಆ ಸೀನ್ ತೆಗೆಯಬೇಕು ಎಂದು ಆದೇಶಿಸಿದೆ. ಸದ್ಯ ಕೋರ್ಟ್ ಆದೇಶಕ್ಕೆ ತಲೆ ಬಾಗಿದ ಜೈಲರ್ ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಆರ್ಸಿಬಿ ಜೆರ್ಸಿ ಇರೋ ದೃಶ್ಯ ತೆಗೆದು ಹಾಕುತ್ತೇವೆ ಎಂದಿದ್ದಾರೆ.
ಸಿನಿಮಾದಲ್ಲೇನಿದೆ? ವಿವಾದವಾಗಿದ್ದೇಕೆ?
ಸಿನಿಮಾದಲ್ಲಿ ಕಾಂಟ್ರಾಕ್ಟ್ ಕಿಲ್ಲರ್ ಪಾತ್ರಧಾರಿ ಆರ್‍ಸಿಬಿ ಜೆರ್ಸಿ ತೊಟ್ಟಿರುತ್ತಾನೆ. ಹಾಗೆ ಆರ್‍ಸಿಬಿ ಜೆರ್ಸಿ ತೊಟ್ಟಿರುವ ವ್ಯಕ್ತಿ, ಮಹಿಳೆಯ ಪಾತ್ರಕ್ಕೆ ಅಶ್ಲೀಲವಾಗಿ ಮಾತನಾಡುವ ದೃಶ್ಯವಿದ್ದು, ಅದು ಆರ್‍ಸಿಬಿ ಘನತೆಗೆ ಧಕ್ಕೆ ತಂದಿದೆ ಎಂದು ಆರ್‍ಸಿಬಿ ವಾದ ಮಾಡಿದೆ. ಸೆಪ್ಟೆಂಬರ್ 1ರ ಒಳಗೆ ಎಲ್ಲ ಕಡೆ ಥಿಯೇಟರುಗಳಲ್ಲಿ ಆ ದೃಶ್ಯವನ್ನು ತೆಗೆದು ಹಾಕುವುದಾಗಿ ಚಿತ್ರತಂಡ ಒಪ್ಪಿಕೊಂಡಿದೆ.
ವಿಚಿತ್ರವೇನು ಗೊತ್ತೇ.. ಜೈಲರ್ ಚಿತ್ರದ ನಿರ್ಮಾಣ ಮಾಡಿರುವ ಸನ್ ಪಿಕ್ಚರ್ಸ್, ಐಪಿಎಲ್‍ನಲ್ಲಿ ಹೈದರಾಬಾದ್ ತಂಡದ ಮಾಲೀಕರೂ ಹೌದು. ಐಪಿಎಲ್ ತಂಡಗಳ ಮುಖಾಮುಖಿಗೆ ಜೈಲರ್ ಚಿತ್ರ ಕಾರಣವಾಗಿದ್ದು ವಿಚಿತ್ರ. ಆದರೆ ಸತ್ಯ. ಹಾಗಂತ ಇದೇನೂ ದೊಡ್ಡ ವಿಷಯವಾಗುತ್ತಿಲ್ಲ. ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳೋದಾಗಿ ಎರಡೂ ಕಡೆಯವರು ಒಪ್ಪಿದ್ದಾರೆ.



