ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ತನ್ನ ವಿರೋಧಿಗಳನ್ನು ಖೆಡ್ಡಾಗೆ ಕೆಡವಲು ಹುಡುಗಿಯರನ್ನು ಬಳಸುತ್ತಿದ್ದ. ಇನ್ನೂ ಆಗದವರನ್ನು ಟ್ರಾಪ್ ಮಾಡಲು ಏಡ್ಸ್ ಸೋಂಕಿತ ಮಹಿಳೆಯರನ್ನು ಕಳುಹಿಸಿ ಟ್ರಾಪ್ ಮಾಡುತ್ತಿದ್ದ ಎಂದೆಲ್ಲ ಆರೋಪ ಈಗ ಎಸ್‌ಐಟಿ (ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ) ಚಾರ್ಜ್ ಶೀಟ್ ಫೈಲ್ ಪ್ರಕಾರ ಸತ್ಯವಾಗಿದೆ. ಅತ್ಯಾಚಾರ ಆರೋಪ ತನಿಖೆಯಲ್ಲಿ ತಮ್ಮ ವಿರೋಧಿಗಳನ್ನು ಎಚ್‌ಐವಿ ಏಡ್ಸ್ ಪೀಡಿತರ ಮೂಲಕ ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎಂಬ ಗಂಭೀರ ಸ್ವರೂಪದ ಆರೋಪ ಕೂಡ ಸಾಬೀತಾಗಿದೆ ಎಂದು ಎಸ್‌ಐಟಿ ಹೇಳಿದೆ.
ಪ್ರಕರಣ ಶುರುವಾಗಿದ್ದು ಹೀಗೆ..
ಕೊರೊನಾ ಲಾಕ್ ಡೌನ್ ವೇಳೆ ಸಂತ್ರಸ್ತೆ ಮುನಿರತ್ನ ಪರಿಚಯಕ್ಕೆ ಬರುತ್ತಾರೆ. ಆ ಸಂತ್ರಸ್ತೆಯನ್ನು ಹೆದರಿಸಿ ಅತ್ಯಾಚಾರ ಎಸಗಿರುವ ಮುನಿರತ್ನ, ನಂತರವೂ ಲೈಂಗಿಕವಾಗಿ ಶೋಷಿಸಿದ್ದಾರೆ. ನಂತರ ಅದೇ ಯುವತಿಯ ಮೂಲಕ ಬೇರೆಯವರನ್ನು ಟ್ರಾಪ್ ಮಾಡಿಸಿದ್ದಾರೆ ಎನ್ನುತ್ತಿದೆ ಎಸ್‌ಐಟಿ ಚಾರ್ಜ್ ಶೀಟ್. ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತೆಯೊಬ್ಬರು ಕಳೆದ ಸೆಪ್ಟೆಂಬರ್‌ನಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ಹಾಗೂ ಸಹಚರರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಪ್ರಕರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿತ್ತು. ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಯತ್ನ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.
ಆರೋಪಪಟ್ಟಿ ಪ್ರಕಾರ..
2481 ಪುಟಗಳ ಆರೋಪ ಪಟ್ಟಿಯಲ್ಲಿ 146 ಸಾಕ್ಷಿಗಳ ಹೇಳಿಕೆ, 350 ದಾಖಲೆ ಗಳು ಸಲ್ಲಿಕೆಯಾಗಿವೆ. ಅಲ್ಲದೆ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ರಡಿ ದೂರುದಾರೆ ಸೇರಿ 8 ಮಂದಿ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಹಾಗೂ ಎಫ್‌ಎಸ್ಎಲ್ ವರದಿಗಳನ್ನು ಕೂಡ ನೀಡಲಾಗಿದೆ. ಐಪಿಸಿ 354ಎ (ಲೈಂಗಿಕ ಕಿರುಕುಳ), 354ಸಿ (ಅನುಮತಿ ಇಲ್ಲದೆ ಮಹಿಳೆಯ ಆಶ್ಲೀಲ ದೃಶ್ಯಾವಳಿ ಚಿತ್ರೀಕರಣ), 376(2)ಎನ್ (ನಿರಂತರ ಅತ್ಯಾ ಚಾರ), 308 (ಸಂತ್ರಸ್ತೆಯ ಕೊಲ್ಲುವ ಉದ್ದೇಶ), 120ಬಿ (ಅಪರಾಧಿಕ ಸಂಚು), 504 (ಉದೇಶ ಪೂರ್ವಕ ಅವಮಾನ), 506 (ಜೀವ ಬೆದರಿಕೆ), 270 (ಅಪಾಯಕಾರಿ ರೋಗ ಹರಡುವಿಕೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಸೆಕ್ಷನ್ನುಗಳ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಇನ್ನೂ ಎರಡು ಚಾರ್ಜ್ ಶೀಟ್ ಬಾಕಿ ಇದೆ..!
ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಯತ್ನ ಸೇರಿ 4 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಜಾತಿನಿಂದನೆ ಹಾಗೂ ಬಿಜೆಪಿ ಕಾರ್ಯಕರ್ತೆ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದೆ. ಇನ್ನೂ ಎರಡು ಕೇಸುಗಳಲ್ಲಿ ಚಾರ್ಜ್ ಶೀಟ್ ಫೈಲ್ ಮಾಡುವುದು ಬಾಕಿ ಇದೆ.



