ಕಾಂಗ್ರೆಸ್ಸಿನಲ್ಲಿ ರಾಹುಲ್ ಗಾಂಧಿಯೇ ಆಗಲಿ, ಪ್ರಿಯಾಂಕಾ, ಸೋನಿಯಾ ಅವರನ್ನೇ ಆಗಲಿ ಟೀಕೆ ಮಾಡಿದರೆ ಆಪತ್ತು ಕಟ್ಟಿಟ್ಟ ಬುತ್ತಿ. ಅದು ಮತ್ತೊಮ್ಮೆ ಸಾಬೀತಾಗಿದೆ. ಮೊಹಮ್ಮದ್ ಮೊಕ್ವಿಮ್ ಎಂಬ ಮಾಜಿ ಶಾಸಕರನ್ನು ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದಲೇ ವಜಾ ಮಾಡಲಾಗಿದೆ. ಇಷ್ಟಕ್ಕೂ ಮೊಹಮ್ಮದ್ ಮೊಕ್ವಿಮ್ ಮಾಡಿದ ತಪ್ಪೇನು ಗೊತ್ತೇ..
ಮೊಹಮ್ಮದ್ ಮೊಕ್ವಿಮ್, ಮಾಜಿ ಶಾಸಕರು. 2019 ರಲ್ಲಿ ಬಾರಾಬತಿ-ಕಟಕ್ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ನಾಯಕ. ಆದರೆ ಇವರ ಮೇಲೆ ಸಾಲ ಕೊಡಿಸುತ್ತೇನೆ ಎಂದು ಮೋಸ ಮಾಡಿದ ವಂಚನೆ ಕೇಸ್ ಇತ್ತು. ಈ ಕೇಸಿನಲ್ಲಿ ಅದು ಸಾಬೀತೂ ಆಗಿ, 3 ವರ್ಷ ಜೈಲು ಶಿಕ್ಷೆಯಾಗಿ ಶಾಸಕ ಸ್ಥಾನ ಕಳೆದುಕೊಂಡಿದ್ದರು ಮೊಕ್ವಿಮ್. ಇಂತಹವರು ಇತ್ತೀಚೆಗೆ ರಾಹುಲ್ ಗಾಂಧಿ ಮತ್ತು ಖರ್ಗೆಯವರ ನಾಯಕತ್ವವನ್ನು ಪ್ರಶ್ನೆ ಮಾಡಿದ್ದರು. ಅದಕ್ಕಾಗಿ ವಜಾ ಆಗಿದ್ದಾರೆ.
ಇತ್ತೀಚೆಗೆ ಮೊಕ್ವಿಮ್ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅವರ ಸಮಸ್ಯೆ ಏನು ಎಂದರೆ ಒಡಿಶಾ ಕಾಂಗ್ರೆಸ್ ಕುರಿತಂತೆ ರಾಹುಲ್ ಗಾಂಧಿ ಅವರನ್ನು 3 ವರ್ಷಗಳಿಂದ ಭೇಟಿ ಮಾಡಲು ಪ್ರಯತ್ನ ಮಾಡುತ್ತಿದ್ದರೂ, ಅದು ಸಾಧ್ಯವಾಗಿಲ್ಲ. ರಾಹುಲ್ ಗಾಂಧಿ ಒಬ್ಬ ಪರಿಪಕ್ವತೆ ಇಲ್ಲದ ನಾಯಕ ಎಂದಿದ್ದ ಮೊಕ್ವಿಮ್, ಯುವ ನಾಯಕರು ಪಕ್ಷವನ್ನು ತೊರೆಯುತ್ತಿದ್ದಾರೆ ಎಂದು ಹಿಮಾಂತ್ ಬಿಸ್ವಾಸ್ ಶರ್ಮಾ, ಜ್ಯೋತಿರಾಧಿತ್ಯ ಸಿಂಧ್ಯಾ ಮೊದಲಾದವರ ಹೆಸರು ಉಲ್ಲೇಖ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ತುಂಬಾ ಹಿರಿಯರಾಗಿದ್ದಾರೆ. ಹಾಗಾಗಿ, ಪಕ್ಷಕ್ಕೆ ಈಗ ಯುವ ನಾಯಕರನ್ನು ಮುಂದಕ್ಕೆ ತರಬೇಕು ಎಂದು ಹೇಳಿದ್ದರು. ಒಟ್ಟಿನಲ್ಲಿ ಅವರನ್ನು ಈಗ ಪಕ್ಷದಿಂದಲೇ ಆಚೆ ಹಾಕಲಾಗಿದೆ.
ಈ ಹಿಂದೆಯೂ ಕೂಡಾ ಹಲವರು ಇದೇ ಪರಿಸ್ಥಿತಿ ಎದುರಿಸಿದ್ದರು. ಗುಲಾಂ ನಬಿ ಅಜಾದ್ ಅವರನ್ನು ವಜಾ ಮಾಡಲು ಸಿದ್ಧತೆಗಳು ನಡೆದಿದ್ದವು. ಆಗ ಅವರೇ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು. ಇದು 2022ರಲ್ಲಿ ಆಗಿದ್ದ ಪ್ರಕರಣ. ಸಂಜಯ್ ಝಾ, ಆಚಾರ್ಯ ಪ್ರಮೋದ್ ಕೃಷ್ಣಂ ಮೊದಲಾದವರೂ ಹೀಗೆಯೇ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನೆ ಮಾಡಿ ವಜಾ ಆಗಿದ್ದರು. ಈಗ ಶಶಿ ತರೂರ್ ಅವರೂ ಅದೇ ಹಾದಿಯಲ್ಲಿದ್ದಾರೆ.



