ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಮೊದಲ ಬಾರಿಗೆ ಮಾತನಾಡಿದ ರಾಹುಲ್ ಗಾಂಧಿ, ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಸಂಸತ್‌ನಲ್ಲಿ ಶಿವನ ಫೋಟೋ, ಜೀಸಸ್ ಫೋಟೋ ಹಾಗೂ ಸಿಖ್ ಧರ್ಮಗುರು ಗುರುನಾನಕ್ ಫೋಟೋ, ಪೈಗಂಬರರ ಫೋಟೋ ಪ್ರದರ್ಶಿಸಿ ಮಾತನಾಡಿದ್ದಾರೆ. ಈ ವೇಳೆ ಎಲ್ಲ ಧರ್ಮ, ದೈವಗಳೂ ಶಾಂತಿ, ಅಹಿಂಸೆಯನ್ನು ಸಾರುತ್ತವೆ. ಆದರೆ, ಬಿಜೆಪಿ, ಆರ್ʻಎಸ್ʻಎಸ್, ಮೋದಿ.. ಹಿಂಸೆಯ ಹಿಂದುತ್ವ ಸಾರುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದೀಗ ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಧರ್ಮಗುರುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ಯಪಡಿಸಿದ್ದಾರೆ.
ಹಿಂದೂ ಧರ್ಮಗುರು ಅವಧೇಶಾನಂದ ಸ್ವಾಮೀಜಿ :
ಹಿಂದೂಗಳು ಎಲ್ಲದರಲ್ಲಿಯೂ ದೇವರನ್ನು ಕಾಣುತ್ತಾರೆ. ಹಿಂದೂಗಳು ಅಹಿಂಸಾವಾದಿ ಮತ್ತು ಉದಾರಿಗಳು. ಇಡೀ ವಿಶ್ವವೇ ಕುಟುಂಬ ಎಂಬ ಪರಿಕಲ್ಪನೆ ಹಿಂದೂ ಸಮಾಜದಲ್ಲಿದೆ. ಇಡೀ ಸಮಾಜದ ಅಭಿವೃದ್ಧಿ ಮತ್ತು ಒಳಿತಿಗಾಗಿ ಹಿಂದೂಗಳು ಕೆಲಸ ಮಾಡುತ್ತೇವೆ. ಹಿಂದೂಗಳು ಹಿಂಸೆಯ ಪ್ರತಿಪಾದಕರು ಎಂದು ಹೇಳುವ ಮೂಲಕ ದ್ವೇಷ ಹರಡುವ ಕೆಲಸ ನಡೆದಿದೆ. ಇಂತಹ ಹೇಳಿಕೆಗಳು ಇಡೀ ಹಿಂದೂ ಸಮಾಜವನ್ನು ಅವಮಾನಿಸುತ್ತವೆ. ಹಿಂದೂ ಸಮಾಜ ತುಂಬಾ ಉದಾರವಾಗಿದ್ದು, ಎಲ್ಲರನ್ನು ಗೌರವಿಸುತ್ತದೆ.ರಾಹುಲ್ ಗಾಂಧಿ ಪದೇ ಪದೇ ಹಿಂದೂಗಳು ಹಿಂಸಕರು ಮತ್ತು ದ್ವೇಷ ಬಿತ್ತುತ್ತಾರೆ ಎಂದು ಹೇಳುತ್ತಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಹೇಳಿಕೆಗಳಿಂದ ಹಿಂದೂ ಹಾಗೂ ಇಡೀ ಸಂತ ಸಮಾಜ ಕೋಪಗೊಂಡಿದೆ. ಕೂಡಲೇ ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮ ಕೇಳಬೇಕು.
ಸೈಯ್ಯದ್ ನಾಸಿರುದ್ದೀನ್ ಚಿಶ್ತಿ, ಮುಸ್ಲಿಂ ಧರ್ಮಗುರು :
ಆಲ್ ಇಂಡಿಯಾ ಸೂಫಿ ಸಜ್ಜಾದನಶೀನ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಸೈಯ್ಯದ್ ನಾಸಿರುದ್ದೀನ್ ಚಿಶ್ತಿ, ಇಸ್ಲಾಂನಲ್ಲಿ ಅಭಯ ಮುದ್ರೆಯ ಉಲ್ಲೇಖವಿಲ್ಲ. ಮೂರ್ತಿ ಪೂಜೆಯ ಕುರಿತು ವಿವರಣೆಯೂ ಇಲ್ಲ. ಆದ್ರೆ ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ಎರಡು ಹಸ್ತಗಳ ಚಿಹ್ನೆ ತೋರಿಸಿ ಇಸ್ಲಾಂ ಎಂದು ಸೂಚಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ಬದಲಿಸಿಕೊಳ್ಳಬೇಕು.
ಗುರುದ್ವಾರ ಪಟನಾ ಸಾಹಿಬ್ ಅಧ್ಯಕ್ಷ ಜಗಜೋತ್ ಸಿಂಗ್, ಸಿಖ್ ಧರ್ಮಗುರು :
ಇಂದು ತುಂಬಾ ದುಃಖಕರವಾದ ದಿನ.. ರಾಹುಲ್ ಗಾಂಧಿ ಅವರು ಸದನದಲ್ಲಿ ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಮಂಡಿಸಿದ ರೀತಿ ನೋಡಿದ್ರೆ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎಂಬುವುದು ತಿಳಿಯುತ್ತದೆ. ಸದನದಲ್ಲಿ ರಾಹುಲ್ ಗಾಂಧಿಯವರು ತಪ್ಪಾದ ವಿಷಯಗಳನ್ನು ಹೇಳಿದ್ದಾರೆ. ಸಿಖ್, ಹಿಂದೂ ಅಥವಾ ಯಾವುದೇ ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ರೆ ಅದರ ಬಗ್ಗೆ ಮಾತನಾಡಬಾರದು. ಸಂಪೂರ್ಣ ಮಾಹಿತಿ ಪಡೆದ ನಂತರವೇ ಮಾತನಾಡಬೇಕು.
ರಾಹುಲ್ ಗಾಂಧಿ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. 1984ರಲ್ಲಿ ಸಿಖ್ ಸಮುದಾಯದ ಮೇಲೆ ನಡೆದ ಹಿಂಸೆ, ದೌರ್ಜನ್ಯದ ಬಗ್ಗೆ ಮಾಹಿತಿ ಇಲ್ಲ ಅನ್ನಿಸುತ್ತದೆ. ದೆಹಲಿಯಲ್ಲಿಯೇ ಹಿಂಸೆಗೆ ಒಳಗಾದ ಸಾವಿರಾರು ಸಂತ್ರಸ್ತ ಕುಟುಂಬಗಳಿವೆ. ರಾಹುಲ್ ಗಾಂಧಿ ಒಮ್ಮೆ ಅವರೆಲ್ಲರನ್ನೂ ಭೇಟಿಯಾಗಿ ಕ್ಷಮೆ ಕೇಳಲಿ.
ಒಟ್ಟಿನಲ್ಲಿ ಬಹುತೇಕ ಧರ್ಮಗುರುಗಳು ರಾಹುಲ್ ಗಾಂಧಿ ಅವರು ಅಪ್ರಬುದ್ಧರಾಗಿ, ಎಳಸು ಎಳಸಾಗಿ, ಮಾಹಿತಿ ಇಲ್ಲದೆ ಮಾತನಾಡಿದ್ದಾರ ಎಂದಿದ್ದಾರೆ. ಆದರೆ, ರಾಹುಲ್ ಗಾಂಧಿ ಮಾತ್ರ ತಾವು ಮಾತನಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾರೆ.



