ಎನ್ʻಡಿಎ ಒಕ್ಕೂಟದ ಪ್ರಧಾನಿ ಯಾರು ಅನ್ನೋದು ಜಗಜ್ಜಾಹೀರು. 2ನೇ ಹೆಸರು ಕೂಡಾ ಯಾರೂ ಇಲ್ಲ. ಎನ್ʻಡಿಎ ಒಕ್ಕೂಟಕ್ಕೆ ಪ್ರತಿಯಾಗಿ ಇಂಡಿಯಾ’ ಕೂಟದ ಪ್ರಧಾನಿ ಅಭ್ಯರ್ಥಿ ಯಾರು, ಕೂಟ ಗೆದ್ದರೆ ಯಾರು ಪ್ರಧಾನಿಯಾಗುತ್ತಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಜಾಣತನದ ಉತ್ತರ ಕೊಡುತ್ತಾ ಬಂದಿದ್ದ ಪಕ್ಷಗಳಲ್ಲಿ ಈಗ ಸ್ಪಷ್ಟತೆ ಬಂದಂತೆ ಕಾಣುತ್ತಿದೆ. ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ಪ್ರಧಾನಿ ಸ್ಥಾನಕ್ಕೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಆಯ್ಕೆ ಎಂದು ಘೋಷಿಸಿದ್ಧಾರೆ.
ಚುನಾವಣೆ ಮುಗಿದ ಬಳಿಕ ಇಂಡಿಯಾ ಕೂಟದ ಪಕ್ಷಗಳೆಲ್ಲವೂ ಸಭೆ ಸೇರಿ ಪ್ರಧಾನಿಯನ್ನು ಆಯ್ಕೆ ಮಾಡುತ್ತವೆ ಎಂದು ಮೊದಲಿನಿಂದಲೂ ಖರ್ಗೆ ಹೇಳಿಕೊಂಡು ಬಂದಿದ್ದರು. ಪ್ರಧಾನಿ ಹುದ್ದೆ ಕುರಿತ ಪ್ರಶ್ನೆಗಳಿಗೆಲ್ಲಾ ಖರ್ಗೆ ಅವರದ್ದು ಇದೇ ಉತ್ತರವಾಗಿತ್ತು. ಅಲ್ಲದೆ ಇಂಡಿಯಾ ಒಕ್ಕೂಟದಲ್ಲಿದ್ದ ಅರವಿಂದ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ ಇಬ್ಬರೂ ಖರ್ಗೆ ಹೆಸರಿಗೆ ಜೈಕಾರ ಹಾಕಿದ್ದರು.
ಆದರೆ, ಖರ್ಗೆ ಹೆಸರು ಹೇಳಿದ್ದೇ ತಡ, ಅದೂವರೆಗೆ ಒಕ್ಕೂಟದಲ್ಲಿದ್ದ ನಿತೀಶ್ ಕುಮಾರ್ ಠಣ್ ಅಂತಾ ಎನ್ʻಡಿಎಗೆ ಹಾರಿ ಹೋಗಿದ್ದರು. ರಾಹುಲ್ ಗಾಂಧಿ ಹೆಸರು ಮತ್ತು ಫೋಟೋವನ್ನು ದೊಡ್ಡದಾಗಿ ಹಾಕಿದ ಕಾರಣಕ್ಕೇ ಮುನಿಸಿಕೊಂಡಿದ್ದ ಅಖಿಲೇಶ್ ಯಾದವ್, ಒಕ್ಕೂಟದ ಒಂದು ಸಭೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ.. ಖರ್ಗೆ ತಾವೂ ಸೇರಿದಂತೆ ಯಾರ ಹೆಸರನ್ನೂ ಓಕೆ ಮಾಡಿರಲಿಲ್ಲ. ಸಾಮೂಹಿಕ ನಾಯಕತ್ವದ ಜಪ ಪಠಿಸುತ್ತಿದ್ದ ಖರ್ಗೆ, ಚುನಾವಣೆಯ ಕೊನೆಯ ಹಂತದವರೆಗೆ ಯಾರು ಪ್ರಧಾನಿ ಅಭ್ಯರ್ಥಿ ಎಂದು ಹೇಳಿರಲಿಲ್ಲ.
ಈಗ ಎನ್‌ಡಿಟೀವಿಗೆ ನೀಡಿರುವ ಸಂದರ್ಶನದಲ್ಲಿ ಚುನಾವಣೆ ಪೂರ್ವದಲ್ಲಿ 2 ಭಾರತ್ ಜೋಡೋ ಯಾತ್ರೆ ಮಾಡಿರುವ ರಾಹುಲ್ ಗಾಂಧಿ, ಚುನಾವಣೆ ವೇಳೆ ವ್ಯಾಪಕವಾಗಿ ಪ್ರಚಾರ ಮಾಡಿದ್ದಾರೆ. ಮಿತ್ರ ಪಕ್ಷಗಳ ಜತೆ ವೇದಿಕೆ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ದಾಳಿಗಳನ್ನು ನಡೆಸಿದ್ದಾರೆ. ಹೀಗಾಗಿ ಉನ್ನತ ಹುದ್ದೆಗೆ ಅವರೇ ಜನಪ್ರಿಯ ಆಯ್ಕೆ ಎಂದು ಹೇಳಿದ್ಧಾರೆ.
ಇದೇ ವೇಳೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿದ್ದ ತೆರವಾಗಿದ್ದ ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬೇಕು ಎಂದು ನಾನು ಪ್ರಯತ್ನಿಸಿದೆ. ಆದರೆ, ಪ್ರಿಯಾಂಕಾ ಒಲವು ತೋರಲಿಲ್ಲ. ಬದಲಿಗೆ ರಾಹುಲ್ ಗಾಂಧಿ ಸ್ಪರ್ಧಿಸಿದರು. ಅವರ ಪರ ಪ್ರಿಯಾಂಕಾ ಪ್ರಚಾರ ಮಾಡಿದರು ಎಂದು ಖರ್ಗೆ ತಿಳಿಸಿದ್ದಾರೆ.
ಮತ್ತೊಂದೆಡೆ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಇಂಡಿಯಾ ಕೂಟ ಸ್ಪಷ್ಟ ಹಾಗೂ ನಿರ್ಣಾಯಕ ಜನಾದೇಶ ಪಡೆಯಲಿದೆ. ಜೂ.4ರ ನಂತರ ಎನ್‌ಡಿಎಯಲ್ಲಿ ಗುರುತಿಸಿಕೊಂಡಿರುವ ಪಕ್ಷಗಳು ಇಂಡಿಯಾ ಸೇರಲು ಕ್ಯೂ ನಿಲ್ಲುತ್ತವೆ ಎಂದು ಅಭಿಪ್ರಾಯ ಪಟ್ಟಿದ್ಧಾರೆ.
ಒಟ್ಟಿನಲ್ಲಿ ಖರ್ಗೆಯವರ ಈ ಹೇಳಿಕೆ ಇಂಡಿಯಾ ಒಕ್ಕೂಟದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಒಕ್ಕೂಟದಲ್ಲಿ ಖರ್ಗೆ ಹಿರಿಯ ಹಾಗೂ ಅನುಭವಿ ನಾಯಕರಾಗಿದ್ದಾರೆ. ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ಇರುವ ಲೀಡರ್. ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬಕ್ಕೆ ನಿಷ್ಠೆ ಹೊಂದಿರುವ ಖರ್ಗೆ, ಅದನ್ನು ಈ ಹಿಂದೆಯೂ ಹಲವು ಬಾರಿ ತೋರಿಸಿದ್ದಾರೆ.
ಖರ್ಗೆಯವರ ಗಾಂಧಿ ಕುಟುಂಬದ ಮೇಲಿನ ನಿಷ್ಠೆ ಎಂಥದ್ದೆಂದರೆ ಅವರು ತಮ್ಮ ಮಕ್ಕಳಿಗೆ ಇಟ್ಟಿರುವ ಹೆಸರುಗಳನ್ನು ನೋಡಿದರೆ ಗೊತ್ತಾಗುತ್ತದೆ. ಈಗ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ (ಸೋನಿಯಾ-ರಾಜೀವ್ ಗಾಂಧಿ ಮಗಳು ಪ್ರಿಯಾಂಕಾ ವಾದ್ರಾ ಹೆಸರು ನೆನಪಾಗುತ್ತದೆ) ಇನ್ನೊಬ್ಬ ಮಗಳ ಹೆಸರು ಪ್ರಿಯದರ್ಶಿನಿ (ಇಂದಿರಾ ಗಾಂಧಿಯವರ ಮೂಲ ಹೆಸರು). ಉಳಿದವರ ಹೆಸರುಗಳಲ್ಲೂ ಗಾಂಧಿ ಕುಟುಂಬದ ನಿಷ್ಠೆ ಇದೆ.



