ರಾಹುಲ್ ಗಾಂಧಿ ಸದಾ ಏನಾದರೊಂದು ವಿವಾದ ಮಾಡಿಕೊಳ್ತಾ ಇರ್ತಾರೆ. ತೀರಾ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಜಾತಿಯನ್ನು ಎಳೆದು ತಂದು ಹೇಳಿಕೆ ಕೊಟ್ಟು ಸುಪ್ರೀಂಕೋರ್ಟಿನಿಂದ ಬುದ್ದಿವಾದ ಹೇಳಿಸಿಕೊಂಡಿದ್ದ ರಾಹುಲ್ ಗಾಂಧಿ, ಈಗ ಚುನಾವಣಾ ಆಯೋಗದಿಂದಲೂ ಎಚ್ಚರಿಕೆ ಸ್ವೀಕರಿಸಿದ್ದಾರೆ.
ಮೋದಿ ಪನೌತಿ, ಜೇಬುಗಳ್ಳ ಅನ್ನೋ ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಆಯೋಗ ವಾರ್ನಿಂಗ್ ನೀಡಿದೆ. ಮಾತನಾಡುವ ಎಚ್ಚರಿಕೆಯಿಂದ ಇರಿ, ಇದೇ ತಪ್ಪು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದ ಮೋದಿಗೆ ಅಪಶಕುನಾ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇತ್ತ ಮೋದಿ ಜೇಬುಗಳ್ಳ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿತ್ತು. ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಮಾರ್ಚ್ 1 ರಂದು ಚುನಾವಣಾ ಆಯೋಗ ನೀತಿ ಸಂಹಿತೆ, ಹೇಳಿಕೆಗಳ ಮಾರ್ಗಸೂಚಿ ನೀಡಿದೆ. ಈ ವೇಳೆ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸಿದೆ. ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೀಡಿರುವ ನೋಟಿಸ್‌ನಲ್ಲಿ ಈ ವಿಚಾರಗಳ ಕುರಿತು ಎಚ್ಚರಿಕೆ ನೀಡಿದೆ.
ಚುನಾವಣಾ ವೇಳೆ ಪಕ್ಷದ ಸ್ಟಾರ್ ಪ್ರಚಾಕರು ಅತೀವ ಎಚ್ಚರಿಕೆಯಿಂದ ಮಾತನಾಡಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ನಿಯಮ ಉಲ್ಲಂಘಿಸಿ ವಾರ್ನಿಂಗ್ ಪಡೆದಿದ್ದರೆ ಶಿಕ್ಷೆ ಪ್ರಮಾಣ ಹೆಚ್ಚಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಪಿಎಂ ಎಂದರೆ ಪನೌತಿ (ಅಪಶಕುನ/ದುರಾದೃಷ್ಟ) ಮೋದಿ ಎಂದರ್ಥ. ಪ್ರಧಾನಿ ನರೇಂದ್ರ ಮೋದಿ ದುರಾದೃಷ್ಟವನ್ನು ತರುತ್ತಾರೆ’ ಎಂದು ವಿಶ್ವಕಪ್ ಫೈನಲ್ ಪಂದ್ಯವನ್ನು ಮೋದಿ ವೀಕ್ಷಿಸಿದ ಬಳಿಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.
ಈ ಹಿಂದೆ ಮೋದಿ ಹೆಸರಿದ್ದವರೆಲ್ಲ ಕಳ್ಳರು ಎಂದು ಹೇಳಿಕೆ ನೀಡಿ, ಸಂಸತ್ ಸದಸ್ಯತ್ವವನ್ನೇ ಕಳೆದುಕೊಂಡಿದ್ದರು. ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಈ ಪ್ರಕರಣಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿರುವ ಕಾರಣ, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಉಳಿದುಕೊಂಡಿದೆ. ಇದಕ್ಕೂ ಮೊದಲು ಆರ್.ಎಸ್.ಎಸ್. ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ನಂತರ ಕೋರ್ಟಿನಲ್ಲಿ ಕ್ಷಮೆ ಕೇಳಿದ್ದರು.
ಇದೆಲ್ಲದರ ಮಧ್ಯೆ ರಾಹುಲ್ ಗಾಂಧಿ ಈ ಬಾರಿಯೂ ಎರಡು ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಉತ್ತರ ಪ್ರದೇಶದ ಅಮೆಥಿ ಹಾಗೂ ಕೇರಳ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. 2019ರ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದರು. ಆದರೆ ಅಮೆಥಿಯಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು. ಆದರೆ ಮುಸ್ಲಿಮ್ ಪ್ರಾಬಲ್ಯದ ವಯನಾಡಿನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ್ದರು.
ಅತ್ತ ಪ್ರಿಯಾಂಕಾ ವಾದ್ರಾ ಅವರು ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ ಅನ್ನೋ ಮಾತುಗಳು ಬಲವಾಗುತ್ತಿದೆ. ಗಾಂಧಿ ಕುಟುಂಬಕ್ಕೆ ರಾಯ್‌ಬರೇಲಿ ಸಂಜೀವಿನಿ ಕ್ಷೇತ್ರವಾಗಿದೆ. ಸೋನಿಯಾ ಗಾಂಧಿ 5 ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದಾರೆ. 2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದು ಸ್ಥಾನ ಮಾತ್ರ. ಅದು ರಾಯ್‌ಬರೇಲಿಯಿಂದ ಸ್ಪರ್ಧಿಸಿದ ಸೋನಿಯಾ ಗಾಂಧಿ. ಇದೀಗ ತೆರವಾಗಿರುವ ಈ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.



