ಇಬ್ಬರು ಹೀರೋಯಿನ್ಸ್. ಒಬ್ಬ ಸುಂದರಿಯನ್ನು ಇನ್ನೊಬ್ಬ ಸುಂದರಿ ಹೊಗಳುವುದು. ಹಾಡುವುದು, ನರ್ತಿಸುವುದು.. ಆಕೆಯ ಜೊತೆಯಲ್ಲೇ ಹೆಜ್ಜೆ ಹಾಕವುದು.. ಇದೆಲ್ಲ ಸಾಧ್ಯನಾ..? ಹೌದು ಎಂದು ಮಾಡಿ ತೋರಿಸಿದ್ದಾರೆ ಸಂಜು ವೆಡ್ಸ್ ಗೀತಾದ ನಿರ್ದೇಶಕ ನಾಗಶೇಖರ್.
ಸಂಜು ವೆಡ್ಸ್ ಗೀತಾ 2 ಚಿತ್ರದ ಹಬೀಬಿ.. ಹಬೀಬಿ..ಹಬೀಬಿ..ಎಂಬ ಮೊದಲ ಲಿರಿಕಲ್ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಹಾಡಿ ಕುಣಿದಿರೋದು ಕೇವಲ ರಚಿತಾ ರಾಮ್ ಅಲ್ಲ, ರಾಗಿಣಿ ದ್ವಿವೇದಿ ಕೂಡಾ ಇದ್ದಾರೆ. ಅದರೆ ಹಾಡು ಇರೋದು ಮಾತ್ರ ಬುಲ್ ಬುಲ್ ಡಿಂಪಲ್ ಕ್ವೀನ್ ಮೇಲೆ. ಆದರೆ ರಚಿತಾರ ಸೌಂದರ್ಯವನ್ನು ಹೊಗಳುತ್ತಾ.. ನರ್ತಿಸುವುದು ರಾಗಿಣಿ ದ್ವಿವೇದಿ.
ಬುಲ್ ಬುಲ್ ಬ್ಯೂಟಿಫುಲ್.. ಕೆನ್ನೇಲ್ ಡಿಂಪಲ್.. ಕಲರ್‌ಫುಲ್.. ಎಂದು ಸಾಗುವ ಹಾಡಿನಲ್ಲಿ, ಪಾರ್ಟಿಯಲ್ಲಿ ಸ್ಟೆಪ್ ಹಾಕ್ತಾರೆ ತುಪ್ಪದ ಹುಡುಗಿ ರಾಗಿಣಿ.
ಸಂಜು ಗೀತಾ ಇಬ್ಬರೂ..
ಒಂದು ಊರಲ್ಲಿದ್ದರು.
ಒಮ್ಮೆ ಎದುರು ಬಂದರು..
ಪ್ರೀತಿಯಲ್ಲಿ ಬಿದ್ದರು..
ಎಂದು ಸಾಗುತ್ತಾ ಹೋಗುತ್ತದೆ..
ಕವಿರಾಜ್ ಬರೆದಿರುವ ಸಾಹಿತ್ಯಕ್ಕೆ ಶಕ್ತಿ ನೀಡಿರುವುದು ಮಂಗ್ಲಿ ಮತ್ತು ಜಸ್ಸಿ ಗಿಫ್ಟ್. ಶ್ರೀಧರ್ ಅವರು ಸಂಗೀತ ನೀಡಿರುವ ಚಿತ್ರಕ್ಕೆ ನಾಗಶೇಖರ್ ನಿರ್ದೇಶನವಿದೆ.
ಹಾಡಿನಲ್ಲಿ ರಾಗಿಣಿ ಮತ್ತು ರಚಿತಾ ಇಬ್ಬರೂ ಹಾಡಿ ಕುಣಿಯುತ್ತಾರೆ. ಅದನ್ನು ಕಣ್ತುಂಬಿಕೊಳ್ಳೋದು ಹೀರೋ ಶ್ರೀನಗರ ಕಿಟ್ಟಿ. ಸದ್ಯ ಸಿನಿಮಾ ರೀರೆಕಾರ್ಡಿಂಗ್ ಹಂತದಲ್ಲಿದೆ. ಡಿಸೆಂಬರ್ 6ಕ್ಕೆ ರಿಲೀಸ್ ಮಾಡುವ ಸಾಧ್ಯತೆ ಇದೆ’ ಎಂದಿದ್ದಾರೆ ನಿರ್ದೇಶಕ ನಾಗಶೇಖರ್. ಛಲವಾದಿ ಕುಮಾರ್ ನಿರ್ಮಾಣದ ಚಿತ್ರದಲ್ಲಿ ಪ್ರೇಮ ಕಥೆಯ ಜೊತೆಗೆ ರೇಷ್ಮೆ ಬೆಳೆಗಾರರ ಬದುಕಿನ ಹೋರಾಟದ ಕಥೆಯೂ ಇದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲ ಸಂಜು ವೆಡ್ಸ್ ಗೀತಾಗೆ ಸಿಕ್ಕ ಯಶಸ್ಸನ್ನೂ ಮೀರಿ, ಭಾಗ೨ಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ನಿರ್ಮಾಪಕ ಛಲವಾದಿ ಕುಮಾರ್ ಅವರ ಪ್ರಕಾರ ಸಂಜು ವೆಡ್ಸ್ ಗೀತಾ 2 ಚಿತ್ರ ನೋಡುವಾಗ ಡಾ.ರಾಜ್ ಕುಮಾರ್ ಅಭಿನಯದ ಚಿತ್ರಗಳು ನೆನಪಾಗುತ್ತಿದ್ದವಂತೆ. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಅವರ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಒಬ್ಬ ರೇಶ್ಮೆ ಬೆಳೆಗಾರನಾಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಇವರ ಜೊತೆ ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೇ ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ಪವಿತ್ರಾ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಹಾಡಿನಿಂದಲೇ ಸಖತ್ ಸದ್ದು ಮಾಡುತ್ತಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.



