ಇದು ಹೊಸ ದಾಖಲೆ. ಶಿವಣ್ಣ ಅಭಿನಯದ ಗಂಧದ ಗುಡಿ ಭಾಗ ೨ರಲ್ಲಿ ಅಪ್ಪ ರಾಜ್ʻಕುಮಾರ್ (Rajkumar) ಮತ್ತು ಮಗ ಶಿವಣ್ಣ (Shivanna) ಒಟ್ಟಿಗೇ ನಟಿಸಿದ್ದರು. ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ಡಾ.ರಾಜ್, ಶಿವಣ್ಣ ಮತ್ತು ಪುನೀತ್ ಒಟ್ಟಿಗೇ ನಟಿಸಿದ್ದರು. ಪುನೀತ್, (Puneeth Rajkumar) ಬಾಲಕ ಕಣ್ಣಪ್ಪನಾಗಿ ಕಾಣಿಸಿಕೊಂಡಿದ್ದರು. ಇನ್ನು ಡಾ.ರಾಜ್ ಮತ್ತು ಪುನೀತ್ ಒಟ್ಟಿಗೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರೇಮದ ಕಾಣಿಕೆ, ಸನಾದಿ ಅಪ್ಪಣ್ಣ, ಯಾರಿವನು, ಚಲಿಸುವ ಮೋಡಗಳು, ಹೊಸ ಬೆಳಕು, ವಸಂತ ಗೀತ, ಪರಶುರಾಮ್… ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಅದಾದ ಮೇಲೆ ಅಪ್ಪ ಮತ್ತು ಮಗ ಒಟ್ಟಿಗೇ ನಟಿಸುವ ಅವಕಾಶ ಇದ್ದದ್ದು ವಿನಯ್ (Vinay Rajkumar) ಮತ್ತು ಯುವ ರಾಜ್ʻಕುಮಾರ್ ಚಿತ್ರಗಳಲ್ಲಷ್ಟೇ. ಆ ನಿರೀಕ್ಷೆ ಇದೀಗ ಸಿಂಪಲ್ ಸುನಿಯ (Simple suni) ಒಂದು ಸರಳ ಪ್ರೇಮಕಥೆಯಲ್ಲಿ (Ondu Sarala Premakathe) ಈಡೇರಿದೆ. ಸಿಂಪಲ್ ಸುನಿ-ವಿನಯ್ ರಾಜ್ʻಕುಮಾರ್ ಸರಳ ಪ್ರೇಮಕಥೆಗೆ ಕುಂಭಳಕಾಯಿ ಹೊಡೆಯಾಗಿದ್ದು, ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ (Raghavnedra Rajkumar) ಕೂಡಾ ನಟಿಸಿರುವುದು ವಿಶೇಷ.
ಒಂದು ಸರಳ ಪ್ರೇಮಕಥೆ. ಸಿಂಪಲ್ಲಾಗ ಒಂದ್ ಲವ್ ಸ್ಟೋರಿ ಖ್ಯಾತಿಯ ಸಿಂಪಲ್ ಸುನಿ ಹೇಳುತ್ತಿರುವ ಸಿಂಪಲ್ ಲವ್ ಸ್ಟೋರಿ ಇದು. ಆದರೆ ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಇರೋ ಚಿತ್ರ. ಈ ಚಿತ್ರದಲ್ಲಿ ವಿನಯ್‌ಗೆ ಇಬ್ಬರು ಹೀರೋಯಿನ್‌ಗಳಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್. ಸ್ವಾತಿಷ್ಠ ಕೃಷ್ಣನ್ ಎಂದರೆ ವಿಕ್ರಂ ಚಿತ್ರದಲ್ಲಿ ಕಮಲ್ ಹಾಸನ್ ಸೊಸೆಯ ಪಾತ್ರದಲ್ಲಿ ನಟಿಸಿದ್ದವರು. ಇನ್ನು ಮಲ್ಲಿಕಾ ಸಿಂಗ್ (mallika Singh) ಎಂದರೆ ರಾಧಾ ಕೃಷ್ಣ ಧಾರಾವಾಹಿಯಲ್ಲಿ ರಾಧೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು.
ಅಂದಂತೆ ಈ ಚಿತ್ರದಲ್ಲಿ ಅಪ್ಪ ರಾಘವೇಂದ್ರ ರಾಜ್ʻಕುಮಾರ್ ಮಗನ ಚಿತ್ರದಲ್ಲಿ ಸಂಗೀತ ಗುರುವಿನ ಪಾತ್ರ ಮಾಡಿದ್ದಾರೆ. ಈ ಹಿಂದಿನ ಸಿನಿಮಾಗಳಿಗಿಂತಲೂ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹೊಸದೊಂದು ಚಾರ್ಮ್‌ನಿಂದಲೇ ಹೊಳೆಯುತ್ತಿದ್ದಾರೆ. ಅಪ್ಪ ಮಗ ಒಂದಾಗಿ ನಟಿಸಿರೋ ಚಿತ್ರದಲ್ಲಿ ಅಪ್ಪ-ಮಗನ ಪಾತ್ರದಲ್ಲಿಯೇ ನಟಿಸಿದ್ದಾರಾ ಏನ್ ಕಥೆ ಅನ್ನೋದನ್ನ ಸಿಂಪಲ್ಲಾಗಿ ಹೇಳಿಲ್ಲ ಡೈರೆಕ್ಟರ್.
ದ್ಯಾವ್ರೇ ಚಿತ್ರದ ಖ್ಯಾತಿ ವೀರ್ ಸಮರ್ಥ್ ಈ ಚಿತ್ರಕ್ಕಾಗಿ ೧೧ ಹಾಡುಗಳನ್ನು ಸೃಷ್ಟಿಸಿದ್ದಾರಂತೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧು ಕೋಕಿಲ ಸೇರಿದಂತೆ ಇನ್ನು ಅನೇಕರು ಅಭಿನಯಿಸಿದ್ದಾರೆ . ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ೮೩ ದಿನಗಳ ಶೂಟಿಂಗ್ ಮುಗಿಸಿ ಚಿತ್ರತಂಡ ಮೈಸೂರಿನಲ್ಲಿ ಕುಂಭಳಕಾಯಿ ಹೊಡೆದಿದೆ.
ಸಿನಿಮಾದ ಮೊದಲ ಸೀನ್ ಚಿತ್ರೀಕರಣ ಮಾಡಿದ್ದು ವಿನಯ್ ಅವರ ದೃಶ್ಯಕ್ಕೆ. ಕೊನೆಯ ಸೀನ್ ಶೂಟ್ ಮಾಡಿದ್ದು ರಾಘವೇಂದ್ರ ರಾಜಕುಮಾರ್ ಅವರ ದೃಶ್ಯಕ್ಕೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಸಿಂಪಲ್ ಸುನಿ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಕನ್ನಡ ಅನುವಾದದಂತಿದೆಯಲ್ಲ ಚಿತ್ರದ ಟೈಟಲ್ ಎಂದರೆ ಹೌದು, ಆದರೆ ಇದು ಮ್ಯೂಸಿಕಲ್ ಲವ್ ಸ್ಟೋರಿ ಎಂದು ಉತ್ತರ ಕೊಡ್ತಾರೆ ಸಿಂಪಲ್ ಸುನಿ.



