ಅಣ್ಣ ತಮ್ಮಂದಿರು ಎಂದರೆ ಹೀಗಿರಬೇಕು ಎನ್ನುವಂತೆ ಬದುಕಿದ್ದವರು ಅಣ್ಣಾವ್ರ ಮಕ್ಕಳು. ರಾಜ್`ಕುಮಾರ್ (Dr.Rajkumar) ಅವರ ಸಂಸ್ಕøತಿಯನ್ನು ಮುಂದುವರೆಸಿಕೊಂಡು ಬಂದಿದ್ದ ಶಿವಣ್ಣ (Dr. Shiva Rajkumar), ರಾಘವೇಂದ್ರ ರಾಜಕುಮಾರ್ (Raghavendra Rajkumar) ಹಾಗೂ ಪುನೀತ್ (Dr.Puneth Rajkumar) ಅವರ ನಡುವಿನ ಪ್ರೀತಿ, ಬಾಂಧವ್ಯ ನೋಡುವವರ ಕಣ್ಣು ಕುಕ್ಕುವಂತಿತ್ತು. ಆ ಪ್ರೀತಿಯ ಮೇಲೆ ಯಾರ ಕಣ್ಣು ಬಿತ್ತೋ.. ಏನೋ.. ಪುನೀತ್ ಇಲ್ಲವಾಗಿಬಿಟ್ಟರು. (August 15) ಆಗಸ್ಟ್ 15. ರಾಘವೇಂದ್ರ ರಾಜಕುಮಾರ್ ಹುಟ್ಟುಹಬ್ಬ. ಅಪ್ಪು ಇಲ್ಲವಾದ ಮೇಲೆ ರಾಘಣ್ಣ ಹುಟ್ಟುಹಬ್ಬದ ಸಂಭ್ರಮವೇ ಮರೆಯಾಗಿ ಹೋಗಿದೆ.
ಪ್ರತಿ ವರ್ಷ ನಾಲ್ಕೂ ಜನ ಬಂದು ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ವಿಷ್ ಮಾಡುತ್ತಿದ್ದರು, ಅದನ್ನು ಕಳೆದುಕೊಂಡಿದ್ದೇನೆ. ಈ ವರ್ಷವೂ ಸಹ ಮಕ್ಕಳು ಬಂದಿದ್ದರು, ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಅಶ್ವಿನಿ ಸಹ ವಿಷ್ ಮಾಡಿದರು. ಪುನೀತ್ ಪ್ರತಿ ವರ್ಷ ಮನೆಗೆ ಬಂದು ವಿಷ್ ಮಾಡುತ್ತಿದ್ದ. ಆಶೀರ್ವಾದ ತೆಗೆದುಕೊಳ್ಳುತಿದ್ದ. ಸಂಜೆ ಅವರ ಮಕ್ಕಳ ಕೈಲಿ ಉಡುಗೊರೆ ಕಳಿಸುತ್ತಿದ್ದರು. ನಾನು ಆಫೀಸ್ ನೋಡಿಕೊಳ್ಳುತ್ತಿದ್ದ ಕಾರಣ ಪ್ರತಿ ವರ್ಷ ನನಗೆ ಹೊಸ ಸೂಟ್ಕೇಸ್ ಕೊಡುತ್ತಿದ್ದರು ಮತ್ತು ಲೆಕ್ಕಗಳನ್ನು ನೋಡಿಕೊಳ್ಳುತ್ತಿದ್ದ ಕಾರಣ ಪ್ರತಿ ವರ್ಷವೂ ಹೊಸದೊಂದು ಲ್ಯಾಪ್ಟಾಪ್ ಸಹ ಕೊಡಿಸುತ್ತಿದ್ದರು. ಒಮ್ಮೊಮ್ಮೆ ಅಂತೂ ಕಾರ್ಡ್ ನನ್ನ ಕೈಗೆ ಕೊಟ್ಟು ನಿಮಗೆ ಇಷ್ಟವಾದುದು ತೆಗೆದುಕೊಳ್ಳಿ ಅಣ್ಣ ಎನ್ನುತ್ತಿದ್ದ ಎಂದು ನೆನಪಿಸಕೊಂಡು ಭಾವುಕರಾಗುತ್ತಾರೆ ರಾಘಣ್ಣ.
ಪುನೀತ್ ನಿಧನದ ನಂತರ ರಾಘವೇಂದ್ರ ರಾಜ್`ಕುಮಾರ್ ಕಲರ್ ಕಲರ್ ಡ್ರೆಸ್ ಹಾಕುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಯಾವ ಕಾರ್ಯಕ್ರಮಕ್ಕೆ ಹೋದರೂ ಹೂವಿನ ಹಾರ ಹಾಕಿಸಿಕೊಳ್ಳಲ್ಲ. ಬಲವಂತ ಮಾಡಿದರೆ, ನಯವಾಗಿ ತಿರಸ್ಕರಿಸುತ್ತಾರೆ. ಅಭಿಮಾನಿಗಳು ಬಲವಂತ ಮಾಡಿ ಹಾರ ಹಾಕಬೇಕು. ಅತ್ತ ಅಭಿಮಾನಿಗಳನ್ನೂ ನೋಯಿಸುವುದಕ್ಕೆ ಮನಸ್ಸಿಲ್ಲದೆ ಸುಮ್ಮನಾಗಿದ್ದೂ ಇದೆ.
ಅಪ್ಪು ಹೋದ ಮೇಲೆ ಸಂಭ್ರಮ ಮಾಡುವ ಆಸೆ ಹೋಗಿದೆ, ಉಡುಗೊರೆ ಏನನ್ನೂ ಸ್ವೀಕರಿಸಲ್ಲ, 58 ವರ್ಷವಾಯಿತು, ಇಲ್ಲಿ ವರೆಗೆ ತೆಗೆದುಕೊಂಡಿದ್ದೇ ಆಗಿದೆ, ಇನ್ನು ಮೇಲೆ ಸಮಾಜಕ್ಕೆ ಕೊಡಬೇಕು ಎಂಬ ಯೋಚನೆ ಅಪ್ಪು ಇಂದಾಗಿ ನನ್ನಲ್ಲಿ ಮೂಡಿದೆ. ಅಪ್ಪು ಹಲವು ಜವಾಬ್ದಾರಿ ವಹಿಸಿ ಹೋಗಿದ್ದಾನೆ, ನನ್ನ ಜೀವ ತೇದಾದರೂ ಆ ಕೆಲಸಗಳನ್ನು ಮುಗಿಸುವ ಪ್ರಯತ್ನ ಮಾಡುತ್ತೇನೆ. ಇತ್ತೀಚೆಗಷ್ಟೆ ಉತ್ತರ ಕರ್ನಾಟಕದ ಶಾಲೆಯೊಂದರಲ್ಲಿ ಶೌಚಾಲಯ ಕಟ್ಟಿಸಿಕೊಟ್ಟೆವು, ಶಾಲೆಯ ಮಕ್ಕಳು ಬಹಳ ಖುಷಿ ಪಟ್ಟರು ಎಂದಿದ್ದಾರೆ ರಾಘಣ್ಣ.
ಇತ್ತ ತಮ್ಮನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿರುವ ಶಿವರಾಜಕುಮಾರ್ ತಮ್ಮನಾಗಿ ನನಗೆ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ. ಕುಟುಂಬದ ಪ್ರತಿಯೊಬ್ಬರ ಜೊತೆಗೂ ಸ್ಫೂರ್ತಿಯಾಗಿ ನಿಂತಿದ್ದೀಯ. ಯಶಸ್ಸು, ಆಯಸ್ಸು, ಸುಖ, ಸಂತೋಷ, ಎಲ್ಲವೂ ನಿನ್ನ ಪಾಲಿಗಿರಲಿ. ಹುಟ್ಟು ಹಬ್ಬದ ಶುಭಾಶಯಗಳು ರಾಘು ಎಂದು ಟ್ವೀಟ್ ಮಾಡಿದ್ದಾರೆ.
ಯಶಸ್ಸು ಆಯಸ್ಸನ್ನು ಕೋರಿದ ಶಿವಣ್ಣನ ಮಾತಿಗೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಅಂದಹಾಗೆ ರಾಘಣ್ಣ ಅವರಿಗೆ ವ್ಯವಹಾರ ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ ಮೂರೂ ಕುಟುಂಬಗಳ ಸಂಸ್ಥೆಗಳು ಕೂಡಾ ಬೇರೆ ಬೇರೆ ಇದ್ದರೂ, ರಾಘಣ್ಣ ಮಾರ್ಗದರ್ಶನ ಇದ್ದೇ ಇರುತ್ತದೆ. ರಾಘಣ್ಣ ಅವರ ಮಾತನ್ನು, ಸಲಹೆಯನ್ನು ಯಾರೂ ತೆಗೆದು ಹಾಕುವುದಿಲ್ಲ.



