ರಚಿತಾ ರಾಮ್ ಎಂದರೆ ನೆನಪಾಗುವುದು.. ಏನು.. ಗುಳಿ ಬೀಳುವ ಕೆನ್ನೆ. ಚೇತೋಹಾರಿಯಾದ ನಗು. ಮುದ್ದು ಮುದ್ದು ಮಾತು. ನಟಿಸಿರುವ ಚಿತ್ರಗಳ ಪಟ್ಟಿಯನ್ನೊಮ್ಮೆ ನೋಡಿದರೆ.. ರಿಯಲ್ ಲೈಫಿನಂತೆಯೇ ಚಿತ್ರಗಳಲ್ಲೂ ಗುಡ್ ಗರ್ಲ್.
ನಗುತ್ತಾ.. ನಗಿಸುತ್ತಾ.. ಹ್ಯಾಪಿಯಾಗಿರುತ್ತಾ.. ತರಲೆ ಮಾಡುತ್ತಾ.. ಪಟಪಟನೆ ಮಾತನಾಡುವ ಬಬ್ಲಿ ಬಬ್ಲಿ. ಪಕ್ಕದ್ಮನೆ ಹುಡುಗಿ. ಆಯುಷ್ಮಾನ್ ಭವ ಚಿತ್ರದಲ್ಲಿನ ಹುಚ್ಚಿಯ ಪಾತ್ರ, ಉಪೇಂದ್ರ ಎದುರು ʻಐ ಲವ್ ಯೂʼನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದ ಪಾತ್ರ.. ಮಿಕ್ಕೆಲ್ಲ ಪಾತ್ರಗಳೂ ಸೇಮ್ ಟು ಸೇಮ್.
ಅಂತಹ ಡಿಂಪಲ್ ಕ್ವೀನ್ʻರನ್ನೂ ಭಯ ಹುಟ್ಟಿಸುವಂತೆ ತೋರಿಸಿದ್ದಾರೆ ಲೋಕೇಶ್ ಕನಕರಾಜ್. ಹೋಮ್ಲಿ ಗರ್ಲ್.. ಡಿಂಪಲ್ ಕ್ವೀನ್ ರಚ್ಚು, ರಜನಿಕಾಂತ್ ಅಭಿನಯದ ಕೂಲಿ ಚಿತ್ರದಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾರೆ. ಅಯ್ಯೋ.. ಪಾಪ.. ಪಾಪಚ್ಚಿ ಎನಿಸುವಂತೆ ಪ್ರೊಜೆಕ್ಟ್ ಆಗುವ, ಕಣ್ಣೀರು ಸುರಿಸುತ್ತಲೇ ಇರುವ, ಅಳುಮುಂಜಿ ಇದ್ದಕ್ಕಿದ್ದಂತೆ ಗೇರ್ ಬದಲಿಸಿಬಿಡ್ತಾರೆ. ಪ್ರೇಕ್ಷಕ ಶಾಕ್. ಆಗುವುದು ಗ್ಯಾರಂಟಿ.
ನಿಜಕ್ಕೂ ಕೂಲಿಯಲ್ಲಿ ರಚಿತಾ ರಾಮ್ ಅವರ ಪಾತ್ರ, ನಂತರ ಭಯ ಹುಟ್ಟಿಸುವಂತಿದೆ. ಡಿಂಪಲ್ ಕ್ವೀನ್ ಇಲ್ಲಿ ಸಿಂಪಲ್ ಅಲ್ಲ.. ವಿಲನ್. ಕಲ್ಯಾಣಿ ಎಂಬ ಪಾತ್ರದಲ್ಲಿ ನಟಿ ರಚಿತಾ ರಾಮ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಅವರನ್ನು ತೆರೆಯ ಮೇಲೆ ನೋಡಿದ ಕನ್ನಡದ ರಚಿತಾ ಫ್ಯಾನ್ಸ್ ಅಂತೂ.. ಅರೆ.. ನಮ್ ಹುಡ್ಗೀ ಕೆರಳಿದ್ರೆ.. ಹಿಂಗೆಲ್ಲ ಕಾಣ್ತಾರಾ ಎಂದು ಬೆರಗಾಗಿದ್ದಾರೆ. ಸರ್‌ಪ್ರೈಸ್ ಎಂದರೆ ಅದು ರಚಿತಾ ರಾಮ್. ಅವರಿಗೆ ಮೊದಲ ಬಾರಿಗೆ ಅತ್ಯುತ್ತಮ ಪಾತ್ರ ಸಿಕ್ಕಿದೆ. ರಚಿತಾ ಸರ್‌ಪ್ರೈಸ್ ಪ್ಯಾಕೇಜ್. ಇದನ್ನು ನಿರೀಕ್ಷಿಸಿರಲಿಲ್ಲ.. ಎನ್ನುತ್ತಿದ್ದಾರೆ. ತಮ್ಮ ನಗುವಿನಿಂದಲೇ ಖ್ಯಾತರಾಗಿದ್ದ ರಚಿತಾ ಇಲ್ಲಿ ಅಳುತ್ತಾ ಬೆಚ್ಚಿ ಬೀಳಿಸ್ತಾರೆ. ಅಳುವುವವರನ್ನು ಯಾವತ್ತು ನಂಬಬಾರದು ಮೇಡಂ ಎಂದು ಕಿಚಾಯಿಸುತ್ತಿರುವ ಪ್ರೇಕ್ಷಕರು, ಅಭಿನಯಕ್ಕೆ ಫಿದಾ ಆಗಿರುವುದು ನಿಜ. ವಿಕ್ರಂ ಚಿತ್ರದಲ್ಲಿನ ಏಜೆಂಟ್ ಟೀನಾ ಪಾತ್ರ ಕೊಡುವ ಶಾಕ್ʻನಂತೆಯೇ ಕಲ್ಯಾಣಿ ಕ್ಯಾರೆಕ್ಟರ್ ಇದೆ.
ನಟಿ ರಚಿತಾ ರಾಮ್ ರಜನಿಕಾಂತ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದು ‘‘ಈ ಫೋಟೋ ನನ್ನ ಗ್ಯಾಲರಿಯಲ್ಲಿ ಅಡಗಿತ್ತು. ಇದನ್ನೂ ಹಂಚಿಕೊಳ್ಳಲು ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದೆ ರಜಿನಿ ಸರ್, ಲವ್ ಯೂ’’ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಸಿನಿಮಾ ನೋಡಿದ ಬಹುತೇಕರು ಕನ್ನಡದ ನಿರ್ದೇಶಕರನ್ನೇ ಬಯ್ಯುತ್ತಿರುವುದು ವಿಚಿತ್ರ. ಕಾರಣ.. ಇಷ್ಟು ಚೆಂದ ಆಕ್ಟಿಂಗ್ ಕೆಪಾಸಿಟಿ ಇರುವ ನಟಿಯನ್ನು ಬರೀ ಗ್ಲಾಮ್ ಪಾತ್ರಗಳಿಗೆ ಲಿಮಿಟ್ ಮಾಡುತ್ತಿರುವುದೇಕೆ ಎನ್ನುವುದು ಅವರ ಪ್ರಶ್ನೆ. ಕನ್ನಡದದಲ್ಲಿ ರಚಿತಾ ರಾಮ್ ದರ್ಶನ್, ಸುದೀಪ್, ಪುನೀತ್, ದುನಿಯಾ ವಿಜಯ್, ಗಣೇಶ್, ಉಪೇಂದ್ರ, ಧ್ರುವ ಸರ್ಜಾ, ನೀನಾಸಂ ಸತೀಶ್, ಶ್ರೀಮುರಳಿ, ಶಿವಣ್ಣ, ರಮೇಶ್ ಅರವಿಂದ್, ಅಭಿಷೇಕ್ ಅಂಬರೀಷ್, ನಿಖಿಲ್ ಕುಮಾರಸ್ವಾಮಿ, ಅಜೇಯ್ ರಾವ್, ರಾಣಾ.. ಹೀಗೆ ಎಲ್ಲ ಸ್ಟಾರ್ ಹಾಗೂ ಕೆಲವು ಹೊಸ ನಟರ ಜೊತೆಯಲ್ಲೂ ನಟಿಸಿದ್ದಾರೆ. ಆದರೆ.. ಡಿಫರೆನ್ಸ್ ಕಾಣಿಸುತ್ತಿರುವುದು ಕೂಲಿಯಲ್ಲಿ. ಕೂಲಿಯಲ್ಲಿ ಮಾತ್ರ.



