ಒಂದು ಸಿನಿಮಾ ಬಿಡುಗಡೆಗೂ ಮುನ್ನವೇ ಕ್ರೇಜ್ ಸೃಷ್ಟಿಸಬೇಕೆಂದರೆ.. ಪ್ರಚಾರ ಮಾಡಬೇಕು. ಪ್ರಚಾರ ವಿಭಿನ್ನವಾಗಿರಬೇಕು. ವಿಶೇಷವಾಗಿರಬೇಕು. ಅದ್ಧೂರಿಯಾಗಿರಬೇಕು. ಟಾರ್ಗೆಟ್ ಆಡಿಯನ್ಸ್ ಗುರಿಯನ್ನಿಟ್ಟುಕೊಂಡೇ ಸಿನಿಮಾ ಪ್ರಚಾರ ಮಾಡುತ್ತಾರೆ. ಸ್ಟಾರ್‍ಗಳನ್ನು ಹಾಕಿಕೊಂಡು ಸಿನಿಮಾ ಮಾಡೋದು ಒಂದು ಮಾರ್ಗವಾದರೆ, ಸ್ಟಾರ್`ಗಳಿಲ್ಲದೆಯೇ ಇರುವಾಗ ಸ್ಟಾರ್‍ಗಳನ್ನು ಕರೆಸಿ ಪ್ರಚಾರ ಮಾಡೋದು ಬೇರೆ. ಅಂದಹಾಗೆ ಇದೆಲ್ಲ ಹೇಳಬೇಕಾಗಿ ಬಂದಿದ್ದಕ್ಕೆ ಕಾರಣ ಇದೆ. ಆಸ್ಕರ್ ಪ್ರಶಸ್ತಿ ಘೋಷಣೆಯ ದಿನ ಹತ್ತಿರವಾಗುತ್ತಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ಇಡೀ ಆರ್.ಆರ್.ಆರ್. ತಂಡ ಈಗ ಅಮೆರಿಕದಲ್ಲಿದೆ. ಆರ್.ಆರ್.ಆರ್. ಚಿತ್ರದ ನಾಟು ನಾಟು.. ಹಾಡು ಪ್ರಶಸ್ತಿ ರೇಸ್‍ನಲ್ಲಿರುವುದೇ ಇದಕ್ಕೆ ಕಾರಣ. ಆರ್.ಆರ್.ಆರ್. ಮತ್ತು ಆಸ್ಕರ್ ರೇಸ್ ಎರಡರ ನಡುವೆ ಕಥೆ ಇದೆ. ಕೇವಲ ಪ್ರಶಸ್ತಿ ಸುತ್ತಿಗೆ ಹೋಗುವುದಲ್ಲ, ಚಿತ್ರವನ್ನು ಕ್ಯಾಂಪೇನ್ ಮಾಡಬೇಕು. ಆ ನಿಟ್ಟಿನಲ್ಲಿ ಆರ್.ಆರ್.ಆರ್. ತಂಡ ಶ್ರಮವಹಿಸಿದೆ. ಹಾಗಂತ ಅದು ಸುಮ್ಮನೆ ಆಗುವ ಮಾತಲ್ಲ, ಖರ್ಚಾಗುತ್ತೆ. ಅದು ಕೋಟಿ ಕೋಟಿಗಳಲ್ಲಿಯೇ ಇರುತ್ತೆ. ಆರ್.ಆರ್.ಆರ್. ತಂಡ ಖರ್ಚನ್ನೂ ಮಾಡಿದೆ. ಆದರೆ ಆ ಖರ್ಚು ಕೆಲವರ ಕೆಂಗಣ್ಣಿಗೂ ಗುರಿಯಾಗಿದೆ.
ಆಸ್ಕರ್ ಕ್ಯಾಂಪೇನ್ಗಾಗಿ ಆರ್ಆರ್ಆರ್ ಸಿನಿಮಾ ತಂಡವು 80 ಕೋಟಿ ರೂ. ಖರ್ಚು ಮಾಡಿದೆ. ಆ 80 ಕೋಟಿ ರೂ.ಗಳನ್ನು ಕೊಟ್ಟರೆ 8 ಸಿನಿಮಾ ಮಾಡುತ್ತೇವೆ.


ಇಂತಾದ್ದೊಂದು ಮಾತು ಹೇಳಿರುವ ನಿರ್ದೇಶಕನ ಹೆಸರು ತಮ್ಮಾರೆಡ್ಡಿ ಭಾರದ್ವಾಜ್. ಈತ ನಿರ್ಮಾಪಕನೂ ಹೌದು. ಇತ್ತೀಚೆಗೆ ರವೀಂದ್ರ ಭಾರತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹಿರಿಯ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ ನಡೆದ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದಾರೆ ತಮ್ಮಾರೆಡ್ಡಿ. ತಮ್ಮಾರೆಡ್ಡಿ 90ರ ದಶಕದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ. ಶಿವ ಶಕ್ತಿ, ಪಚನಿ ಸಂಸಾರಂ, ಊರ್ಮಿಳಾ, ವೇಟಗಾಡು, ಸ್ವರ್ಣಮುಖಿ, ಎಂಥಾ ಬಾಗುಂದೋ, ಪೋತೆ ಪೋನಿ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪ್ರತಿಘಟನ ಅವರ ನಿರ್ದೇಶನದ ಕೊನೇ ಸಿನಿಮಾ.
ಇದಕ್ಕೆ ಪರ ವಿರೋಧ ಹೇಳಿಕೆಗಳೂ ವ್ಯಕ್ತವಾಗುತ್ತಿವೆ. ಆಸ್ಕರ್ ಪ್ರಶಸ್ತಿಗಾಗಿ ಖರ್ಚು ಮಾಡುವುದರಲ್ಲಿ ತಪ್ಪೇನಿದೆ.. ಭಾರತೀಯ ಸಿನಿಮಾ ಪ್ರಮೋಟ್ ಮಾಡಿದರೆ ಭಾರತೀಯ ಸಿನಿಮಾಗಳಿಗೆ ಲಾಭವೇ ತಾನೇ.. ಅವರ ದುಡ್ಡು.. ಅವರ ಜಾತ್ರೆ.. ಮಧ್ಯೆ ನಿಮ್ಮದೇನು.. ಎನ್ನುವವರಿಗೇನು ಕೊರತೆಯಿಲ್ಲ. ಹೌದು..ಹೌದು. ಅವರು ಹೇಳ್ತಿರೋದು ಸರಿ. ಇಷ್ಟಕ್ಕೂ ನಮ್ಮ ಭಾರತೀಯ ಸಿನಿಮಾಗೆ ಫಾರಿನ್ನಿವರ ಮೆಚ್ಚುಗೆ ಕಟ್ಟಿಕೊಂಡು ನಮಗೇನಾಗಬೇಕು. ಹಾಲಿವುಡ್ ಮಂದಿ ಮೆಚ್ಚಿದರಷ್ಟೇ ಒಳ್ಳೆಯ ಸಿನಿಮಾ ಎಂಬ ಭಾವನೆ ಬಿಡಬೇಕು. ಅಷ್ಟು ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿ, ಪ್ರಶಸ್ತಿಗೂ ಕೋಟಿ ಕೋಟಿ ಸುರಿಯಬೇಕಾ ಅನ್ನೋವ್ರೂ ಇದ್ದಾರೆ. ಇದೆಲ್ಲದರ ಮಧ್ಯೆ ಮಾರ್ಚ್ 17ರಂದು ಆಸ್ಕರ್ ಘೋಷಣೆಯಾಗಲಿದೆ.


ಆರ್.ಆರ್.ಆರ್. ಆಸ್ಕರ್ ಪ್ರಚಾರದ ಖರ್ಚು ಈ ನಿರ್ದೇಶಕನ ಮಾತನ್ನೇ ನಂಬುವುದಾದರೆ 80 ಕೋಟಿ. ಇದು ಕಳೆದ ವರ್ಷದ ಸಖತ್ ಹಿಟ್ ಸಿನಿಮಾ ಕಾಂತಾರದ ಬಜೆಟ್‍ನ 5 ಪಟ್ಟು ಹೆಚ್ಚು. ಚಿತ್ರಕ್ಕೆ ಖರ್ಚು ಮಾಡಿದ್ದದ್ದು 500 ಕೋಟಿ. ದುಡಿದಿದ್ದು 1200 ಕೋಟಿ. ಅಂದಹಾಗೆ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಮಾಡುವ ಜ್ಯೂರಿಗಳಿರುತ್ತಾರಲ್ಲ.. ಅವರ ಗಮನ ಸೆಳೆಯಬೇಕೆಂದರೆ ಖರ್ಚು ಮಾಡಲೇಬೇಕು. ಇಲ್ಲಿ ಸಿನಿಮಾ ಮಾಡುವವರು ಹೇಗೆ ಹೊಸ ಪ್ರೇಕ್ಷಕರ ಗಮನ ಸೆಳೆಯೋಕೆ ಪ್ರಚಾರ ಮಾಡುತ್ತಾರೆಯೋ.. ಹಾಗೆಯೇ ಅಲ್ಲಿ ಜ್ಯೂರಿಗಳ ಗಮನ ಸೆಳೆಯೋಕೆ ಪ್ರಚಾರ ಮಾಡಬೇಕು. ಇಷ್ಟಕ್ಕೂ ಭಾರತೀಯ ಭಾಷೆಯೇ ಗೊತ್ತಿಲ್ಲದವರಿಗೆ ಭಾರತೀಯ ಚಿತ್ರದ ಬಗ್ಗೆ ಅರಿವು ಮೂಡಿಸುವುದು ಚಿತ್ರತಂಡದ ಕರ್ತವ್ಯ. ನಾನು ಸಿನಿಮಾ ಮಾಡುತ್ತೇನೆ, ಇಷ್ಟವಿದ್ದವರು ಬಂದು ನೋಡುತ್ತಾರೆ ಎಂಬ ಕಾಲ ಇದಲ್ಲ. ಅದರಲ್ಲಿಯೂ ಆಸ್ಕರ್ ಮಟ್ಟದಲ್ಲಂತೂ ಅಲ್ಲ. ಹೀಗಾಗಿ ಲಾಸ್ ಏಂಜಲೀಸ್‍ನಲ್ಲೇ ಉಳಿದಿರುವ ಆರ್.ಆರ್.ಆರ್. ತಂಡದ ಸದಸ್ಯರು ಚಿತ್ರವನ್ನು ದೊಡ್ಡ ಮಟ್ಟದಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿಯೇ ಈಗಾಗಲೇ ಹಾಲಿವುಡ್ ಕ್ರಿಟಿಕ್ಸ್, ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಾಮ್ ಚರಣ್ ಮತ್ತು ಎನ್.ಟಿ.ಆರ್. ಸ್ಟೇಜ್ ಶೋ ನೀಡಲಿದ್ದಾರೆ. ಆಸ್ಕರ್ ಬರಲಿ ಎಂಬುದು ಹಾರೈಕೆ. ಆದರೆ ಆಸ್ಕರ್ ಬರದೇ ಹೋದರೂ ವಿಶ್ವಮಟ್ಟದಲ್ಲಿ ರಾಜಮೌಳಿ, ರಾಮ್ ಚರಣ್, ಎನ್‍ಟಿಆರ್ ಮೊದಲಾದ ಆರ್.ಆರ್.ಆರ್. ತಂಡದವರಿಗೆ.. ಅದರ ಜೊತೆಯಲ್ಲೇ ಭಾರತೀಯ ಭಾಷೆಯ ಇತರೆ ಚಿತ್ರಗಳಿಗೆ ದೊಡ್ಡದೊಂದು ಮಾರುಕಟ್ಟೆ ಓಪನ್ ಆಗಲಿದೆ. 80 ಕೋಟಿ ಈ ನಿರ್ದೇಶಕರಿಗೆ ದೊಡ್ಡದಿರಬಹುದು. ಅಷ್ಟೆ..



