ಕುಂಚಿಟಿಗ (Kunchitiga) ಒಕ್ಕಲಿಗರನ್ನೂ (Okkaliga) ಒಬಿಸಿ ಪಟ್ಟಿಗೆ (OBC) ಶೀಘ್ರದಲ್ಲೇ ಸೇರಿಸಲಾಗುವುದು ಶಾಸಕ ಹಾಗೂ ನವದೆಹಲಿ ವಿಶೇಷ ಪ್ರತಿನಿಧಿಯೂ ಆಗಿರುವ ಟಿ.ಬಿ.ಜಯಚಂದ್ರ (TB Jayachandra) ಗ್ಯಾರಂಟಿ ಕೊಟ್ಟಿದ್ದಾರೆ. ಕುಂಚಿಟಿಗ (Kunchitiga) ಒಕ್ಕಲಿಗರಲ್ಲಿಯೇ (Okkaliga) ಇರುವ ಒಳ ಪಂಗಡ. ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ನಡೆಸಿದ ಕುಲಶಾಸ್ತ್ರ ಅಧ್ಯಯನದ ವರದಿ ಈಗಾಗಲೇ ರಾಷ್ಟ್ರಪತಿಗಳ ಕಚೇರಿಯಲ್ಲಿದೆ.
ಅಖಿಲ ಕುಂಚಿಟಿಗರ ಮಹಾಮಂಡಲ ಬೆಂಗಳೂರು ಮತ್ತು ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘ ತುಮಕೂರು ಸಹಭಾಗಿತ್ವದಲ್ಲಿ ನಗರದ ಕೋತಿತೋಪು ರಸ್ತೆಯ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಕುಂಚಿಟಿಗರಿಗೆ ಕೇಂದ್ರ ಸರ್ಕಾರದಿಂದ ಒಬಿಸಿ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಮಾಜದಲ್ಲಿ ಆರ್ಥಿಕ , ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜಗಳಿಗೆ ಶಕ್ತಿ ತುಂಬಲು ಹಾವನೂರು ಆಯೋಗ ರಚನೆ ಮಾಡಿದ್ದರು. ಹಾವನೂರು ಆಯೋಗವೂ ಸಹ ಕುಂಚಿಟಿಗ ಸಮುದಾಯ ಅತ್ಯಂತ ಹಿಂದುಳಿದ ಸಮಾಜ ಎಂದು ವರದಿ ನೀಡಿತ್ತು. ಆ ನಂತರ 1978ರಲ್ಲಿ ಮಂಡಲ್ ಕಮಿಷನ್ ವರದಿ ಬಂತು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ವರದಿ ನೀಡಬೇಕು ಎಂಬ ಆದೇಶದ ಹಿನ್ನಲೆಯಲ್ಲಿ ಗಂಗಟಗಾರರು, ಕುಂಚಿಟಿಗರು, ಒಕ್ಕಲಿಗರು ಗೌಡ ಎಲ್ಲರೂ ಹಿಂದುಳಿದ ಸಮಾಜಗಳೇ ಎಂದು ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಯಿತಾದರೂ ಅಂದು ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಯಿಂದ ಕೈಬಿಟ್ಟಪರಿಣಾಮ ಕುಂಚಿಟಿಗ ಸಮುದಾಯದ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವುದೇ ಸೌಲಭ್ಯ ಸಿಗದೆ ವಂಚಿತರಾಗುತಿ್ತದ್ದಾರೆ ಎಂದರು.
ಒಕ್ಕಲಿಗರಲ್ಲಿ ಎಷ್ಟು ಜಾತಿಗಳಿವೆ?
ಒಕ್ಕಲಿಗರಲ್ಲಿಯೇ ಗಂಗಟಕಾರ ಅಥವಾ ಗಂಗಡಕಾರ, ಮೊರಸು ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ (ಪಾಲಿಕರ್) ಒಕ್ಕಲಿಗ, ಸರ್ಪ ಒಕ್ಕಲಿಗ, ಹಾಲಕ್ಕಿ ಒಕ್ಕಲಿಗ, ಶೆಟ್ಟೆಯವರು, ದಾದ್ಲೆಯವರು, ಅರೆಭಾಷೆ ಗೌಡರು, ಉಪ್ಪಿನ ಕೊಳಗ ಒಕ್ಕಲಿಗರು, ದಾಸ ಒಕ್ಕಲಿಗರು, ಮುಳ್ಳು ಒಕ್ಕಲಿಗರು.. ಹೀಗೆ 100ಕ್ಕೂ ಹೆಚ್ಚು ಒಳಪಂಗಡಗಳಿವೆ. ಕುಂಚಿಟಿಗರು ಹೆಚ್ಚಾಗಿ ಕಂಡುಬರುವುದು ತುಮಕೂರು ಜಿಲ್ಲೆಯಲ್ಲಿ. ಆದರೆ ಒಬಿಸಿ ಪಟ್ಟಿಯಲ್ಲಿ ಈ ಕುಂಚಿಟಿಗರು ಇಲ್ಲ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕ ಮಾಡಿದ ನಂತರ ಮೈಸೂರು ನಡೆಸಿದ ಕುಲಶಾಸ್ತ್ರ ಅಧ್ಯಯನದಿಂದ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ 3ಎ ಮೀಸಲಾತಿ ನೀಡಿದ್ದು, ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಸಿಕ್ಕರೆ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ಪ್ರಾತಿನಿಧ್ಯ ಸಿಗಲಿದೆ. ಕುಂಚಿಟಿಗ ಸಮುದಾಯದ ಬೇಡಿಕೆ 28 ವರ್ಷಗಳದ್ದಾಗಿದ್ದು, ಅತ್ಯಂತ ದೊಡ್ಡ ಜನಸಂಖ್ಯೆಯುಳ್ಳ ನಮ್ಮ ಸಮಾಜದ ಮುಂದಿನ ಪೀಳಿಗೆಗಾಗಿ ಕೇಂದ್ರದ ಒಬಿಸಿ ಮೀಸಲಾತಿ ಅವಶ್ಯಕತೆ ಇದೆ ಎಂದು ಕಾರ್ಯಕ್ರಮದಲ್ಲಿದ್ದ, ವೇದಿಕೆಯ ಮೇಲಿದ್ದ ಭಾಷಣ ಮಾಡಿದವರೆಲ್ಲ ಅಭಿಪ್ರಾಯ ಪಟ್ಟರು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಎಂಎಲ್‍ಸಿ ಚಿದಾನಂದ ಗೌಡ, ಜಸ್ಟೀಸ್ ರೋಹಿಣಿ, ವಿಧಾನ ಪರಿಷತ್ ಸದಸ್ಯ ನವೀನ್ ಬೆಂಗಳೂರು ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ರಂಗಹನುಮಯ್ಯ, ಗೌರವಾಧ್ಯಕ್ಷ ಪುಟ್ಟೀರಪ್ಪ, ಕಸುವನಹಳ್ಳಿ ರಮೇಶ್ ಮಾತನಾಡಿದರು. ಸಭೆಯಲ್ಲಿ ಉದ್ಯಮಿ ಚಿತ್ರದುರ್ಗ ನವೀನ್, ನೇತಾಜಿ ಶ್ರೀಧರ್ ಕೆ., ಮಹಿಳಾ ಅಧ್ಯಕ್ಷೆ ಲಲಿತಾ ಮಲ್ಲಪ್ಪ, ಆಂಧ್ರಪ್ರದೇಶದ ಅನಂತರಾಜು, ಚಿಕ್ಕಮಗಳೂರಿನ ರಂಗನಾಥ್, ಮಧುಗಿರಿಯ ತುಂಗೋಟಿ ರಾಮಣ್ಣ, ಮಹಾಮಂಡಲದ ಕಾರ್ಯದರ್ಶಿ ಪ್ರೊ.ನಾಗೇಂದ್ರ, ಚಿಕ್ಕಬಳ್ಳಾಪುರದ ಶ್ರೀನಿವಾಸಗೌಡ, ದೊಡ್ಡೇಗೌಡ, ಚಿತ್ರದುರ್ಗದ ರಾಜು, ಶಿವಮೊಗ್ಗದ ಕಾಂತರಾಜು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಖಿಲ ಕುಂಚಿಟಿಗರ ಮಹಾಮಂಡಲದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಜಿಲ್ಲಾ ಮತ್ತು ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.



