ಬಾಯ್ಬಿಟ್ರೆ ಹುಷಾರ್ ಅಂತಾರೆ.. ಹೈಕಮಾಂಡ್ ಫೈನಲ್ ಅಂತಾರೆ : ಸುರ್ಜೇವಾಲ ಮಾತಿನ ಅರ್ಥ ಏನು..? ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ಕೊಡುವುದು ಬೇಡ. ಅದನ್ನು ಹೈಕಮಾಂಡ್ ನೋಡ್ಕೊಳ್ಳುತ್ತೆ ಅಂದಿದ್ದಾರೆ ಸುರ್ಜೇವಾಲ. ಅದೂ ಸಿಎಲ್‌ಪಿ ಸಭೆಯಲ್ಲಿ. ಸುರ್ಜೇವಾಲ ಹೇಳಿಕೆ ಸೃಷ್ಟಿಸಿದ ಸಂಚಲನ ಸೃಷ್ಟಿಸಿದೆ. ಹೀಗಂದ್ರೆ ಏನರ್ಥ ಅನ್ನೋದು ಅವರ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಬದಲಾಗ್ತಾರೆ ಅನ್ನೋ ಹೇಳಿಕೆ ಬೇಡ. ಸಿಎಂ ಬದಲಾವಣೆ ಬಗ್ಗೆ ಬಾಯಿಬಿಟ್ರೆ ಹುಷಾರ್ ಎಂದಿರೋ ಸುರ್ಜೇವಾಲ, ವಾರ್ನಿಂಗ್ ಕೊಟ್ಟು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬದಲಾವಣೆ ಯಾವುದು ಇಲ್ಲ ಎಂದು ಸಿಎಲ್‌ಪಿ ಸಭೆಯಲ್ಲಿ ಶಾಸಕರುಗಳ ಮುಂದೆ ಉಸ್ತುವಾರಿ ರಣದೀಪ್ ಸುರ್ಜೆವಾಲ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೇ ಮುಗಿದಿದ್ದರೆ ಅದೆಲ್ಲವೂ ನಿರ್ಧಾರವಾಗುವುದು ಹೈಕಮಾಂಡಿನಲ್ಲಿ ಎನ್ನುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ʻʻಸಿಎಂ ಬದಲಾವಣೆ ಹೈಕಮಾಂಡ್ ಹಂತದಲ್ಲಿ ನಡೆಯುತ್ತೆ, ಇಲ್ಲಿ ಅಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವ ಅಗತ್ಯ ಇಲ್ಲ. ಏನೇ ಇದ್ದರೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಬೇಕುʼʼ ಎನ್ನುವುದು ಸುರ್ಜೇವಾಲ ಮಾತು. ಈ ಬಗ್ಗೆ ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು. ಸಚಿವರೇ ಇರಲಿ, ಯಾರೇ ಇರಲಿ ಹೇಳಿಕೆ ನೀಡಬಾರದು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇದನ್ನ ಸಹಿಸಲ್ಲ. ಯಾವುದೇ ಕ್ರಮದ ಬಗ್ಗೆ ಹೈಕಮಾಂಡ್ ಹಿಂಜರಿಯಲ್ಲ. ಈ ಬಾರಿ ನಾವು 136 ಸ್ಥಾನಗಳನ್ನು ಪಡೆದಿದ್ದೇವೆ. ಗೊಂದಲ ಮೂಡಿಸಿದ್ರೆ 36ಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ ಸುರ್ಜೆವಾಲ, ಯಾವುದೇ ಸಮಸ್ಯೆ ಇದ್ದರೂ ಕುಳಿತು ಬಗೆಹರಿಸಿಕೊಳ್ಳಿ. ಸಿಎಂ ಹಾಗೂ ಡಿಸಿಎಂ ಜೊತೆ ಕುಳಿತು ಬಗೆಹರಿಸಿಕೊಳ್ಳಿ ಎಂದು ಶಾಸಕರು, ಸಚಿವರಿಗೆ ಪಾಠ ಮಾಡಿದ್ಧಾರೆ.
ಆದರೆ ಸಿದ್ದು ಬಣದ ಶಾಸಕರಿಗೆ ಹೈಕಮಾಂಡ್ ಮಾತ್ರ ಮಾತನಾಡುತ್ತದೆ. ಮಾತನಾಡಬೇಕು ಎಂದಿರುವ ಹೇಳಿಕೆಯೇ ಕಣ್ಣು ಕುಕ್ಕಿದೆ. ಏಕೆಂದರೆ ಸುರ್ಜೇವಾಲ ಈ ಮಾತು ಹೇಳುವ ಮುಂಚೆ ಸಿಎಂ ಸಿದ್ದರಾಮಯ್ಯ ತ್ಯಾಗದ ಮಾತನಾಡಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾಡಿದ ತ್ಯಾಗವನ್ನು ಸ್ಮರಿಸಿರುವ ಸಿದ್ದರಾಮಯ್ಯ ನಮ್ಮಲ್ಲೂ ಕೂಡಾ ಈಗ ಸೋನಿಯಾ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ತ್ಯಾಗ ಮಾಡಿದ್ದಾರೆ, ನಾವು ಕೂಡಾ ಅದೇ ದಾರಿಯಲ್ಲಿ ನಡೆಯುವಂಥ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದಿದ್ದಾರೆ.
ಇದು ಸಂದರ್ಭ ಬಂದರೆ ತಾವು ತ್ಯಾಗಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಸಂದೇಶ ರವಾನಿಸಿದ್ದಾರೆ ಎಂದೇ ಸುದ್ದಿಯಾಗಿದೆ. ಮಾರ್ಮಿಕ ಮಾತನಾಡಿ ಅವರವರ ಲೆಕ್ಕಾಚಾರದ ಪ್ರಕಾರ ಅರ್ಥೈಸಿಕೊಳ್ಳುವಂತೆ ಮಾಡಿ ಸಿದ್ದರಾಮಯ್ಯ ಈಗ ಹೊಸ ಚರ್ಚೆ ಹುಟ್ಟುಹಾಕಿದ್ದು, ಕಾಂಗ್ರೆಸ್ನಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಹುಷಾರ್ ಎಂದ ಸುರ್ಜೇವಾಲರಿಂದಲೇ ಹೈಕಮಾಂಡ್ ನಿರ್ಧರಿಸುತ್ತೆ ಎಂಬ ಹೇಳಿಕೆ ಹಾಗೂ ಸಿಎಂ ಸಿದ್ದರಾಮಯ್ಯ ತ್ಯಾಗದ ಮಾತುಗಳನ್ನು ಕನೆಕ್ಟ್ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಸುರ್ಜೇವಾಲ ಮಾತಿನ ಹಿಂದಿನ ಅರ್ಥ ಹುಡುಕುತ್ತಿದ್ದಾರೆ.



