ಭಾರತದಲ್ಲಿದ್ದುಕೊಂಡು ಭಾರತವೇ ಸರ್ವನಾಶವಾಗಲಿ ಎಂದು ಕೂಗುವುದು ಕೇಳಿದರೆ ದೇಶವನ್ನು ಪ್ರೀತಿಸುವ, ಗೌರವಿಸುವ ವ್ಯಕ್ತಿಗಳಿಗೆ ಆಕ್ರೋಶ ಬಂದೇ ಬರುತ್ತದೆ. ಇತ್ತೀಚೆಗೆ ಭಾರತ ಸರ್ವನಾಶವಾಗಲಿ, ಹಿಂದೂಸ್ತಾನ್ ಮುರ್ದಾಬಾದ್ ಎಂದು ಕೂಗುವುದು ಫ್ಯಾಷನ್ ಕೂಡಾ ಆಗಿಬಿಟ್ಟಿದೆ. ನಮ್ಮ ವಿಧಾನಸೌಧದಲ್ಲೇ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದನ್ನು, ಅದನ್ನು ಸಮರ್ಥನೆ ಮಾಡಿಕೊಂಡವರನ್ನೂ ನಾವು ನೋಡಿದ್ದೇವೆ. ವಿಚಿತ್ರವೆಂದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುವ ವ್ಯಕ್ತಿಗಳೂ ಇದ್ದಾರೆ. ಇಂತಹ ಘೋಷಣೆ ಕೂಗಿದಾಗ ಕೇಸುಗಳಾಗುತ್ತವೆ, ವಿಚಾರಣೆ ನಡೆಯುತ್ತದೆ. ಮುಂದೇನು… ಗೊತ್ತಾಗುವುದಿಲ್ಲ. ಅಂಥಾದ್ದೊಂದು ವಿಶೇಷ ತೀರ್ಪು ನೀಡಿರುವುದು ಮಧ್ಯಪ್ರದೇಶ ಹೈಕೋರ್ಟ್.
ಏನಿದು ʻಹಿಂದೂಸ್ತಾನ್ ಮುರ್ದಾಬಾದ್ʼ ಪ್ರಕರಣ..?
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮಿಸ್ಸೋರ್ಡ್ ಅನ್ನೋ ಪೊಲೀಸ್ ಠಾಣೆ ಇದೆ. ಆ ಠಾಣೆಯ ವ್ಯಾಪ್ತಿಯಲ್ಲಿ ಫೈಝಲ್ ಅಲಿಯಾಸ್ ಫೈಜಾನ್ ಎಂಬ ಆರೋಪಿಯು ʻಹಿಂದೂಸ್ತಾನ್ ಮುರ್ದಾಬಾದ್ʼ ಘೋಷಣೆ ಕೂಗಿದ್ದ. ಈ ಘಟನೆ ನಡೆದಿದ್ದು ಮೇ ತಿಂಗಳು 17ನೇ ತಾರೀಕಿನಲ್ಲಿ. ಫೈಝಲ್ ವಿರುದ್ಧ ಸಿಆರ್‌ಪಿಸಿ 153ಬಿ ಅಡಿಯಲ್ಲಿ ಕೇಸ್ ಕೂಡಾ ದಾಖಲಾಗಿತ್ತು. ʻಹಿಂದೂಸ್ತಾನ್ ಮುರ್ದಾಬಾದ್ʼ ಎಂದು ಘೋಷಣೆ ಕೂಗಿದ್ದ ವಿಡಿಯೋ ವೈರಲ್ ಆಗಿತ್ತು. ಅರೆಸ್ಟ್ ಕೂಡಾ ಆಗಿದ್ದ. ಈತ ಈತನಿಗೆ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ನೀಡಿದೆ.
ತಿಂಗಳಿಗೆ 2 ಬಾರಿ 21 ಬಾರಿ ಭಾರತ್ ಮಾತಾ ಕಿ ಜೈ ಎನ್ನಬೇಕು :
ಹೌದು, ಅರೆಸ್ಟ್ ಆಗಿದ್ದ ಫೈಜಲ್ʻಗೆ ಜಾಮೀನು ನೀಡಿರುವ ನ್ಯಾಯಾಲಯ, ಫೈಜಲ್‌ಗೆ ತಿಂಗಳಿಗೆ ಎರಡು ಬಾರಿ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಬೇಕು. ಅಷ್ಟೇ ಅಲ್ಲ, ಎರಡೂ ಬಾರಿ ಠಾಣೆಯಲ್ಲಿ ಸಹಿ ಹಾಕುವ ಮುನ್ನ ರಾಷ್ಟ್ರಧ್ವಜದ ಎದುರು ನಿಂತು, ಸೆಲ್ಯೂಟ್ ಹೊಡೆಯಬೇಕು. ರಾಷ್ಟ್ರಧ್ವಜಕ್ಕೆ ಒಟ್ಟು 21 ಬಾರಿ ಸೆಲ್ಯೂಟ್ ಗೌರವ ನೀಡಿ, 21 ಬಾರಿಯೂ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಬೇಕು.
ಜಾಮೀನು ಪಡೆದ ಫೈಜಲ್, ಪೊಲೀಸ್ ಠಾಣೆಗೆ ತೆರಳಿ 21 ಸೆಲ್ಯೂಟ್ ಕೊಟ್ಟು, 21 ಬಾರಿ ಭಾರತ್ ಮಾತಾಕಿ ಜೈ ಎಂದು ಕೂಗಿದ್ದೂ ಆಗಿದೆ. ಇನ್ನು ಮುಂದೆ ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಮಂಗಳವಾರ ಆರೋಪಿ ಫೈಜಲ್, ಪೊಲೀಸ್ ಠಾಣೆಗೆ ಹೋಗಬೇಕು. 21 ಸೆಲ್ಯೂಟ್ ಕೊಡಬೇಕು. ಹಾಗೂ 21 ಬಾರಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಬೇಕು.
ಆದರೆ ಸರ್ಕಾರ ಆರೋಪಿ ಫೈಜಲ್‌ಗೆ ಜಾಮೀನು ಕೊಡುವುದಕ್ಕೇ ವಿರೋಧ ವ್ಯಕ್ತಪಡಿಸಿದೆ. ಆರೋಪಿ ಫೈಜಲ್ ಈ ರೀತಿ ವರ್ತಿಸಿರುವುದು ಇದೇ ಮೊದಲ ಬಾರಿ ಅಲ್ಲ. ಈತನ ವಿರುದ್ಧ ಒಟ್ಟು 14 ಕ್ರಿಮಿನಲ್ ಕೇಸುಗಳಿಗೆ. ಇಂತಹ ವ್ಯಕ್ತಿಗೆ ಜಾಮೀನು ಕೊಡಲೇಬಾರದು ಎಂದು ವಾದಿಸಿದೆ. ಅದನ್ನೂ ಪರಿಗಣಿಸಿರುವ ಕೋರ್ಟ್ ಆರೋಪಿ ಫೈಜಲ್ ಬಹಿರಂಗವಾಗಿ ತಾನು ಹುಟ್ಟಿದ, ತನ್ನನ್ನು ಪೋಷಿಸುತ್ತಿರುವ ದೇಶದ ವಿರುದ್ಧ ಘೋಷಣೆ ಕೂಗುವುದು ಸರಿ ಅಲ್ಲ ಎಂದು ಕೂಡಾ ಹೇಳಿದೆ. ಸರ್ಕಾರಿ ಪರ ವಕೀಲರ ವಿರೋಧದ ನಡುವೆಯೂ ಜಾಮೀನು ನೀಡಿರುವ ಹೈಕೋರ್ಟ್ ʻಪ್ರತಿ ತಿಂಗಳ ಮೊದಲನೇ ಮತ್ತು ನಾಲ್ಕನೇ ಮಂಗಳವಾರ ಫೈಜಲ್ ಪೊಲೀಸ್ ಠಾಣೆಗೆ ಹೋಗಬೇಕು. ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ಒಳಗೆ ಪೊಲೀಸ್ ಠಾಣೆಯ ಎದುರು ಇರುವ ರಾಷ್ಟ್ರಧ್ವಜಕ್ಕೆ 21 ಬಾರಿ ಸೆಲ್ಯೂಟ್ ಕೊಟ್ಟು, 21 ಬಾರಿಯೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಬೇಕುʼʼ ಎಂದು ಹೇಳಿದೆ. ಅಲ್ಲದೆ 50 ಸಾವಿರ ರೂ. ಸೆಕ್ಯುರಿಟಿ ಪಡೆದು ಷರತ್ತಿನ ಜಾಮೀನು ನೀಡಿದೆ. ಆರೋಪಿಯ ವಿರುದ್ಧ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಈ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುವ ಷರತ್ತು ಜಾರಿಯಲ್ಲಿರುತ್ತದೆ ಎಂದೂ ಹೇಳಿದೆ.



