ರಾಜ್ಯದಲ್ಲಿ ತಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಮಾಧ್ಯಮಗಳು (Media) ಹಾಗೂ ಸೋಷಿಯಲ್ ಮೀಡಿಯಾಗಳ (Social Media) ವಿರುದ್ಧ ಕೇಸು ಹಾಗೂ ಶಿಕ್ಷೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸರ್ಕಾರದ ವಿರುದ್ಧ ನಕಲಿ ಪೋಸ್ಟ್ಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಗಟ್ಟುವ ಉದ್ದೇಶದಿಂದಲೇ ಫ್ಯಾಕ್ಟ್ ಚೆಕ್ ಘಟಕವನ್ನು (Fact Chcek) ತೆರೆಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ವಾರ ಸಚಿವರಾದ ಪರಮೇಶ್ವರ್ (Parameshwar) ಮತ್ತು ಖರ್ಗೆ (Priayank Kharge) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರೊಂದಿಗೆ ಸಭೆ ನಡೆಸಿ ಫ್ಯಾಕ್ಟ್ಚೆಕ್ ಘಟಕ ಸ್ಥಾಪನೆ ಸೇರಿದಂತೆ ನಿಯಮಾವಳಿಗಳನ್ನು ಅಂತಿಮ ಮಾಡಲಿದ್ದಾರೆ.
ದೇಶದಲ್ಲಿ ಸರ್ಕಾರದ ಕಡೆಯಿಂದ ಸುಳ್ಳು ಸುದ್ದಿಗಳ ಪತ್ತೆ ಕಾರ್ಯ ನಡೆಯುತ್ತಿರುವುದು ಕೇವಲ ಶೇ.18.5 ರಷ್ಟು ಮಾತ್ರ. ರಾಜ್ಯದಲ್ಲಿ ಇದು ಇನ್ನೂ ಕಡಿಮೆ ಇದೆ. ಶೇ.60 ರಷ್ಟು ಜನತೆ ಸುಳ್ಳು ಸುದ್ದಿಗಳನ್ನು ನಂಬಿ, ಅದನ್ನೇ ಇತರರಿಗೂ ಹರಡುತ್ತಾರೆ ಎಂಬುದು ಅಧ್ಯಯನವೊಂದರ ಮಾಹಿತಿಯಾಗಿದೆ.
ಫ್ಯಾಕ್ಟ್ ಚೆಕ್ (Fact Chcek) ಘಟಕ ಸ್ಥಾಪನೆಯಿಂದ ಸುಳ್ಳು ಸುದ್ದಿ ಪೋಸ್ಟ್ ಮಾಡುವವರು ಹಾಗೂ ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಗೃಹ ಇಲಾಖೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ನೀಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ಅಧಿಕಾರಿಗಳು ಮತ್ತು ತಜ್ಞರ ಸಭೆ ನಡೆಸಿದ್ದಾರೆ.
ಹೇಗೆ ನಡೆಯುತ್ತೆ ಫ್ಯಾಕ್ಟ್ ಚೆಕ್..?
ಫ್ಯಾಕ್ಟ್ ಚೆಕ್ (Fact Chcek) ಘಟಕ ಪ್ರತ್ಯೇಕವಾಗಿ ಶುರುವಾಗಲಿದೆ. ಈಗ ಫ್ಯಾಕ್ಟ್ಚೆಕ್ ಮಾಡುತ್ತಿರುವ ಆಲ್ಟ್ ನ್ಯೂಸ್, ಬೂಮ್ ಲೈವ್, ಈ ದಿನ, ಲಾಜಿಕಲಿ ಮೊದಲಾದ ಏಜೆನ್ಸಿಗಳ ನೆರವು ಪಡೆಯಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡು ರೀತಿಯ ಸುಳ್ಳು ಸುದ್ದಿಗಳ ದಾಳಿ ನಡೆಯುತ್ತದೆ. ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಮತ್ತು ಸರ್ಕಾರದ ವಿರುದ್ಧ ಮಾಡುವ ಸುಳ್ಳು ಸುದ್ದಿಗಳ ಪರಿಶೀಲನೆ ನಡೆಯಲಿದೆ. ಕೋಮುಭಾವನೆ ಕೆರಳಿಸುವ, ವೈಯಕ್ತಿಕ ತೇಜೋವಧೆಯಲ್ಲಿಯೂ ಸರ್ಕಾರವನ್ನು ಎಳೆದುತರುವವರ ವಿರುದ್ಧ ಕೇಸ್ ಹಾಕಲು ಸರ್ಕಾರ ನಿರ್ಧಾರ ಮಾಡಿದೆ.
ಏನು ಶಿಕ್ಷೆ..?
ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ದಂಡ, ಜೈಲು ಸೇರಿ ವಿವಿಧ ಶಿಕ್ಷೆಗಳನ್ನು ನೀಡಲು ಆದೇಶಿಸಿದೆ. ಜತೆಗೆ ಐಪಿಸಿಯಲ್ಲಿರುವ ವಿವಿಧ ಕಲಂಗಳನ್ನು ಬಳಸಿಕೊಂಡು ಶಿಕ್ಷೆ ನೀಡಲಾಗುತ್ತದೆ. ಪ್ರತ್ಯೇಕವಾದ ಕಾನೂನನ್ನೇ ಮಾಡಬೇಕಾ ಎಂಬ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಆದರೆ ತಕ್ಷಣಕ್ಕೆ ಕಾರ್ಯಕಾರಿ ಆದೇಶವೊಂದರ ಮೂಲಕ ಜಾರಿಗೆ ನೀಡಲಾಗುತ್ತದೆ.
ಅಲ್ಲಿಗೆ ಸುಳ್ಳು ಸುದ್ದಿ ಹಾಕಿದರೆ, ವೈಯಕ್ತಿಕ ತೇಜೋವಧೆ ಮಾಡಿದರೆ, ಸರ್ಕಾರವನ್ನು ಲಂಗುಲಗಾಮಿಲ್ಲದೆ ಟೀಕೆ ಮಾಡಿದರೆ ಒಂದೋ ದಂಡ ಕಟ್ಟಬೇಕು ಇಲ್ಲವೇ ಜೈಲಿಗೆ ಹೋಗಲು ಸಿದ್ಧರಾಗಬೇಕು.
ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಾರದು ಎನ್ನುವುದು ಇದರ ಉದ್ದೇಶ. ವಾಕ್ ಸ್ವಾತಂತ್ರ್ಯಕ್ಕೆ ಹಾಗೂ ಟೀಕೆ ಮಾಡುವುದಕ್ಕೆ ಅಲ್ಲ. ಈ ಮೂಲಕ ಸುಳ್ಳು ಸುದ್ದಿ ನಿಯಂತ್ರಣವನ್ನಷ್ಟೇ ತಡೆ ಹಿಡಿಯುವ ಉದ್ದೇಶ ಸರ್ಕಾರದ್ದು ಎಂದಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ.



