ಯುವ ರಾಜ್ಕುಮಾರ್ ನಟನೆಯ ಎರಡನೇ ಸಿನಿಮಾದ ಹೆಸರು ‘ಎಕ್ಕ’. ವಿಶೇಷ ಅಂದ್ರೆ ಇದು ಕೂಡಾ ಮೊದಲನೇ ಸಿನಿಮಾದಂತೆಯೇ ಪುನೀತ್ ಅವರ ನೆನಪು ತರುತ್ತಿದೆ. ಟೈಟಲ್ ನೋಡುತ್ತಿದ್ದರೆ ಮತ್ತೊಮ್ಮೆ ಪುನೀತ್ ನೆನಪಾಗ್ತಾರೆ. ಎಕ್ಕ.. ಎಂದ ಕೂಡಲೇ ಜಾಕಿ ಚಿತ್ರದ ʻಎಕ್ಕ ರಾಜ ರಾಣಿ..ʼ ಹಾಡು ನೆನಪಾಗುತ್ತದೆ.
ಅಷ್ಟೇ ಅಲ್ಲ, ಇದೂ ಕೂಡಾ ಬಳಕೆಯಾಗಿರುವ ಟೈಟಲ್ಲೇ. ಈ ಹಿಂದೆ ಕನ್ನಡದಲ್ಲಿಯೇ ʻಯಕ್ಕʼ ಎನ್ನುವ ಸಿನಿಮಾ ಬಂದಿತ್ತು. ಇದು ಇಸ್ಪೀಟ್ ಅಲ್ಲ ಗುರು ಎನ್ನುವ ಟ್ಯಾಗ್ ಲೈನ್ ಕೂಡಾ ಇತ್ತು. ನಾಗನಾಥ್ ಎಂ ಜೋಶಿ ಎಂಬುವವರು ನಿರ್ಮಾಣ ಮಾಡಿ, ನಿರ್ದೇಶಿಸಿದ್ದ ಚಿತ್ರದಲ್ಲಿ ಭರತ್ ಕಲ್ಯಾಣ್, ಸುಭಾಷಿಣಿ, ರಮೇಶ್ ಪೊವಾರ್ ಎಂಬುವವರು ನಟಿಸಿದ್ದರು.
ಇನ್ನು ʻಯುವʼ ಹೆಸರಿನ ಚಿತ್ರವೂ ಹಿಂದೊಮ್ಮೆ ಬಂದಿದ್ದ ಚಿತ್ರದ ಟೈಟಲ್ಲು. ಅಲ್ಲದೆ ಯುವ ಚಿತ್ರದಲ್ಲಿಯೂ ಪುನೀತ್ ಅವರ ಯುವರತ್ನ ಚಿತ್ರದ ನೆನಪಾಗುತ್ತಿತ್ತು.
ಈಗ ಎಕ್ಕ (ಈ ಹಿಂದೆ ರಿಲೀಸ್ ಆಗಿದ್ದ ಚಿತ್ರದ ಟೈಟಲ್ ʻಯಕ್ಕʼ. ಎಕ್ಕ ಅಲ್ಲ. ಯ ಬದಲು ಇಲ್ಲಿ ಎ ಬಳಸಲಾಗಿದೆ) ಚಿತ್ರದ ಟೈಟಲ್ ಮತ್ತು ಎರಡು ಪೋಸ್ಟರುಗಳನ್ನು ರಾಜ್ಯೋತ್ಸವದ ದಿನವೇ ಬಿಡುಗಡೆ ಮಾಡಲಾಗಿದೆ. ಇದೊಂದು ರಕ್ತಸಿಕ್ತ ಕಥೆ ಎಂಬ ಸುಳಿವು ಕೊಟ್ಟಿದ್ದ ಚಿತ್ರತಂಡ, ಎರಡು ಪೋಸ್ಟರುಗಳಲ್ಲೂ ಅದನ್ನೇ ಹೇಳುತ್ತಿದೆ.
ಒಂದು ಪೋಸ್ಟರ್ನಲ್ಲಿ ರಕ್ತದಲ್ಲಿ ಅದ್ದಿ ತೆಗೆದಂತಿರುವ ಯುವ ಕೈಯಲ್ಲಿ ರಕ್ತ ಮೆತ್ತಿದ ಆಯುಧ ಹಿಡಿದಿದ್ದಾರೆ. ಯಾರನ್ನೋ ಕೊಲ್ಲಲು ಹೊರಟಂತಿರುವ ಚಿತ್ರವಿದೆ. ರಕ್ತ-ಸಿಕ್ತ ಫೈಟ್, ಯಾವುದೋ ಮಾಂಸದ ಅಂಗಡಿಯಲ್ಲಿ ನಡೆಯುತ್ತಿದ್ದು, ಯುವ ಹಿನ್ನೆಲೆಯಲ್ಲಿ ಚರ್ಮ ಸುಲಿದ ಮಾಂಸದ ತುಂಡುಗಳು ನೇತಾಡುತ್ತಿವೆ. ಆ ಮಾಂಸವನ್ನು ನೇತು ಹಾಕಲು ಬಳಸುವ ವಸ್ತುವನ್ನೇ ಶತ್ರುಗಳನ್ನು ಕೊಲ್ಲಲು ಆಯುಧವನ್ನಾಗಿ ಹಿಡಿದಿದ್ದಾರೆ ಯುವ. ಇದಿಷ್ಟು ಒಂದು ಪೋಸ್ಟರ್ ಡೀಟೈಲ್ಸ್. ಇನ್ನೊಂದು ಪೋಸ್ಟರ್ನಲ್ಲಿ ಯುವ ರಾಜ್ಕುಮಾರ್ ಕೈಗೆ ಪೊಲೀಸರು ಕೋಳ ಹಾಕಿದ್ದಾರೆ. ಯುವ ರಾಜ್ಕುಮಾರ್ ಬಟ್ಟೆಯೆಲ್ಲ ರಕ್ತ ರಕ್ತ. ರಸ್ತೆಯ ಮೇಲೆ ಮಲಗಿರುವ ಯುವ ಕಡೆ ಪೊಲೀಸರು ಬಂದೂಕು ಗುರಿ ಇಟ್ಟಿದ್ದಾರೆ.
ಯುವ ರಾಜ್ಕುಮಾರ್ ನಟನೆಯ ಎರಡನೇ ಸಿನಿಮಾ ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶಕ. ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲಮ್ಸ್ ನಿರ್ಮಾಣದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಅಶ್ವಿನಿ ಪುನೀತ್, ಜಯಣ್ಣ-ಭೋಗೇಂದ್ರ ಹಾಗೂ ಕಾರ್ತಿಕ್ ಗೌಡ-ಯೋಗಿ ಜಿ ರಾಜ್ ನಿರ್ಮಾಪಕರಾಗಿದ್ದಾರೆ.
ಎಕ್ಕ ಅಂದ್ರೆ ಇಸ್ಪೀಟ್ ಆಟದಲ್ಲಿ ಬರುವ ಏಸ್ ಕಾರ್ಡ್ ಎಂದರ್ಥ ಇದೆ. ಎಕ್ಕ ಎಂದರೆ ಎಕ್ಕದ ಎಲೆ ಎಂಬ ಅರ್ಥವೂ ಇದೆ. ಎಕ್ಕ ಎಂದರೆ ಶ್ರೀಲಂಕನ್ ವೇದಗಳಲ್ಲಿ ನಡೆಯುವ ವಿಶಿಷ್ಟ ಆಚರಣೆ ಎಂಬ ಅರ್ಥವೂ ಇದೆ. ಆದೆ ಪೋಸ್ಟರಿನಲ್ಲಿ ಮಾತ್ರ ಇದ್ಯಾವುದೂ ಇಲ್ಲದೆ, ಕೇವಲ ರಕ್ತಸಿಕ್ತ ಕಥೆಯನ್ನಷ್ಟೇ ಹೇಳೋ ಪ್ರಯತ್ನವೂ ಇದೆ.



