ಒಬ್ಬ ನಟನ ಚಿತ್ರಗಳು ದುಡ್ಡು ಮಾಡುತ್ತಿದ್ದರೆ.. ಆ ಹೀರೋ ಹಿಂದೆ ನಿರ್ಮಾಪಕರು ಕ್ಯೂ ನಿಲ್ಲೋದು ಕಾಮನ್. ಆದರೆ.. ಪುನೀತ್ ಹಾಗಲ್ಲ. ಅವರು ಜೀವಂತವಾಗಿರುವುದು ಅಭಿಮಾನಿಗಳ ಹೃದಯದಲ್ಲಿ ಮಾತ್ರ. ಹೀಗಾಗಿಯೇ.. ಅವರ ಹಳೆಯ ಚಿತ್ರಗಳಿಗೂ ಸಖತ್ ಡಿಮ್ಯಾಂಡ್ ಇದೆ. ಜಾಕಿ ರಿ-ರಿಲೀಸ್ ಹಿಟ್ ಆದದ್ದರ ಎಫೆಕ್ಟ್, ಪುನೀತ್ ರಾಜ್ ಕುಮಾರ್ ಅವರ ಇನ್ನೊಂದಷ್ಟು ಹಳೆಯ ಸಿನಿಮಾಗಳು ಮತ್ತೆ ಬಿಡುಗಡೆಯಾಗುತ್ತಿವೆ.
ಜಾಕಿ ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿ ಭರ್ಜರಿ ಬಿಸಿನೆಸ್ ಮಾಡಿತ್ತು. ಅದೇ ರೀತಿ ತಾವೂ ಲಾಭ ಮಾಡಬಹುದು ಎಂಬ ಲೆಕ್ಕಾಚಾರ, ಪುನೀತ್ ಅವರ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕರಿಗೆ ಶುರುವಾಗಿದೆ. ತಪ್ಪೇನಿಲ್ಲ. ಎಲ್ಲದರ ಜೊತೆಗೆ.. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಯಾವುದೂ ರಿಲೀಸ್ ಆಗುತ್ತಿಲ್ಲ ಎನ್ನುವುದೂ ಇದಕ್ಕೆ ಕಾರಣ. ಕಾರಣ ಎಲೆಕ್ಷನ್. ಆದರೆ.. ಕರ್ನಾಟಕದಲ್ಲಿ ಎಲೆಕ್ಷನ್ ಹವಾ ಮೇ ೭ಕ್ಕೆ ಕೊನೆಯಾಗಲಿದೆ. ಅದು ಮುಗಿದ ಮೇಲೆ ಅಂಜನಿಪುತ್ರ ರಿ-ರಿಲೀಸ್ ಆಗಲಿದೆ. ಮೇ ೧೦ಕ್ಕೆ.
ಎಂ.ಎನ್. ಕುಮಾರ್ ನಿರ್ಮಾಣದ ‘ಅಂಜನಿಪುತ್ರ’ 2017ರ ಡಿಸೆಂಬರ್ 21ರಂದು ಬಿಡುಗಡೆ ಆಗಿತ್ತು. ಪುನೀತ್ ಅವರಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು. ಎ.ಹರ್ಷ ನಿರ್ದೇಶನದ ಅಂಜನಿಪುತ್ರ ಆವರೇಜ್ ಹಿಟ್ ಎನಿಸಿಕೊಂಡಿತ್ತು. ಇದೀಗ ಅದೇ ಸಿನಿಮಾವನ್ನು ಮತ್ತೊಮ್ಮೆ ರಿಲೀಸ್ ಮಾಡಲಾಗುತ್ತಿದೆ.
ಅಂಜನಿಪುತ್ರ 2017ರಲ್ಲಿ ರಿಲೀಸ್ ಆಗಿತ್ತಾದರೂ ದೊಡ್ಡ ಮಟ್ಟದ ಹಿಟ್ ಆಗಿರಲಿಲ್ಲ. ಅಷ್ಟು ಹೊತ್ತಿಗೆ ರಶ್ಮಿಕಾ ಮಂದಣ್ಣ ಫೇಮಸ್ ಸ್ಟಾರ್ ಆಗಿದ್ದರೂ.. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದರೂ.. ಕಥೆಯಲ್ಲಿ ಹೊಸತನ ಇರಲಿಲ್ಲ. ಅಲ್ಲದೆ.. ಪುನೀತ್ ಚಿತ್ರದಲ್ಲಿ ಅದೇ ಮೊದಲ ಬಾರಿಗೆ ಡಬಲ್ ಮೀನಿಂಗ್ ಕಾಮಿಡಿಯೂ ಇತ್ತು. ಪುನೀತ್ ಅಭಿಮಾನಿಗಳಿಗೆ ಅದು ಇಷ್ಟವಾಗಿರಲಿಲ್ಲ.
ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಥಿಯೇಟರಿಗೆ ಬಂದಿರಲಿಲ್ಲ. ಹಾಗಂತ ನಿರ್ಮಾಪಕರಿಗೆ ಮೋಸವೂ ಆಗಿರಲಿಲ್ಲ. ಹಾಕಿದ ಬಂಡವಾಳಕ್ಕಿಂತ ಡಬಲ್ ಬಿಸಿನೆಸ್ ಆಗಿತ್ತು. ಇದೀಗ ಅದೇ ಚಿತ್ರವನ್ನು ರಿ-ರಿಲೀಸ್ ಮಾಡ್ತಿರೋದು ಅಚ್ಚರಿ ಹುಟ್ಟಿಸಿರುವುದಂತೂ ನಿಜ.



