ತಾವು ಜಾಸ್ತಿ ಓದುವುದಕ್ಕೆ ಆಗಲಿಲ್ಲ. ಓದಲಿಲ್ಲ. ಎಷ್ಟೋ ಜನ ಸ್ಟಾರ್ ನಟ ನಟಿಯರು ಅದನ್ನೊಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೆ, ಶಾಲೆ, ಕಾಲೇಜಿನಲ್ಲಿ ನಾನು ಓದಲಿಲ್ಲ ಅನ್ನೋದನ್ನೇ ಸಾಧನೆ ಎಂಬಂತೆ ಹೇಳಿಕೊಳ್ಳುತ್ತಿದ್ದರೆ, ಅದನ್ನು ನಾಚಿಕೆಯಿಂದ ಹಿಂಜರಿಕೆಯಿಂದಲೇ ಹೇಳುತ್ತಿದ್ದವರು ನಟ ಪುನೀತ್ ರಾಜ್ ಕುಮಾರ್. ನೀವು ಹಾಗೆ ಮಾಡಬೇಡಿ, ದಯವಿಟ್ಟು ಓದಿ ಎಂದು ಪದೇ ಪದೇ ಹೇಳುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಕನಸುಗಳಲ್ಲಿ ಒಂದು ಶಿಕ್ಷಣ. ಅಗತ್ಯ, ಅರ್ಹತೆ ಇದ್ದೂ ಶಿಕ್ಷಣ ಪಡೆಯಲು ಸಾಧ್ಯವಾಗದ ಹಲವರಿಗೆ ಯಾರಿಗೂ ಕಾಣದಂತೆ ಸಹಾಯ ಮಾಡಿದ್ದ ಅಪ್ಪುಗೆ ಒಂದು ವಿಶೇಷ ಕನಸಿತ್ತು. ಗುಣಮಟ್ಟದ ಶಿಕ್ಷಣ ಕೊಡಬೇಕು ಎನ್ನುವುದು.
ಪುನೀತ್ ರಾಜ್ ಕುಮಾರ್ ಅವರ ಆ ಕನಸನ್ನು ನನಸು ಮಾಡಲು ಮುಂದಾಗಿರುವ ಅಶ್ವಿನಿ ಪುನೀತ್, ಬೆಂಗಳೂರಿನ ರಾಜಾಜಿನಗರನಲ್ಲಿ ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಆರಂಭಿಸಿದ್ದಾರೆ. ಅದಕ್ಕೆ ಸಾಥ್ ಕೊಟ್ಟಿರುವುದು ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಹಾಗೂ ಅಪ್ಪು ಅಭಿಮಾನಿ ಆಂಕರ್ ಅನುಶ್ರೀ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ರಾಜಾಜಿನಗರ ಬ್ರ್ಯಾಂಚ್ ಉದ್ಘಾಟನಾ ಕಾರ್ಯಕ್ರಮಕ್ಕೆ ಗೋಪಾಲಯ್ಯ ಹಾಗೂ ಅನುಶ್ರೀ ವಿಶೇಷ ಅತಿಥಿಯಾಗಿ ಆಗಮಿಸಿ, ಅಶ್ವಿನಿ ಅವರ ಶೈಕ್ಷಣಿಕ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಉದ್ಘಾಟನೆ ಮಾಡಿದ ಅನುಶ್ರೀ ʻʻರಾಜಾಜಿನಗರನಲ್ಲಿ ಉದ್ಘಾಟನೆಗೊಂಡಿರುವುದು 12ನೇ ಬ್ರ್ಯಾಂಚ್. ಕಿರಣ್ ಹಾಗೂ ದೀಪ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ನನ್ನ ಕಡೆಯಿಂದ ಅವರಿಗೆ ಬೆಸ್ಟ್ ವಿಷಸ್. ಪೋಸ್ಟರ್‌ನಲ್ಲಿ ನಮ್ಮ ಬಾಸ್ ಅಪ್ಪು ಸರ್ ಇದ್ದಾರೆ. ಅವರು ಎಲ್ಲಿ ಇರುತ್ತಾರೋ ಅಲ್ಲಿ ಪವರ್ ಇರುತ್ತದೆ. ಇಲ್ಲಿ ಬಂದು ಕಲಿಯುವ ಮಗು ಅಪ್ಪು ಸರ್ ಅವರ ಗುಣಗಳ ಜೊತೆಗೆ ಒಳ್ಳೆ ವಿದ್ಯೆ ಕಲಿತು ದೊಡ್ಡ ಹೆಸರು ಮಾಡಲಿ” ಎಂದು ಹಾರೈಸಿದರು.
ಜೂನಿಯರ್ ಟೋಸ್ ಅಪ್ಪು ಸರ್ ಹಾಗೂ ಅಶ್ವಿನಿ ಮೇಡಂ ಅವರ ಅತಿ ದೊಡ್ಡ ಕನಸು. ಅಪ್ಪು ಸರ್ಗೆ ಕ್ವಾಲಿಟಿ ಎಜುಕೇಶನ್ ಕೊಡಬೇಕೆಂದು ಬಹಳ ಇಷ್ಟವಿತ್ತು. ಅಪ್ಪು ಸರ್ ಕಿರಿ ವಯಸ್ಸಿನಲ್ಲಿಯೇ ಅತಿ ದೊಡ್ಡ ಯಶಸ್ಸು ಕಂಡ ಪ್ರತಿಭೆ. ಆ ಪ್ರತಿಭೆ ಅನ್ನೋದು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಕಂಡುಹಿಡಿದು, ಅದಕ್ಕೊಂದು ಮಾರ್ಗ ಕಂಡುಹಿಡಿದು, ವೇದಿಕೆ ಕಲ್ಪಿಸಿಕೊಡಲು ಜೂನಿಯರ್ ಟೋಸ್ ಎಂಬ ಹೊಸದೊಂದು ಸಂಸ್ಥೆ ಶುರುವಾಗಿದೆ ಎಂದಿದ್ದಾರೆ ಅನುಶ್ರೀ.
ನಾನು ಹಾಗೂ ಅಪ್ಪು ಅವರು ಕಳೆದ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರ ಪ್ರವೇಶಿಸುವ ಕನಸು ಕಂಡಿದ್ದೆವು. ಈ ಯೋಜನೆ ನಮ್ಮ ಕನಸನ್ನು ನನಸಾಗಿಸುತ್ತಿದೆ. ಪ್ರತೀ ಮಗುವಿನ ಸಾಮರ್ಥ್ಯ ಪೋಷಿಸುವ ಶಾಲೆಗಳನ್ನು ರಚಿಸುವುದು, ಶಿಕ್ಷಣ ಸಾಮರ್ಥ್ಯ ಮಾತ್ರವಲ್ಲದೇ ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದು ನಮ್ಮ ಉದ್ದೇಶ ಎಂದು ಹೇಳಿಕೊಂಡಿದ್ದ ಅಶ್ವಿನಿ ಅವರ ಈ ಸಾಹಸಕ್ಕೆ ಸ್ಪೂರ್ತಿಯುತ ಭಾಷಣದಿಂದಲೇ ಹೆಸರುವಾಸಿಯಾಗಿರುವ ಸ್ಫೂರ್ತಿ ವಿಶ್ವಾಸ್, ಖ್ಯಾತ ಶಿಕ್ಷಣ ತಜ್ಞೆ ಸುನಿತಾ ಗೌಡ ಮತ್ತು ಶೃತಿ ಕಿರಣ್ ಕೈಜೋಡಿಸಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ 1 ಕೇಂದ್ರವಿದೆ. ಡಾ.ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಜೂನ್‌ನಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಪುನೀತ್ ರಾಜ್ಕುಮಾರ್ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದರು. ‘ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್’ ಮೂಲಕ ಅಶ್ವಿನಿ ಪುನೀತ್ ರಾಜ್ಕುಮಾರ್ ಆ ಕನಸು ನನಸು ಮಾಡಿದ್ದಾರೆ.



