ದುನಿಯಾ ಸೂರಿ ಎಂದೇ ಫೇಮಸ್ ಆಗಿರುವ ಸುಕ್ಕಾ ಸೂರಿಗೆ ಹೆಸರು ತಂದು ಕೊಟ್ಟಿದ್ದು ದುನಿಯಾ. ಆ ಚಿತ್ರದ ಮೂಲಕ ವಿಜಯ್ ʻದುನಿಯಾ ವಿಜಯ್ʼ ಆದರು. ಸೂರಿ ʻದುನಿಯಾ ಸೂರಿʼ ಆದರು. ನಾಯಕಿ ರಶ್ಮಿ ʻದುನಿಯಾ ರಶ್ಮಿʼ ಆದರು. ಅದಾದ ಮೇಲೆ ವಿಜಯ್ ಜೊತೆ ಜಂಗ್ಲಿ ಅನ್ನೋ ಇನ್ನೊಂದು ಹಿಟ್ ಕೊಟ್ಟ ಸೂರಿಗೆ, ಸ್ಟಾರ್ ಪಟ್ಟ ತಂದು ಕೊಟ್ಟಿದ್ದು ಜಾಕಿ.
ಜಾಕಿ ಚಿತ್ರ ದೊಡ್ಮನೆ ಬ್ಯಾನರ್ ಸಿನಿಮಾ. ಹೀರೋ ಪುನೀತ್ ರಾಜ್ ಕುಮಾರ್. ಸಿನಿಮಾ ದಾಖಲೆಯನ್ನೇ ಬರೆಯಿತು. ಅದಾದ ಮೇಲೆ ಅದೇ ಪುನೀತ್ ಜೊತೆ ಅಣ್ಣಾ ಬಾಂಡ್ ಅನ್ನೋ ಸಿನಿಮಾ ಮಾಡಿದರು. ಸಿನಿಮಾ ಜಾಕಿಯಂತೆ ಇತಿಹಾಸ ಬರೆಯಲಿಲ್ಲ. ಓಕೆ ಓಕೆ ಆವರೇಜ್ ಎನಿಸಿಕೊಂಡಿತು.
ಇನ್ನು ಶಿವಣ್ಣಗೆ ಸೂರಿ ನಿರ್ದೇಶಿಸಿದ ಎರಡು ಚಿತ್ರಗಳಿವೆಯಲ್ಲ, ಅವುಗಳ ಕಥೆಯೇ ಬೇರೆ. ಕಡ್ಡಿಪುಡಿ ಬಾಕ್ಸಾಫೀಸಿನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಿಲ್ಲವಾದರೂ, ಶಿವಣ್ಣ, ರಾಧಿಕಾ ಪಂಡಿತ್ ವೃತ್ತಿ ಜೀವನದ ಬೆಸ್ಟ್ ಚಿತ್ರಗಳಲ್ಲಿ ಒಂದಾಯ್ತು. ಕಲ್ಟ್ ಕ್ಲಾಸಿಕ್. ಅದಾದ ಮೇಲೆ ಟಗರು, ಬಾಕ್ಸಾಫೀಸ್ ಚಿಂದಿ ಉಡಾಯಿಸಿತು. ಇದೀಗ ಅದೇ ಸೂರಿ, ದೊಡ್ಮನೆ ಮತ್ತು ವಿಜಯ್ ಕುಟುಂಬದ ಕುಡಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾಗಿನ್ನೂ ಹೆಸರಿಟ್ಟಿಲ್ಲ.
ಯುವ ರಾಜ್ ಕುಮಾರ್ ಅಭಿನಯದ 3ನೇ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾಗೆ ದುನಿಯಾ ಕಾಂಬಿನೇಷನ್ ಜೊತೆಯಾಗಿರುವುದು ವಿಶೇಷ. ಅಂದರೆ ದುನಿಯಾ ಸೂರಿ ಡೈರೆಕ್ಟರ್ ಮತ್ತು ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕಿ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್, ಕಾರ್ತಿಕ್ ಗೌಡ-ಯೋಗಿ ಜಿ. ರಾಜ್ ಒಡೆತನದ ಕೆಆರ್‌ಜಿ ಸ್ಟುಡಿಯೋಸ್ ಮತ್ತು ಜಯಣ್ಣ-ಭೋಗೇಂದ್ರ ಒಡೆತನದ ಜಯಣ್ಣ ಫಿಲ್ಮ್ಸ್ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿವೆ. ಎಕ್ಕ ಚಿತ್ರದ ನಂತರ ಅದೇ ಪ್ರೊಡ್ಯೂಸರ್ ಕಾಂಬಿನೇಷನ್ನಿನಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ.
ಅಕ್ಷಯ ತೃತೀಯ ದಿನದಂದೇ ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ ಸಿನಿಮಾಗೆ ಸರಳವಾಗಿ ಮುಹೂರ್ತ ನೆರವೇರಿದೆ. ಹೊಸ ಸಿನಿಮಾಕ್ಕೆ ದುನಿಯಾ ವಿಜಯ್ ಅವರು ಕ್ಲ್ಯಾಪ್ ಮಾಡಿದರೆ, ಪುನೀತ್ ರಾಜ್‌ಕುಮಾರ್ ಅವರ ಮಗಳು ಧೃತಿ ಪುನೀತ್ ರಾಜ್ ಕುಮಾರ್ ಕ್ಯಾಮೆರಾ ಆನ್ ಮಾಡಿದ್ದಾರೆ. ಪುನೀತ್ ಅವರಿಗೆ ಜಾಕಿ, ಅಣ್ಣಾಬಾಂಡ್, ಶಿವಣ್ಣ ಅವರಿಗೆ ಕಡ್ಡಿಪುಡಿ, ಟಗರು ಚಿತ್ರಗಳನ್ನು ನಿರ್ದೇಶಿಸಿರುವ ದುನಿಯಾ ಸೂರಿ, ಈಗ ಅವರ ಮಗ ಯುವ ರಾಜ್ ಕುಮಾರ್ ಅವರಿಗೂ ಆಕ್ಷನ್ ಕಟ್ ಹೇಳುತ್ತಿರುವುದು ವಿಶೇಷ.
ದುನಿಯಾ ವಿಜಯ್ ಜೊತೆ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ರಿತನ್ಯಾಗೆ ಇದು ಎರಡನೇ ಸಿನಿಮಾವಾದರೆ, ಯುವ ರಾಜ್‌ಕುಮಾರ್‌ಗೆ ಇದು 3ನೇ ಚಿತ್ರ. ಸಿನಿಮಾಗೆ ದೀಪು ಎಸ್ ಕುಮಾರ್ ಸಂಕಲನ, ಚರಣ್ ರಾಜ್ ಸಂಗೀತ, ಸಂತೋಷ್ ಕಲಾ ನಿರ್ದೇಶನ, ಶೇಖರ್ ಛಾಯಾಗ್ರಹಣ ಇದೆ.