‘ಕರ್ನಾಟಕ ರತ್ನ’ ಪುನೀತ್ ರಾಜ್ ಕುಮಾರ್ ಅವರ ಬಾಡಿಗಾರ್ಡ್ ಆಗಿದ್ದ ಛಲಪತಿ ಪುತ್ರ ಹರ್ಷ ವರ್ಧನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95.2% ಅಂಕ ಪಡೆದುಕೊಂಡಿದ್ದಾರೆ. ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಹರ್ಷ ವರ್ಧನ್ 625ಕ್ಕೆ 595 ಅಂಕಗಳನ್ನು ಪಡೆದುಕೊಂಡಿದ್ದು, ಕನ್ನಡದಲ್ಲಿ 125ಕ್ಕೆ 121 ಅಂಕ ಪಡೆದಿರುವುದು ವಿಶೇಷ. ಇಂಗ್ಲಿಷ್‌ನಲ್ಲಿ 93, ಹಿಂದಿಯಲ್ಲಿ 100ಕ್ಕೆ 100, ಗಣಿತ, 97, ವಿಜ್ಞಾನ 86 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಹರ್ಷ ವರ್ಧನ್ ಪಡೆದುಕೊಂಡಿದ್ದಾನೆ. ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದಿರುವುದು ವಿಶೇಷ. ಮಗನ ಈ ಸಾಧನೆಗೆ ಛಲಪತಿ ದಂಪತಿ ಹೆಮ್ಮೆ ಪಟ್ಟಿದ್ದಾರೆ.
ಇದೇ ವರ್ಷದ ಪಿಯುನಲ್ಲಿ ಛಲಪತಿ ಅವರ ಮಗಳು ಅಮೂಲ್ಯ 93.33% ಮಾರ್ಕ್ಸ್ ಪಡೆದು, ಡಿಸ್ಟಿಂಕ್ಷನ್ ಪಡೆದುಕೊಂಡಿದ್ದರು. ಈಗ ಮಗನೂ ಡಿಸ್ಟಿಂಕ್ಷನ್ ಪಾಸ್. ಕನ್ನಡದಲ್ಲಿ 98, ಇಂಗ್ಲೀಷ್‌ನಲ್ಲಿ 90, ಎಕನಾಮಿಕ್ಸ್‌ನಲ್ಲಿ 97, ಬಿಸಿನೆಸ್ ಸ್ಟಡೀಸ್‌ನಲ್ಲಿ 90, ಅಕೌಂಟೆನ್ಸಿಯಲ್ಲಿ 96, ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕಗಳನ್ನ ಅಮೂಲ್ಯ ಪಡೆದುಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಮಗಳ ಸಾಧನೆಯನ್ನು ಕೊಂಡಾಡಿದ್ದ ಛಲಪತಿಗೆ ಈಗ ಮಗನಿಂದಲೂ ಖುಷಿ ಸಿಕ್ಕಿದೆ.
ಅಂದಹಾಗೆ ಛಲಪತಿಯವರೇ ಹೇಳಿಕೊಂಡಿದ್ದಂತೆ ಅವರ ಇಬ್ಬರೂ ಮಕ್ಕಳ ಓದಿನ ಜವಾಬ್ದಾರಿಯನ್ನು ಪುನೀತ್ ಅವರೇ ನೋಡಿಕೊಳ್ಳುತ್ತಿದ್ದರಂತೆ. ಪುನೀತ್ ಇರುವವರೆಗೆ ಮಕ್ಕಳ ಶಿಕ್ಷಣಕ್ಕೆ ಬೇಕಾದ ಖರ್ಚು ವೆಚ್ಚವನ್ನು ತಾವೇ ಕೇಳಿ ವಿಚಾರಿಸಿ ಹಣ ನೀಡುತ್ತಿದ್ದರಂತೆ. ಇದೀಗ ಪುನೀತ್ ಅವರ ಕನಸಿನಂತೆ ಛಲಪತಿ ಯವರ ಮಕ್ಕಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.
ತಮಗೆ ಉನ್ನತ ಶಿಕ್ಷಣ ಪಡೆಯಲು ಆಗಲಿಲ್ಲ. ಆದರೆ ಪ್ರತಿಯೊಬ್ಬರಿಗೂ ಶಿಕ್ಷಣ ತುಂಬಾ ಮುಖ್ಯ, ಅಗತ್ಯ. ಯಾವುದೇ ಕಷ್ಟವಾದರೂ ಓದುವುದನ್ನು ಬಿಡಬಾರದು ಎಂದು ಪದೇ ಪದೇ ಹೇಳುತ್ತಿದ್ದ ಪುನೀತ್, ನೂರಾರು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.
ಬೆಂಗಳೂರಿನ ಶಾಲೆಯೊಂದರ ಮಕ್ಕಳ ಶಿಕ್ಷಣಕ್ಕೆ ಬೇಕಾದ ಹಣವನ್ನು ಖುದ್ದಾಗಿ ಬಂದು ತಲುಪಿಸಿ, ಯಾರಿಗೂ ಹೇಳಬೇಡಿ ಎಂದು ಹೊರಟು ಹೋಗುತ್ತಿದ್ದ ವಿಷಯವನ್ನು ಪಬ್ಲಿಕ್ ಟಿವಿ ರಂಗನಾಥ್ ಹೇಳಿಕೊಂಡಿದ್ದರು. ಜಾಗಿಂಗ್ ಹೋಗುವ ಕಡೆ, ಸಿನಿಮಾ ಸೆಟ್ʻನಲ್ಲಿ ಕೆಲಸ ಮಾಡುವ ಹಲವರ ಮಕ್ಕಳಿಗೆ ಈ ರೀತಿ ಸಹಾಯ ಮಾಡಿರುವ ವಿಷಯವೂ ಕೂಡಾ ಅವರು ಮೃತಪಟ್ಟ ಮೇಲೆ ಗೊತ್ತಾಗಿತ್ತು. ಸಹಾಯ ಪಡೆದವರೇ ಹೇಳಿಕೊಳ್ಳುವವರೆಗೆ ಇದು ಯಾರಿಗೂ ಗೊತ್ತಿರಲಿಲ್ಲ ಎನ್ನುವುದೇ ವಿಶೇಷ. ಸಹಾಯ ಮಾಡುವುದಷ್ಟೇ ಅಲ್ಲದೆ ಅದನ್ನು ಯಾರಿಗೂ ಹೇಳಬಾರದು ಎಂಬ ಷರತ್ತು ಹಾಕುತ್ತಿದ್ದ ಪುನೀತ್, ಆ ಕಾರಣಕ್ಕಾಗಿಯೇ ದೊಡ್ಡಮನೆ ರತ್ನವಾದರು.
ಈಗ ಅವರು ಬಿತ್ತಿದ್ದ ಶಿಕ್ಷಣದ ಬೀಜಗಳು ಮೊಳಕೆ ಒಡೆಯುತ್ತಿವೆ. ಗಿಡವಾಗಿ ಮರವಾಗಿ ಫಸಲು ಬಿಟ್ಟರೆ ಅದು ಪುನೀತ್ ಅವರಿಗೆ ಸಾರ್ಥಕ ಉಡುಗೊರೆಯಾಗಲಿದೆ. ಕಂಗ್ರಾಟ್ಸ್ ಛಲಪತಿ ಮಕ್ಕಳೇ.. ಎನ್ನುತ್ತಿದ್ದಾರೆ ಅಭಿಮಾನಿ ದೇವರುಗಳು.