ಪುನೀತ್ ಕೆರೆಹಳ್ಳಿ. ಹಿಂದೂ ಪರ ಹೋರಾಟಗಾರ. ಸ್ವಯಂಘೋಷಿತ ಗೋರಕ್ಷಕರಾಗಿರುವ ಪುನೀತ್ ಕೆರೆಹಳ್ಳಿ, ಆಗಾಗ್ಗೆ ಅರೆಸ್ಟ್ ಆಗುತ್ತಲೆ ಇರುತ್ತಾರೆ. ಈ ಬಾರಿ ಜಮೀರ್ ಅಹ್ಮದ್ ಅವರನ್ನು ಟೀಕೆ ಮಾಡಿದ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಅರೆಸ್ಟ್ ಅಗಿದ್ದಾರೆ. ಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಕುಮಾರಸ್ವಾಮಿ ಅವರನ್ನು ʻಕಾಲಿಯಾʼ ಎಂದು ಲೇವಡಿ ಮಾಡಿದ್ದರು. ಅದಾದ ಮೇಲೆ ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ ಎಂದೇನೋ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಪುನೀತ್ ಕೆರೆಹಳ್ಳಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಲೇ ಜಮೀರ್ ಅಹಮದ್ ಖಾನ್, ಕುಮಾರಸ್ವಾಮಿ ಅವರನ್ನು ಕರಿಯಾ ಅಂದ ನೀನು ನನ್ನ ಈ ಮಾತುಗಳನ್ನು ಸರಿಯಾಗಿ ಕೇಳಿಸಿಕೊ.. ನಮ್ಮದೇ ನಾಡಿನಲ್ಲಿ, ನಮ್ಮದೇ ಜನರ ಮುಂದೆ ಅದೂ ನಮ್ಮ ನಾಯಕರ ಬಗ್ಗೆ ಅವರ ಬಣ್ಣವನ್ನು ಹಂಗಿಸಿ ಮಾತನಾಡಿದ್ದೀಯಾ. ನಿನಗೆಷ್ಟು ದುರಹಂಕಾರ ಹಾಗೂ ದರ್ಪ ಬಂತ ನಿ..*** ದೂಗಳ ವರ್ಣದ ಬಗ್ಗೆ ಮಾತಾಡ್ತಿದ್ದೀಯಾ, ಅರೆಬಿಕ್ ತ* ಇದು ಕರುನಾಡು ಕಣೋ.. ಕಪ್ಪು ಮಣ್ಣಿನ ನಾಡುಕಣೋ.. ಎಂದೆಲ್ಲ ಬೈದಿದ್ದರು. ಅಲ್ಲದೆ ವಿಡಿಯೋದಲ್ಲಿ ನೀನು ಚನ್ನಪಟ್ಟಣಕ್ಕೆ ಬಂದ್ರೆ ವಾಪಸ್ ಹೋಗಲ್ಲ ಎಂಬ ಅರ್ಥದ ಮಾತನ್ನಾಡಿದ್ದರು.
ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಸಹಾಯಕ ಬಿ. ಎಸ್. ಅಶೋಕ್ ಅವರು ಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿದ್ದು, ಜೊತೆಗೆ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಬುಧವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ನಂತರ ಪುನೀತ್ ಕೆರೆಹಳ್ಳಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಲಾಗಿದೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರವಾಗಿ ಪ್ರಚಾರ ಮಾಡುತ್ತಿದ್ದ ವೇಳೆ ತನ್ನ ಭಾಷಣದ ಮಧ್ಯೆ ಜಮೀರ್ ಅಹ್ಮದ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ‘ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಡೇಂಜರ್’ ಎಂದು ಉರ್ದುವಿನಲ್ಲಿ ಹೇಳಿದ್ದರು. ಜಮೀರ್ ಈ ಹೇಳಿಕೆ ಜನಾಂಗಿಯ ನಿಂದನೆ ಎಂದು ರಾಷ್ಟ್ರಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದರಿಂದ ಕಾಂಗ್ರೆಸ್‌ಗೆ ಮುಜುಗರವೂ ಆಗಿತ್ತು. ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ಆಗುತ್ತಿದ್ದಂತೆ ಕ್ಷಮೆಯಾಚನೆ ಮಾಡಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಸಚಿವ ಜಮೀರ್ ಖಾನ್, ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವ ಉದ್ದೇಶವೇ ಬೇರೆ, ಈ ಹಿಂದೆ ನಾನು ಅವರು ಜೊತೆಯಲ್ಲಿದ್ದಾಗ ನನ್ನನ್ನು ಕುಳ್ಳ ಎನ್ನುತ್ತಿದ್ದರು. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತಿದ್ದೆ ಎಂದು ಹೇಳಿದ್ದಾರೆ.
ಆದರೆ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ಅರೆಸ್ಟ್ ಆಗಿದ್ದಾರೆ. ಬೈದವರು ಮತ್ತು ಬೈಸಿಕೊಂಡವರು ಮಧ್ಯೆ ಬಂದವರು ಜೈಲು ಸೇರುವಂತಾಗಿದೆ. ಪುನೀತ್ ಕೆರೆಹಳ್ಳಿ ಈ ರೀತಿ ಅರೆಸ್ಟ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗೋರಕ್ಷಣೆ ಮಾಡಲು ಹೋಗಿದ್ದಾಗ ವ್ಯಕ್ತಿಯೊಬ್ಬರು ಮೃತಪಟ್ಟು, ಕೊಲೆ ಪ್ರಕರಣ ದಾಖಲಾಗಿತ್ತು. ಅದಾದ ನಂತರ ನಾಯಿ ಮಾಂಸ ವಿವಾದದಲ್ಲೂ ಅರೆಸ್ಟ್ ಆಗಿದ್ದರು. ಸುಳ್ಳು ಕೇಸು ಹಾಕುತ್ತಿದ್ದಾರೆ ಎಂದು ಉಪವಾಸ ಸತ್ಯಾಗ್ರಹ ಮಾಡಿ ಅರೆಸ್ಟ್ ಆಗಿದ್ದರು. ಈಗ ಜಮೀರ್ ಅಹ್ಮದ್ ಅವರನ್ನು ಟೀಕೆ ಮಾಡಿ ಜೈಲು ಸೇರಿದ್ದಾರೆ.



