ಹಿಂದೂ ಕಾರ್ಯಕರ್ತರಾಗಿ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಪುನೀತ್ ಕೆರೆಹಳ್ಳಿ ಮತ್ತೊಮ್ಮೆ ಅರೆಸ್ಟ್ ಆಗಿದ್ದಾರೆ. ಈ ಬಾರಿ ಅವರು ಮಾಡಿರುವ ತಪ್ಪೇನು ಎಂದರೆ.. ಪೊಲೀಸರು ಅಥವಾ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ತಾವೇ ಮಾಡಿದ್ದು. ಅಂದರೆ ಅಕ್ರಮ ಬಾಂಗ್ಲಾದೇಶಿ ನಾಗರಿಕರನ್ನು ಗುರುತಿಸಿದ್ದು ಮತ್ತು ದಾಖಲೆಗಳನ್ನು ಬಟಾಬಯಲು ಮಾಡಿದ್ದು ಎನ್ನುವುದು ವಿಶೇಷ. ದೂರು ಮತ್ತು ಬಂಧನದ ಕಂಪ್ಲೀಟ್ ಡೀಟೈಲ್ಸ್ ಹೀಗಿದೆ.
ಇತ್ತೀಚೆಗೆ ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ಸೇರಿ ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಶೆಡ್ಗಳಿಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದರು. ಶೆಡ್ ವಾಸಿಗಳ ಬಳಿ ರಾಷ್ಟ್ರೀಯತೆ ಬಗ್ಗೆ ಪ್ರಶ್ನೆ ಮಾಡಿದ್ದರು. ವಿಶೇಷ ಎಂದರೆ ಅದನ್ನು ವಿಡಿಯೋ ಮಾಡಿದಾಗ ಕೆಲವರು ತಾವು ಬಾಂಗ್ಲಾದೇಶದವರು, ಅಕ್ರಮವಾಗಿ ಬೆಂಗಳೂರಿಗೆ ಬಂದಿದ್ದೇವೆ ಎಂದು ಒಪ್ಪಿಕೊಂಡೂ ಇದ್ದರು. ಕೆಲವರ ಬಳಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಪತ್ತೆಯಾಗಿದ್ದವು. ಬ್ಯಾಂಕ್ ಲೋನ್ ಪಡೆದುಕೊಂಡಿದ್ದರು. ಇದೆಲ್ಲವನ್ನೂ ಸಾಕ್ಷಿ ಸಮೇತ ತೋರಿಸಿದ್ದರು ಪುನೀತ್ ಕೆರೆಹಳ್ಳಿ.
ಆ ಕೇಸಿನಲ್ಲಿ ಪುನೀತ್ ಕೆರೆಹಳ್ಳಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ಆಗಿದೆ.ಪುನೀತ್ ಕೆರೆಹಳ್ಳಿ ಮನೆಯ ಬಳಿಯೇ ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ‘ದ್ವೇಷದ ಮಾತಿನ ವಿರುದ್ದ ಜನಾಂದೋಲನ ವತಿಯಿಂದ ಇಮೇಲ್ ಮೂಲಕ ಮನವಿ ಸಲ್ಲಿಸಲಾಗಿತ್ತು.
ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಪತ್ತೆಹಚ್ಚಿದ ಕಾರ್ಯಕರ್ತರು ಅವರ ದಾಖಲೆಗಳನ್ನು ಪರಿಶೀಲಿಸಿದಾಗ, ಅವರ ಬಳಿ ಭಾರತಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ. ವಿಚಾರಣೆ ನಡೆಸಿದಾಗ ತಾವು ಬಾಂಗ್ಲಾದೇಶಿಗರು ಎಂದು ವಲಸಿಗರು ಒಪ್ಪಿಕೊಂಡಿದ್ದರು. ಇವರು ಕಳೆದ ಐದು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ಪುನೀತ್ ಕೆರೆಹಳ್ಳಿ ಅವರು ಈ ರೀತಿ ಗುರುತು ಪತ್ತೆ ಕಾರ್ಯಾಚರಣೆ ನಡೆಸುತ್ತಿರುವುದು ಅಕ್ರಮ ಎಂದು ಆರೋಪಿಸಿ ಕೆಲವು ಎಡಪಂಥೀಯ ಪತ್ರಿಕೆ, ಯೂಟ್ಯೂಬ್ ಚಾನೆಲ್ಲುಗಳು, ಕೆಲವು ಎಡಪಂಥೀಯ ಕಾರ್ಯಕರ್ತರು, ಪ್ರಮುಖರು, ಪತ್ರಕರ್ತರು ಸುದ್ದಿ ಮಾಡಿದ್ದರು. ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಪುನೀತ್ ಕೆರೆಹಳ್ಳಿ ಅವರಿಗೆ ಬಂಧನ ಹೊಸದಲ್ಲ. ಹಲವು ಹೋರಾಟ ಪ್ರಕರಣಗಳಲ್ಲಿ ಈಗಾಗಲೇ ಅರೆಸ್ಟ್ ಎದುರಿಸಿದ್ದಾರೆ. ಪುನೀತ್ ಅವರ ವಿರುದ್ಧ ಒಂದು ಕೊಲೆ ಆರೋಪವೂ ಇದೆ. ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಅರೆಸ್ಟ್ ಆಗಿದ್ದ ಪುನೀತ್ ಕೆರೆಹಳ್ಳಿ ʻಇನ್ನು ಮುಂದೆ ಸರ್ಕಾರದ ವಿರುದ್ಧ ಮಾತನಾಡಲ್ಲʼ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಅದು 2025ರಲ್ಲಿ ಆಗಿದ್ದ ಘಟನೆ.



