ಪುನೀತ್ ಕೂಡಾ ನಮ್ಮಂತೆಯೇ ಒಬ್ಬ ಮನುಷ್ಯ. ಒಳ್ಳೆಯ ಗುಣಗಳಿದ್ದವನು. ಅವನನ್ನು ಆರಾಧಿಸಿ. ಅವನು ನಡೆದ ಹಾದಿಯಲ್ಲಿ ನಡೆಯಿರಿ. ಆದರೆ ದಯವಿಟ್ಟು ಅವನನ್ನು ದೇವರು ಮಾಡಬೇಡಿ.. ಎಂದು ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದ್ದರೂ, ಅಭಿಮಾನಿಗಳು ಮಾತ್ರ ಪುನೀತ್ ಅವರನ್ನು ದೇವರಾಗಿಯೇ ನೋಡುತ್ತಿದ್ಧಾರೆ. ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದ ಪುನೀತ್ ರಾಜ್ ಕುಮಾರ್ ಅವರೇ, ಈಗ ಅಭಿಮಾನಿಗಳ ಪಾಲಿನ ದೇವರಾಗಿ ಹೋಗಿದ್ದಾರೆ.
ಪುನೀತ್ ಅವರ ಅಭಿಮಾನಿ, ಪುನೀತ್ ಅವರ ಹೆಸರಲ್ಲಿ ದೇವಸ್ಥಾನ ಕಟ್ಟಿಸುತ್ತಿರುವುದು ಗೊತ್ತಿಲ್ಲದ ವಿಷಯವೇನಲ್ಲ. ಪುನೀತ್ ಅಭಿಮಾನಿ ಆಗಿರುವ ಹಾವೇರಿಯ ಯಲಗಚ್ಚ ಗ್ರಾಮದ ಪ್ರಕಾಶ್ ಮತ್ತು ದೀಪಾ ದಂಪತಿ, ಮನೆಯ ಎದುರೇ ದೇವಸ್ಥಾನ ಕಟ್ಟಿಸಿದ್ದಾರೆ. ಸುಮಾರು 8 ತಿಂಗಳಿಂದ ಕಾಲಿಗೆ ಚಪ್ಪಲಿಯನ್ನೂ ಧರಿಸದೆ ವ್ರತಾಚರಣೆಯಲ್ಲಿದ್ದ ಪ್ರಕಾಶ್, ದೇವಸ್ಥಾನವನ್ನು ತಮ್ಮ ಸ್ವಂತ ಜಾಗದಲ್ಲಿ ಕಟ್ಟಿದ್ದಾರೆ. ಸುಮಾರು 10 ಲಕ್ಷದಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನವನ್ನು ಸ್ವತಃ ಅಶ್ವಿನಿ ಅವರೇ ಉದ್ಘಾಟನೆ ಮಾಡಿದ್ದಾರೆ. ಅಪ್ಪು ದೇವಸ್ಥಾನದ ಉದ್ಘಾಟನೆ ಜೊತೆಯಲ್ಲಿಯೇ ತಮ್ಮ ಮಗಳಿಗೆ ಅಶ್ವಿನಿ ಅವರಿಂದಲೇ ನಾಮಕರಣ ಮಾಡಿಸಿದ್ದಾರೆ.
ಗ್ರಾಮದ ಉಡಚ್ಚಮ್ಮ ದೇವಿಯ ದರ್ಶನ ಪಡೆದು ಅಪ್ಪು ಗುಡಿ ಬಳಿಗೆ ಆಗಮಿಸಿದ ಅಶ್ವಿನಿ ಅವರಿಗೆ ಗ್ರಾಮಸ್ಥರು ಹೃದಯಂಗಮ ಸ್ವಾಗತ ಕೋರಿದರು. ವಿವಿಧ ಕಲಾತಂಡಗಳು, ಕುಂಭಮೇಳದ ಮೂಲಕ ಅಶ್ವಿನಿ ಅವರನ್ನು ಊರಿಗೆ ಬರಮಾಡಿಕೊಳ್ಳಲಾಯಿತು. ಪುನೀತ್ ರಾಜ್‌ಕುಮಾರ್ ಗುಡಿಯನ್ನು ಲೋಕಾರ್ಪಣೆ ಮಾಡಿದ ಬಳಿಕ ಅಭಿಮಾನಿ ಪ್ರಕಾಶ್ ಪುತ್ರಿಗೆ ನಾಮಕರಣವನ್ನು ಇಟ್ಟುಕೊಂಡಿದ್ದರು. ದಂಪತಿಯ ಮಗಳಿಗೆ ಅಪೇಕ್ಷಾ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ನಾಮಕರಣ ಮಾಡಿದರು.
ನಂತರ ಮಾತನಾಡುವಾಗ ಅವರು ಭಾವುಕತೆಯಿಂದ ಮಾತನಾಡಿದ ಅಶ್ವಿನಿ ಪುನೀತ್, ಅಭಿಮಾನಿಯ 10 ಲಕ್ಷ ರೂಪಾಯಿ ಸ್ವಂತ ಹಣದಲ್ಲಿ ಈ ದೇವಸ್ಥಾನ ನಿರ್ಮಾಣ ಆಗಿದೆ. ಇದೇ ಕಾರಣಕ್ಕೆ ನಾವು ಅಭಿಮಾನಿಗಳನ್ನು ದೇವರು ಅಂತ ಹೇಳೋದು. ಇಂತಹ ಅಭಿಮಾನಿಗಳು ನಮಗೆ ಸಿಕ್ಕಿರುವುದೇ ಪುಣ್ಯ. ಸ್ವಂತ ಜಾಗದಲ್ಲಿ ಹೀಗೆ ದೇವಸ್ಥಾನವನ್ನು ಕಟ್ಟಿದ್ದು ನಮ್ಮ ಪುಣ್ಯ ಎಂದು ಹೇಳಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.
ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಾವೇರಿಯ ಸಾವಿರಾರು ಜನ ಆಗಮಿಸಿದ್ದರು. ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿಗಳು ಕೂಡಾ ಕಾರ್ಯಕ್ರಮದಲ್ಲಿ ಇದ್ದರು.
ಪುನೀತ್ ಅಭಿಮಾನಿ ಪ್ರಕಾಶ್ ಮೊರಬದ : ವೃತ್ತಿಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿರುವ ಪ್ರಕಾಶ್ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಪುನೀತ್ ದೇವಸ್ಥಾನ ಕಟ್ಟಿಸಲು ಆರಂಭಿಸಿದರು. ದೇವಸ್ಥಾನ ಪೂರ್ಣಗೊಳ್ಳುವ ವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ತಮ್ಮೊಳಗೇ ಪ್ರತಿಜ್ಞೆ ಮಾಡಿಕೊಂಡರು. ಅದರಂತೆ ಪ್ರಕಾಶ ಕಳೆದ 8 ತಿಂಗಳಿಂದ ಚಪ್ಪಲಿ ಧರಿಸಲಿಲ್ಲ. ಅಷ್ಟೇ ಅಲ್ಲ, ಪ್ರಕಾಶ್ ಅವರು ಅಕ್ಕಪಕ್ಕದ ಶಾಲೆಗಳಿಗೆ, ಬಸ್ ತಂಗುದಾಣಗಳನ್ನು ಸ್ವಂತ ಖರ್ಚಿನಲ್ಲಿ ಶುಚಿ ಮಾಡುತ್ತಾರೆ. ಇದು ಕರ್ನಾಟಕದಲ್ಲಿ ಮೊದಲ ಪುನೀತ್ ರಾಜಕುಮಾರ್ ಅವರ ದೇವಸ್ಥಾನ.



