ಮಹಾಕುಂಭಮೇಳದಲ್ಲಿ ಈಗ ನಾಗಸಾಧುಗಳು, ಸಾಧುಸಂತರು, ಋಷಿ ಮುನಿಗಳು.. ಎಲ್ಲರಿಗಿಂತ ಹೆಚ್ಚು ಫೇಮಸ್ ಆಗಿರುವುದು ಮೊನಾಲಿಸಾ ಭೋಂಸ್ಲೇ ಎಂಬ ಸುಂದರಿ. ಈಕೆಯ ಕಣ್ಣುಗಳು, ಚೂಪಾದ ಮೂಗು, ಉದ್ದನೆಯ ಕೂದಲು.. ಎಲ್ಲವೂ ಅಟ್ರಾಕ್ಟಿವ್ ಆಗಿದ್ದು, ಈಕೆ ಈಗ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಆದರೆ ಈಕೆಯ ಸಂಕಷ್ಟದಲ್ಲಿ ನೆರವಾಗಿರುವುದು ನಾಗಸಾಧಗಳೇ.
ಮಹಾಕುಂಭದಲ್ಲಿ ಮೊನಾಲಿಸಾ ಫೇಮಸ್ ಆದರೇನೋ ಹೌದು, ಅದರಿಂದ ಆಕೆಗೆ ಲಾಭವೇನೂ ಆಗಿರಲಿಲ್ಲ. ಇಂಧೋರಿನ ಈ ಸುಂದರಿಯ ಹೆಸರು, ವಿವರ ಕೇಳಿಕೊಂಡವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದರೇ ಹೊರತು, ಆಕೆಯ ಬಳಿ ರುದ್ರಾಕ್ಷಿ ಹಾರಗಳನ್ನು ಮಾತ್ರ ಖರೀದಿ ಮಾಡ್ತಾ ಇರಲಿಲ್ಲ. ಇದೆಲ್ಲದರ ಮಧ್ಯೆ ಆಕೆಗೆ ಪುಂಡರ ಕಾಟವೂ ಹೆಚ್ಚಿತ್ತು. ಸೆಲ್ಫಿ ಆಸೆಗೆ ಹೋಗುವ ಪುಂಡರು, ಆಕೆಯ ಮೈಕೈ ಮುಟ್ಟುವುದು, ಕೈ ಸವರುವುದು, ಮುಖವನ್ನು ಹತ್ತಿರಕ್ಕೆ ತೆಗೆದುಕೊಂಡು ಹೋಗಿ ಕಿರುಕುಳ ಕೊಡುವುದು ಮಾಡುತ್ತಿದ್ದರು. ಮಹಾಕುಂಭಮೇಳದ ಸುಂದರಿ ಎಂದೇ ಹೆಸರಾಗಿದ್ದೇ, ಜನಪ್ರಿಯತೆಯೇ ಮೊನಾಲಿಸಾ ಭೋಂಸ್ಲೆಗೆ ಶಾಪವಾಗಿ ಕಾಡೋಕೆ ಶುರುವಾಗಿತ್ತು.
ಒಂದು ಹಂತದಲ್ಲಂತೂ ಪುಂಡರ ಕಾಟ ಹೆಚ್ಚಾಗಿ ಈತ ತನ್ನ ತಂಗಿಯನ್ನ ಕರೆದುಕೊಂಡು ಹೋಗಿ ನಾಗಾಸಾಧುಗಳ ರಕ್ಷಣೆಗೆ ಬಿಟ್ಟಿದ್ದ ವಿಡಿಯೋ ಕೂಡಾ ವೈರಲ್ ಆಗಿದೆ. ಇನ್ನೊಂದು ಕಡೆ ವಿಡಿಯೋ ಕಾಟಕ್ಕೆ ಬೇಸತ್ತು ಹೋದ ಮೊನಾಲಿಸಾ.. ಕ್ಯಾಮೆರಾ ಹಿಡಿದಿದ್ದವನಿಗೆ ಹೊಡೆಯೋಕೆ ಹೋಗಿದ್ದಾರೆ. ಕೊನೆಗೆ ನಾಗಸಾಧುಗಳು ರಕ್ಷಣೆ ಕೊಟ್ಟಿದ್ಧಾರೆ. ಹೌದು, ಯಾರೇನೇ ಹೇಳಲಿ, ನಾಗಾಸಾಧುಗಳ ಬಗ್ಗೆ ಜನರಲ್ಲಿ ಒಂದು ಭಯವಿದೆ. ಯಾಕೆ ಬೇಕಪ್ಪಾ.. ಸಾವಾಸ ಎನ್ನುವ ಭಯದಲ್ಲಿಯೇ ಯಾರೂ ಅವರ ತಂಟೆಗೆ ಹೋಗುವುದಿಲ್ಲ. ಇನ್ನು ನಾಗಾಸಾಧುಗಳೂ ಅಷ್ಟೇ, ತಮ್ಮ ಪಾಡಿಗೆ ತಾವಿರುತ್ತಾರೆ. ಹೀಗಾಗಿಯೇ ಈಕೆಯ ಸಹೋದರ ಈಕೆಯನ್ನು ಕರೆದುಕೊಂಡು ಹೋಗಿ ನಾಗಾಸಾಧುಗಳಿದ್ದ ಟೆಂಟಿಗೆ ಬಿಟ್ಟಿದ್ದಾನೆ. ಅಲ್ಲಿಗೆ ಈಕೆ ಬಚಾವ್ ಆಗಿದ್ದಾಳೆ.
ಇನ್ನು ಇನ್ನೊಂದು ಕಡೆ ಈಕೆಯ ಅದೃಷ್ಟ ಖುಲಾಯಿಸಿದೆ. ಶಿಪ್ರಾ ಸಲೂನ್ ಅನ್ನೋವ್ರು ಈಕೆಯ ಹೇರ್ ಸ್ಟೈಲ್, ಮೇಕಪ್ ಮಾಡಿದ್ದಾರೆ. ಫೋಟೋ ಶೂಟ್ ಕೂಡಾ ಮಾಡಿಸಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಇನ್ನೊಂದು ಕಡೆ ಮೊನಾಲಿಸಾಗೆ ಬಾಲಿವುಡ್ ಆಫರ್ ಬಂದಿದ್ಯಂತೆ.
ನಿರ್ದೇಶಕ ಸನೋಜ್ ಮಿಶ್ರಾ ಮೊನಾಲೀಸಾಗೆ ಚಿತ್ರವೊಂದರಲ್ಲಿ ನಟಿಸುವಂತೆ ಆಫರ್ ಮಾಡಲಿದ್ದಾರಂತೆ. ಶೀಘ್ರದಲ್ಲೇ ಮೊನಾಲಿಸಾ ಅವರನ್ನು ಭೇಟಿಯಾಗಲಿದ್ದಾರಂತೆ. ಮಾಹಿತಿ ಪ್ರಕಾರ, ಈ ಯುವತಿ ವಿದ್ಯಾವಂತಳಲ್ಲ ಮಾತ್ರವಲ್ಲ ಶಾಲೆಗೂ ಹೋಗಿಲ್ಲ. ಬಾಲ್ಯದಿಂದಲೂ ಮಣಿ ಸರಗಳನ್ನು ಮಾರುತ್ತಾ ಪೋಷಕರಿಗೆ ಸಹಾಯ ಮಾಡುತ್ತಿದ್ದಳು. ಆದರೆ ಮೊನಾಲಿಸಾ ಅವರ ಅದೃಷ್ಟ ಶೀಘ್ರದಲ್ಲೇ ಬದಲಾಗಲಿದ್ದು, ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ. ಆಕಯೆನ್ನು ತಮ್ಮ ಬಹು ನಿರೀಕ್ಷಿತ ಚಿತ್ರವಾಗಿರುವ ‘ಡೈರಿ ಆಫ್ ಮಣಿಪುರ’ದಲ್ಲಿ ನಟಿಸಲು ಕೇಳುವುದಾಗಿ ಹೇಳಿದ್ದಾರೆ. ಅವರ ಈ ಡೈರಿ ಆಫ್ ಮಣಿಪುರ ಸಿನಿಮಾ ಮಣಿಪುರ ರಾಜ್ಯದ ಜ್ವಲಂತ ಸಮಸ್ಯೆಯನ್ನು ಆಧರಿಸಿದೆ. ಬಾಲಿವುಡ್ ಸ್ಟಾರ್ ರಾಜ್ ಕುಮಾರ್ ರಾವ್ ಅಣ್ಣ ಅಮಿತ್ ರಾವ್ ಈ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದೆಲ್ಲದರ ನಡುವೆ ಮೊನಾಲೀಸಾರನ್ನು ಅಪ್ಪ ಶಿವಂ ಕುಂಭಮೇಳದಿಂದ ಹೊರ ಕಳಿಸಿದ್ದಾರಂತೆ.



