ಸಚಿವ ಈಶ್ವರಪ್ಪ ಎಂದ ತಕ್ಷಣ ಕನ್ʻಫ್ಯೂಸ್ ಆಗಬೇಡಿ. ಆದರೆ ಈಗ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಕೋರ್ಟಿನ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದ್ದು ಮಾತ್ರ ಸಚಿವ ಈಶ್ವರಪ್ಪ ಅವರ ವಿರುದ್ಧದ ಪ್ರತಿಭಟನೆ ಕೇಸ್. ಈ ಘಟನೆ ನಡೆದಿರುವುದು 2020ರಲ್ಲಿ. ಆಗ ನಡೆದ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ಸಿನ 10 ಜನ ದಂಡ ಕಟ್ಟಬೇಕು ಎಂದು ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಪ್ರಕರಣದಲ್ಲಿ ಅಂದಿನ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೆ ಆಗ್ರಹಿಸಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಎಂಬಿ ಪಾಟೀಲ್, ರಾಮಲಿಂಗಾ ರೆಡ್ಡಿ ಸೇರಿದಂತೆ ಪ್ರಮುಖ ನಾಯಕರುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
2022ರ ಏಪ್ರಿಲ್ 14ರಂದು ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು . ಸಾರ್ವಜನಿಕ ಮುಕ್ತ ಸಂಚಾರಕ್ಕೆ ಅಡ್ಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿ, ರಸ್ತೆ ತಡೆ ಮಾಡಿ ಸಿಎಂ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ ಸೇರಿದಂತೆ ಪ್ರಮುಖರ ವಿರುದ್ಧ ಐಪಿಸಿ ಸೆಕ್ಷನ್ 143, 103 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕಾರ ಮಾಡಿದ ನ್ಯಾಯಾಲಯ
ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ
ಮಾರ್ಚ್ 7 ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಮಾರ್ಚ್ 11 ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆರ್ ಎಸ್ ಸುರ್ಜೇವಾಲಾ ಮತ್ತು ಮಾರ್ಚ್ 15 ರಂದು ಭಾರೀ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್
ಅವರಿಗೆ ಖುದ್ದಾಗಿ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಕೋರ್ಟ್ ಹೇಳಿದ್ದೇನು?
ಜನಪ್ರತಿನಿಧಿಗಳಾದವರು ಕಾನೂನು ಪಾಲಿಸಿದರೆ ಜನರು ಪಾಲಿಸುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರೆ ಜನರಿಗೆ ಕಷ್ಟವಾಗುತ್ತದೆ. ಸಿಟಿ ಲೈಫ್ ಈಸ್ ಟಾರ್ಚರ್, ಪ್ರತಿಭಟನೆಗಳಿಂದ ಜನರಿಗೆ ಮತ್ತಷ್ಟು ತ್ರಾಸ. ಜನಪ್ರತಿನಿಧಿಯಾದ ಕಾರಣಕ್ಕೆ ರಸ್ತೆ ಅಡ್ಡಗಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಟು ಮಾತುಗಳಲ್ಲಿ ಟೀಕಿಸಿರುವ ನ್ಯಾಯಾಲಯ ಜನಪ್ರತಿನಿಧಿಗಳಿಗೆ ಕಾನೂನಿನ ಪಾಠ ಮಾಡಿದೆ.
ಒಟ್ಟಿನಲ್ಲಿ 2020ರ ಪ್ರತಿಭಟನೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಕಟಕಟೆಗೆ ಬರುವಂತೆ ಮಾಡಿದೆ. ದಂಡವನ್ನೂ ಕಟ್ಟಬೇಕಿರುವ ನಾಯಕರು ಕೋರ್ಟ್ ಮುಂದೆ ಬಂದು ತಮ್ಮ ಅಹವಾಲು ಸಲ್ಲಿಸಲಿದ್ದಾರೆ. ಕೋರ್ಟ್ ಬಹುಶಃ ಕ್ಷಮೆ ಕೇಳುವಂತೆ ಸೂಚಿಸಬಹುದು ಎನ್ನುವುದು ಕಾನೂನು ತಜ್ಞರ ಅಭಿಮತ.



