ಇದೊಂದು ಕುತೂಹಲದ ಸುದ್ದಿ ಎಂದಷ್ಟೇ ಹೇಳಬಹುದು. ಯುವ ರಾಜ್ ಕುಮಾರ್ ಅವರ ಎಕ್ಕ ಚಿತ್ರ ಜುಲೈ 18ಕ್ಕೆ ರಿಲೀಸ್ ಆಗ್ತಾ ಇದೆ. ಯುವ ರಾಜ್ ಕುಮಾರ್ ಹೀರೋ ಆಗಿರುವ ಸಿನಿಮಾ. ಮೊದಲ ಸಿನಿಮಾ ʻಯುವʼ ಸಿನಿಮಾ ನಿರೀಕ್ಷೆಯಂತೆ ಗೆಲ್ಲಲಿಲ್ಲ. ಹಾಕಿದ್ದ ಬಂಡವಾಳ ವಾಪಸ್ ಬಂತು ಎನ್ನುವುದು ಬಿಟ್ಟರೆ ದೊಡ್ಡ ಸದ್ದನ್ನೇನೂ ಮಾಡಲಿಲ್ಲ.
ಎಕ್ಕ. ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡಾ ನಿರ್ಮಾಪಕಿ. ಜೊತೆಗೆ ಜಯಣ್ಣ-ಭೋಗೇಂದ್ರ ಮತ್ತು ಕಾರ್ತಿಕ್ ಗೌಡ, ಯೋಗಿ ಬಿ ರಾಜ್ ಇದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈಗಾಗಲೇ ʻಬ್ಯಾಂಗಲ್ ಬಂಗಾರಿʼ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಆದರೆ.. ಶಿವಣ್ಣ ಎಕ್ಕ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಎಕ್ಕ ಚಿತ್ರ ಗೆಲ್ಲಲಿ ಎಂದು ಹೇಳಿದ್ದಾರೆಯೇ ಹೊರತು, ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಳ್ತಿಲ್ಲ.
ಆದರೆ.. ಅದೇ ದಿನ ಕಿರೀಟಿ ಅಭಿನಯದ ಜೂನಿಯರ್ ಸಿನಿಮಾ ರಿಲೀಸ್ ಆಗ್ತಿದೆ. ಈ ಚಿತ್ರಕ್ಕೆ ಜನಾರ್ದನ ರೆಡ್ಡಿ ಮಗ ಕಿರೀಟಿ ಹೀರೋ. ಆ ಚಿತ್ರದ ಪ್ರಚಾರಕ್ಕೆ ಹೋಗಿದ್ದಾರೆ. ಯುವ ರಾಜ್ ಕುಮಾರ್ ಜೊತೆ ಶೃತಿ ತಾಯಿಯಾಗಿ, ಸಂಜನಾ ಆನಂದ್, ಸಂಪದಾ ಹುಲಿವಾನ ನಾಯಕಿಯರಾಗಿ ನಟಿಸಿದ್ದಾರೆ. ಅತುಲ್ ಕುಲಕರ್ಣಿಯಂತಹ ದಿಗ್ಗಜ ಕಲಾವಿದರು ಜೊತೆಗಿದ್ದರೆ, ಶಿವಣ್ಣ ಕೂಡ ಇಷ್ಟಪಟ್ಟಿದ್ದ ರೋಹಿತ್ ಪದಕಿ ಡೈರೆಕ್ಟರ್. ಇನ್ನು ಶಿವಣ್ಣ ಬಹಳ ಇಷ್ಟಪಡುವ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ನಿರ್ಮಾಣ ಇದೆ. ಜೊತೆಗೆ ಅಶ್ವಿನಿ ಪುನೀತ್ ನಿರ್ಮಾಣವಿದೆ. ಆದರೆ.. ಶಿವಣ್ಣ ʻಎಕ್ಕʼ ಚಿತ್ರದ ಬಗ್ಗೆ ಕಿರೀಟಿ ಪ್ರಚಾರದ ವೇಳೆಯಲ್ಲಿಯೇ ʻನನ್ನ ಮಗ ಯುವನ ಎಕ್ಕ ಚಿತ್ರ ಬರುತ್ತಿದೆ. ಆ ಚಿತ್ರ ಗೆಲ್ಲಲಿ. ಬ್ಯಾಂಗಲ್ ಬಂಗಾರಿ ಹಾಡು ಹಿಟ್ ಆಗಿದೆ. ಜೊತೆಗೆ ಅದೇ ದಿನ ಕಿರೀಟಿ ಕೂಡಾ ಬತ್ತಿದೆ. ಅದೂ ಗೆಲ್ಲಲಿʼ ಎಂದಿದ್ದಾರೆ.
ಕಿರೀಟಿ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲ, ತಾಯಿ-ತಂದೆಯ ಪಾತ್ರದಲ್ಲಿ ಸುಧಾರಾಣಿ, ರವಿಚಂದ್ರನ್ ಇದ್ದಾರೆ. ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ಡೈರೆಕ್ಟರ್. ಜೂನಿಯರ್ ಸಿನಿಮಾಗೆ ರಾಧಾ ಕೃಷ್ಣ ಎಂಬುವವರು ನಿರ್ದೇಶಕ. ಎಕ್ಕ ಚಿತ್ರಕ್ಕೆ ಇನ್ನೊಬ್ಬ ಪ್ರಚಾರ ರಾಯಭಾರಿಯಂತೆ ಕೆಲಸ ಮಾಡಿರುವುದು ಚರಣ್ ರಾಜ್, ಚರಣ್ ರಾಜ್ ಸಂಗೀತದಲ್ಲಿ ಬ್ಯಾಂಗಲ್ ಬಂಗಾರಿ.. ವರ್ಷದ ಟ್ರೆಂಡ್ ಹಾಡಾಗಿದ್ದರೆ, ಅಂತಹ ಲಕ್ ಜೂನಿಯರ್ ಚಿತ್ರಕ್ಕೆ ಇಲ್ಲ. ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷ ಎಂದರೆ.. ತಮ್ಮ ತಮ್ಮನ ಮಗನ ಚಿತ್ರಕ್ಕೆ ಪೈಪೋಟಿ ಕೊಡುತ್ತಿರುವ ಚಿತ್ರದ ಪ್ರಚಾರಕ್ಕೆ ಶಿವ ರಾಜ್ ಕುಮಾರ್ ಹೋಗಿರುವುದು. ಅಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಹೋಗಿದ್ದ ಶಿವರಾಜ್ ಕುಮಾರ್ ಕಿರೀಟಿ ಡ್ಯಾನ್ಸ್‌ನ್ನು ಅಪ್ಪು ಡ್ಯಾನ್ಸ್‌ಗೆ ಹೋಲಿಸಿದ್ದಾರೆ. ಇನ್ನು ಕಿರೀಟಿ ಕೂಡಾ ಅಪ್ಪು ಮತ್ತು ಶಿವಣ್ಣ ಅವರನ್ನು ನೆನಪಿಸಿಕೊಂಡಿದ್ದಾರೆ. ಕಿರೀಟಿ ಅವರು ಮೊದಲು ಡ್ಯಾನ್ಸ್ ಮಾಡಿದ್ದು ಜೋಗಿ ಚಿತ್ರದ ʻಹೊಡಿಮಗ ಹೊಡಿಮಗ.. ʼ ಹಾಡಿಗಾದರೆ, ಅಪ್ಪು ಅವರ ಜಾಕಿ ಚಿತ್ರ ನಟನಾಗಲು ಸ್ಫೂರ್ತಿ ನೀಡಿತಂತೆ.
ಇಷ್ಟೆಲ್ಲದರ ಮಧ್ಯೆ ಶಿವಣ್ಣ ʻಎಕ್ಕʼ ಚಿತ್ರಕ್ಕೆ ಅಷ್ಟಾದರೂ ಹೇಳಿದರಲ್ಲ.. ಅದೇ ದೊಡ್ಡದು ಎಂಬಂತೆ ಖುಷಿಯಾಗಿದ್ದಾರೆ ಫ್ಯಾನ್ಸ್.



