ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ ಎಂಬುದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢವಾಗಿದೆ. ಇದು ಬಿಜೆಪಿಯವರ ಪ್ರತಿಪಾದನೆ. ವರದಿಯೇ ಬಂದಿಲ್ಲ ಎನ್ನುವುದು ಗೃಹ ಸಚಿವರೂ ಆಗಿರುವ ಪರಮೇಶ್ವರ್ ವಾದ. ಆದರೆ, ಎಫ್‌ಎಸ್‌ಎಲ್ ವರದಿಯಲ್ಲಿ ವಾಯ್ಸ್ ಸ್ಯಾಂಪಲ್ ಕಲೆಕ್ಟ್ ಮಾಡ್ತಿದ್ದಾರಂತೆ. ಏಕೆ ಅನ್ನೋದು ಪ್ರಶ್ನೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರ ಪ್ರಕಾರ ಎಫ್‌ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಸಾಬೀತಾಗಿದೆ. ಎಫ್‌ಎಸ್ಎಲ್ ವರದಿ ಶುಕ್ರವಾರ ಬೆಳಗ್ಗೆ ಬಂದಿದೆ. ಅದನ್ನು ಮುಚ್ಚಿಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಎಫ್‌ಎಸ್‌ಎಲ್ ವರದಿ ತಿದ್ದುಪಡಿ ಮಾಡಿ ಮತ್ತೊಂದು ಬೋಗಸ್ ವರದಿ ಸಿದ್ಧಪಡಿಸಲಾಗುತ್ತಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ವರದಿಯನ್ನು ತಿರುಚದೆ ಯಥಾವತ್ತಾಗಿ ಜನರ ಮುಂದಿಡಬೇಕು. ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಪಾಕ್ ಪರ ಘೋಷಣೆ ಕೂಗಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಸ್ಪಷ್ಟವಾಗಿದೆ ಎಂಬ ಮಾಹಿತಿ ಇದೆ ಎನ್ನುವುದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ವಾದ. ಧಿವಿಜ್ಞಾನ ಪ್ರಯೋಗಾಲಯದ ವರದಿ ಸರ್ಕಾರದ ಕೈಸೇರಿದೆ. ಪಾಕ್ ಪರ ಘೋಷಣೆಯ ವಿಚಾರವೂ ದೃಢೀಕರಣಗೊಂಡಿದೆ ಎಂಬ ಮಾಹಿತಿ ಲಭಿಸಿದೆ ಎನ್ನುವುದು ವಿಧಾಪರಿಷತ್ ಬಿಜೆಪಿ ನಾಯಕ ಶ್ರೀನಿವಾಸ್ ಪೂಜಾರಿ ಆರೋಪ.
ಎಫ್ ಎಸ್ ಎಲ್ ವರದಿ ತಿರುಚುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೂರು. ಆರ್. ಅಶೋಕ್ ಪ್ರಕಾರ ತಪ್ಪಿತಸ್ಥರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ.
ಹೀಗಿರುವಾಗಲೇ..
ವರದಿ ಇನ್ನೂ ಬಂದಿಲ್ಲ ಅಂತಿದ್ದಾರೆ ಗೃಹ ಸಚಿವ ಪರಮೇಶ್ವರ್. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಆರೋಪದ ಬಗ್ಗೆ ಕ್ರಮ ಕೈಗೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಉದ್ದೇಶಿತ ವೀಡಿಯೊಗಳನ್ನು ಟಿವಿ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಎಲ್ಲಾ ಸುದ್ದಿವಾಹಿನಿಗಳ ವಿಡಿಯೊಗಳನ್ನು ಕಳುಹಿಸಲಾಗಿದ್ದು ಅವುಗಳನ್ನು ಪರೀಕ್ಷೆ ಮಾಡಿ ವರದಿ ಬರುವಾಗ ಸ್ವಲ್ಪ ತಡವಾಗಬಹುದು ಎಂದು ಹೇಳಿದ್ಧಾರೆ. ಅಲ್ಲದೆ ಎಲ್ಲ ವಾಯ್ಸ್ ಸ್ಯಾಂಪಲ್ ಪರೀಕ್ಷೆ ನಡೆಯುತ್ತಿದ್ದು, ಅದರ ವರದಿಯೂ ಬರಬೇಕಿದೆ ಎಂದಿದ್ದಾರೆ.
ಘೋಷಣೆಯೇ ಇಲ್ಲ ಎಂದಾದ ಮೇಲೆ ವಾಯ್ಸ್ ಸ್ಯಾಂಪಲ್ ಪರೀಕ್ಷೆ ಏಕೆ?
ಅನುಮಾನ ಇರುವುದೇ ಇಲ್ಲಿ. ಪಾಕ್ ಪರ ಘೋಷಣೆಯನ್ನೇ ಕೂಗಿಲ್ಲ ಎಂದು ಇದೇ ಪರಮೇಶ್ವರ್ ಘಟನೆ ನಡೆದ ದಿನ ವಾದಿಸಿದ್ದರು. ಈಗ ವಾಯ್ಸ್ ಸ್ಯಾಂಪಲ್ ಪಡೆದು ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ. ಘೋಷಣೆಯನ್ನೇ ಕೂಗಿಲ್ಲ ಎಂದರೆ ವಾಯ್ಸ್ ಸ್ಯಾಂಪಲ್ ಪಡೆಯುವ ಅಗತ್ಯವೇ ಬೀಳುತ್ತಿರಲಿಲ್ಲ ಎನ್ನುವುದು ಲಾಜಿಕ್ ಪ್ರಶ್ನೆ. ಆದರೆ, ಎಫ್.ಎಸ್.ಎಲ್. ವರದಿ ಬರುವವರೆಗೂ ಕಾಯಬೇಕು.



