ಕರ್ನಾಟಕದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಬೇಕೋ.. ಬೇಡವೋ.. ಡಿಕೆ ಶಿವಕುಮಾರ್ ಈ ಬಾರಿಯೇ ಸಿಎಂ ಆಗಬೇಕೋ.. ಅಥವಾ ಮುಂದಿನ ಬಾರಿಯೋ..ಎಂದು ನಿರ್ಧರಿಸುವ ಗುರುತರ ಜವಾಬ್ದಾರಿ ವಹಿಸಿಕೊಂಡಿರುವುದು ರಾಹುಲ್ ಗಾಂಧಿ. ಆದರೆ, ಈ ನಡುವೆ ಅವರ ಪಕ್ಷ ಹಾಗೂ ಕುಟುಂಬದಲ್ಲೇ ಭಿನ್ನಮತ ಭುಗಿಲೆದ್ದಿದೆ. ಅದಕ್ಕೆ ಕಾರಣವಾಗಿರುವುದು ರಾಬರ್ಟ್ ವಾದ್ರಾ. ರಾಹುಲ್ ಗಾಂಧಿ ಅವರ ತಂಗಿ, ಪ್ರಿಯಾಂಕಾ ಗಾಂಧಿ ಅವರ ಪತಿದೇವ. ರಾಹುಲ್ ಮತ್ತು ಪ್ರಿಯಾಂಕಾ ಅವರ ನಡುವೆ ಅತ್ಯುತ್ತಮ ಬಾಂಧವ್ಯ ಇದೆ. ಅಣ್ಣ-ತಂಗಿ ಎಂದರೆ ಹೀಗೆ ಇರಬೇಕು ಎಂದು ಆಸೆ ಪಡುವಂತಿದೆ. ಆ ಬಾಂಧವ್ಯಕ್ಕೆ ಇತಿಶ್ರೀ ಹಾಡುವ ಕಾಲ ಬಂತಾ..?
ಪ್ರಿಯಾಂಕಾ ಗಾಂದಿ ಪ್ರಧಾನಮಂತ್ರಿ ಆಗ್ತಾರಾ.. ಆಗಬಹುದೇನೋ.. ಸದ್ಯಕ್ಕೆ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಆಗಬಹುದು. ಆದರೆ, ಅಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲವಾ.. ಎನ್ನಬಹುದೇನೋ.. ಆದರೆ, ಚರ್ಚೆಯಂತೂ ಶುರುವಾಗಿದೆ. ಅಲ್ಲಿಗೆ ರಾಹುಲ್ ಗಾಂಧಿ ವಿಫಲ ನಾಯಕ ಎಂದು ಒಪ್ಪಿಕೊಂಡಂತಾಗುತ್ತದಲ್ಲವೇ.. ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಈ ಮಾತನ್ನು ಬಹಿರಂಗವಾಗಿ ಹೇಳಿರುವುದು ರಾಹುಲ್ ಗಾಂಧಿ ಅವರ ಬಾವ, ಪ್ರಿಯಾಂಕಾ ಗಾಂಧಿಯ ಪತಿ ರಾಬರ್ಟ್ ವಾದ್ರಾ. ಅಷ್ಟೇ ಅಲ್ಲ, ತಾವೂ ಕೂಡಾ ಸಂಸದನಾಗುವ ಆಸೆ ಹೊರಹಾಕಿದ್ದಾರೆ. ಹಾಗಾದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿರುವ, ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಗೆ ಯಾವ ಪಾತ್ರ.. ಕುತೂಹಲವಂತೂ ಇದೆ.
ಒಂದೆಡೆ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಪಟ್ಟ ಕಟ್ಟಬೇಕು ಎಂಬ ಕೂಗು ಕಾಂಗ್ರೆಸ್ಸಲ್ಲಿದೆ. ಈಗ ಪ್ರಿಯಾಂಕಾ ಪರ ಕೂಗು ಕೇಳಿಬಂದಿದೆ. ಇದು ಸೋದರ-ಸೋದರಿ ನಡುವೆ ಒಡಕಿಗೆ ಕಾರಣವಾಗುತ್ತಾ ಎಂಬ ವಿಶ್ಲೇಷಣೆ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ಇತ್ತೀಚೆಗೆ ಸಂಸತ್‌ನಲ್ಲಿ ಮತಚೋರಿ ಕುರಿತ ಚರ್ಚೆ ವೇಳೆ ರಾಹುಲ್ ಮತ್ತು ಪ್ರಿಯಾಂಕಾ ಮಾಡಿದ ಭಾಷಣವನ್ನು ಪಕ್ಷದ ನಾಯಕರು ತುಲನೆ ಮಾಡಿದ್ದಾರೆ. ಈ ವೇಳೆ ಎಲ್ಲರೂ ಪ್ರಿಯಾಂಕಾ ಪರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿಯವರಿಗೆ ಉನ್ನತ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಪಕ್ಷದಿಂದ ವಜಾಗೊಂಡ ಬೆನ್ನಲ್ಲೇ, ಇದೀಗ ಸ್ವತಃ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರೇ ತಮ್ಮ ಪತ್ನಿಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೀಗ ಪ್ರಿಯಾಂಕಾ ಪರ ಕೇಳಿಬಂದ ಘೋಷಣೆಗಳು, ಕಾಂಗ್ರೆಸ್‌ನಲ್ಲಿ ನಾಯಕತ್ವದ ಕುರಿತಾಗಿ ಆಂತರಿಕ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.
ಪ್ರಿಯಾಂಕಾ ಮುಂದೆ ಬರಬೇಕು ಎಂಬ ಬೇಡಿಕೆ ಎಲ್ಲೆಡೆಯಿಂದ ಬರುತ್ತಿದೆ. ನಾನು ರಾಜಕೀಯ ಪ್ರವೇಶಿಸಬೇಕು ಎಂಬ ಬೇಡಿಕೆಯೂ ಇದೆ. ಆದರೆ ಇದೀಗ, ಜನರಿಗೆ ಸಂಬಂಧಿಸಿದ ನೈಜ ಸಮಸ್ಯೆಗಳತ್ತ ನಾವು ಗಮನ ಹರಿಸಬೇಕು’ ಎಂದಿದ್ದಾರೆ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾ.
ಗಾಂಧಿ ಕುಟುಂಬದಲ್ಲಿ ರಾಬರ್ಟ್ ವಾದ್ರಾ ಅವರ ಬಗ್ಗೆ ಉತ್ತಮ ಅಭಿಪ್ರಾಯ ಇಲ್ಲ ಎಂಬ ಮಾತುಗಳಿವೆ. ಪ್ರಿಯಾಂಕಾ ಅವರ ಪತಿ ಎಂಬ ಕಾರಣಕ್ಕೆ ಸೋನಿಯಾ, ರಾಹುಲ್ ತಾಳ್ಮೆಯಿಂದ ಇದ್ದಾರೆಯೇ ಹೊರತು, ಅವರ ಬಗ್ಗೆ ಉತ್ತಮ ಅಭಿಪ್ರಾಯ ಇಲ್ಲವಂತೆ. ರಾಬರ್ಟ್ ವಾದ್ರಾ ಅವರು ಹಲವು ಬಾರಿ ರಾಜಕೀಯ ಪ್ರವೇಶದ ಇಂಗಿತ ತೋರಿಸಿದ್ದರೂ, ಅದಕ್ಕೆ ಸೋನಿಯಾ, ರಾಹುಲ್ ಇಬ್ಬರೂ ಸೊಪ್ಪು ಹಾಕಿಲ್ಲ. ಆದರೆ, ರಾಬರ್ಟ್ ವಾದ್ರಾ ಆಸೆ ಬಿಟ್ಟಿಲ್ಲ. ಈಗ ತಮ್ಮ ಪತ್ನಿಗೆ ಉನ್ನತ ಹುದ್ದೆ ಬೇಕೆಂದು ಹೇಳುತ್ತಿದ್ದಾರೆ. ಗಾಂಧಿ ಕುಟುಂಬದವರೇ ಹೀಗೆ ಮಾತನಾಡಿದಾಗ ಏನು ಮಾಡೋದು ಎಂಬುದು ಕಾಂಗ್ರೆಸ್ಸಿಗರ ಸಂಕಟ.



