ಪ್ರಿಯಾಂಕಾ ಗಾಂಧಿ ಅಥವಾ ಪ್ರಿಯಾಂಕಾ ವಾದ್ರಾ. ಪ್ರತಿ ಚುನಾವಣೆಯಲ್ಲೂ ಲೋಕಸಭೆಗೆ ಸ್ಪರ್ಧೆ ಮಾಡುವ ಬಗ್ಗೆ ಸುದ್ದಿ ಬರುತ್ತದೆ. ಇದು ಇವತ್ತಿನ ಕಥೆ ಅಲ್ಲ.ಕಳೆದ ಎರಡು ಮೂರು ಚುನಾವಣೆಯಲ್ಲಿ ಈ ಬಗ್ಗೆ ಸುದ್ದಿಯಾಗುವುದು ಆಮೇಲೆ ಸೈಲೆಂಟ್ ಆಗುವುದು ನಡೆದೇ ಇದೆ. ಇಷ್ಟಕ್ಕೂ ಪ್ರಿಯಾಂಕಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ.. ಏಕೆ..? ಈ ಪ್ರಶ್ನೆಗೆ ಸ್ವತಃ ಪ್ರಿಯಾಂಕಾ ಉತ್ತರ ಕೊಟ್ಟಿದ್ದಾರೆ.
ನಾನು ಎಂದಿಗೂ ಸಂಸದೆಯಾಗುವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಮಾಡಿಲ್ಲ. ಅವರು ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡು ನಾನು ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ. ನಾನು ಚುನಾವಣೆಯಲ್ಲಿ ಹೋರಾಡಬೇಕು ಎಂದು ಜನರು ಭಾವಿಸಿದರೆ, ನಾನು ಸ್ಪರ್ಧಿಸುತ್ತೇನೆ ಎಂದಿರುವ ಪ್ರಿಯಾಂಕಾ.. ನಾವಿಬ್ಬರೂ ಸ್ಪರ್ಧಿಸಿದರೆ ಅದು ಬಿಜೆಪಿಗೆ ಲಾಭದಾಯಕವಾಗಿರುತ್ತದೆ ಮತ್ತು ಪ್ರಚಾರ ಮಾಡಲು ನಾವಿಬ್ಬರೂ ಲಭ್ಯವಿರುವುದಿಲ್ಲ ಎಂಬ ಕಾರಣಕ್ಕೆ ನಾನು ಹಿಂದೆ ಸರಿದಿದ್ದೇನೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಕೂಡ ರಾಹುಲ್ ಗಾಂಧಿ ಅವರ ಹಿಂದಿನ ಕ್ಷೇತ್ರವಾದ ಅಮೇಥಿಯಿಂದ ಓಡಿಹೋಗಿದ್ದಾರೆ ಎಂಬ ಟೀಕೆಗಳಿಗೆ ಉತ್ತರ ಕೊಟ್ಟ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್ ಪಕ್ಷವು ಅಮೇಥಿ ಮತ್ತು ರಾಯ್ಬರೇಲಿಯನ್ನು ಎಂದಿಗೂ ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ. ಮೋದಿಗೆ ತಿರುಗೇಟು ನೀಡಿರುವ ಪ್ರಿಯಾಂಕಾ ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ಮೋದಿ ಏಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ? ಪ್ರಧಾನಿ ಮೋದಿಗೆ ಭಯವಾಗಿದೆಯೇ? ಅವರು 2014ರ ನಂತರ ವಡೋದರಾದಲ್ಲಿ ಏಕೆ ಚುನಾವಣೆಗೆ ಸ್ಪರ್ಧಿಸಲಿಲ್ಲ? ಅವರು ಗುಜರಾತ್‌ನಿಂದ ಓಡಿಹೋಗಿದ್ದಾರೆಯೇ? ಎಂದು ಮರು ಪ್ರಶ್ನೆ ಹಾಕಿದ್ಧಾರೆ.
ನಾನು ಕಳೆದ 15 ದಿನಗಳಿಂದ ರಾಯ್ಬರೇಲಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಗಾಂಧಿ ಕುಟುಂಬಕ್ಕೂ ರಾಯ್‌ಬರೇಲಿಗೂ ಹಳೆಯ ಸಂಬಂಧವಿದೆ. ಹಾಗಾಗಿ, ನಾವು ಇಲ್ಲಿಗೆ ಬಂದು ಇಲ್ಲಿನ ಜನರನ್ನು ಭೇಟಿ ಮಾಡಿ ಅವರೊಂದಿಗೆ ಸಂವಹನ ನಡೆಸುತ್ತೇವೆ ಎಂದು ಜನರು ನಿರೀಕ್ಷಿಸುತ್ತಾರೆ. ನಾವು ದೆಹಲಿಯಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ಮೂಲಕ ಇಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
1999ರಲ್ಲಿ ಸೋನಿಯಾ ಗಾಂಧಿ, ಅಮೇಥಿಯಲ್ಲಿ ಸ್ಪರ್ಧಿಸಿ ಗೆದ್ದರು. 2004ರಲ್ಲಿ ರಾಹುಲ್‌ಗೆ ಅಮೇಥಿ ಕ್ಷೇತ್ರವನ್ನು ಹಸ್ತಾಂತರಿಸಿದರು. ಸೋನಿಯಾ ಗಾಂಧಿಗಿಂತ ಮೊದಲು ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಯ್ಬರೇಲಿಯಲ್ಲಿ 3 ಬಾರಿ ಗೆದ್ದಿದ್ದರು. ಈ ಕ್ಷೇತ್ರದಿಂದ ಇಂದಿರಾ ಗಾಂಧಿ ಅವರ ಪತಿ ಮತ್ತು ಕಾಂಗ್ರೆಸ್ ನಾಯಕ ಫಿರೋಜ್ ಗಾಂಧಿ ಅವರನ್ನು 1952 ಮತ್ತು 1957ರಲ್ಲಿ 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಈ ಬಾರಿ ಅಣ್ಣನ ಗೆಲುವಿಗೆ ಪಣ ತೊಟ್ಟಿರುವ ಪ್ರಿಯಾಂಕಾ ನಾಮಪತ್ರ ಸಲ್ಲಿಸಿದ ದಿನದಿಂದ ರಾಯ್ʻಬರೇಲಿಯಲ್ಲೇ ಬೀಡು ಬಿಟ್ಟಿದ್ಧಾರೆ. ರಾಹುಲ್ ಗಾಂಧಿ ಕೂಡಾ ಭಾವನಾತ್ಮಕವಾಗಿ ಮಾತನಾಡುತ್ತಿದ್ದು ಭಾಷಣವೊಂದರಲ್ಲಿ ನಮ್ಮದು ರಾಯ್ ಬರೇಲಿಯೊಂದಿಗೆ 100 ವರ್ಷಗಳ ಹಳೆಯ ಸಂಬಂಧ. ಕೆಲವು ದಿನಗಳ ಹಿಂದೆ ನಾನು ನನ್ನ ತಾಯಿಯೊಂದಿಗೆ ಕುಳಿತಿದ್ದಾಗ, ನನಗೆ ಇಬ್ಬರು ತಾಯಂದಿರು. ಒಬ್ಬರು ಸೋನಿಯಾ ಗಾಂಧಿ ಮತ್ತು ಇಂದಿರಾ ಗಾಂಧಿ ಎಂದು ನಾನು ವೀಡಿಯೊದಲ್ಲಿ ಹೇಳಿದ್ದೆ. ಇದು ನನ್ನ ತಾಯಿಗೆ ಇಷ್ಟವಾಗಲಿಲ್ಲ. ಮಗುವಿಗೆ ದಾರಿ ತೋರಿಸುವವಳು ಮತ್ತು ರಕ್ಷಿಸುವವಳು ತಾಯಿ ಎಂದು ನಾನು ಅವರಿಗೆ ವಿವರಿಸಿದೆ. ನನ್ನ ತಾಯಿ ಮತ್ತು ಇಂದಿರಾ ಗಾಂಧಿ ಇಬ್ಬರೂ ನನಗಾಗಿ ಇದನ್ನು ಮಾಡಿದ್ದಾರೆ. ಇದು ನನ್ನ ತಾಯಿಯರಿಬ್ಬರ ‘ಕರ್ಮಭೂಮಿ’. ಇದೇ ಕಾರಣಕ್ಕೆ ನಾನು ರಾಯ್ ಬರೇಲಿಯಿಂದ ಸ್ಪರ್ಧಿಸಲು ಬಂದಿದ್ದೇನೆ ಎಂದು ಹೇಳಿದ್ದಾರೆ.



