77ನೇ ಸ್ವಾತಂತ್ರ್ಯೋತ್ಸವ. ಭಾರತೀಯರು ಸ್ವಾತಂತ್ರ್ಯ ಪಡೆದ ದಿನ. ಈ ಸವಿ ದಿನದ ನೆನಪಿಗಾಗಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ (Independence Day) ಇಡೀ ದೇಶವೇ ಹೆಮ್ಮೆಯಿಂದ ಭಾಗವಹಿಸುತ್ತದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಧ್ವಜಾರೋಹಣ ಮಾಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಸತತ 10ನೇ ಧ್ವಜಾರೋಹಣ (Independence Day Flag hoisting ). ಸದ್ಯದ ಮಟ್ಟಿಗೆ ಇದು ಕೊನೆಯ ಧ್ವಜಾರೋಹಣ (Flag hoisting). 2024ರಲ್ಲಿ ಚುನಾವಣೆ ನಡೆಯಬೇಕಿದ್ದು, ಮತ್ತೊಮ್ಮೆ ಎನ್.ಡಿ.ಎ. ಗೆದ್ದರೆ ಮತ್ತೊಮ್ಮೆ ಮೋದಿಯೇ ಪ್ರಧಾನಿ ಆಗಲಿದ್ದಾರೆ. ಆಗ 2024ರಲ್ಲಿ 11ನೇ ಬಾರಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟವೆನಿಸಿರುವ ಭಾರತ ಈಗ ಜನಸಂಖ್ಯೆಯ ದೃಷ್ಟಿಯಿಂದ ಮುಂದಿದೆ. ಇಷ್ಟು ದೊಡ್ಡ ದೇಶ, ನನ್ನ ಕುಟುಂಬದ 140 ಕೋಟಿ ಸದಸ್ಯರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿದ ಎಲ್ಲಾ ಕೆಚ್ಚೆದೆಯ ಹೃದಯಗಳಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಇಡೀ ಜಗತ್ತು ಇಂದು ಭಾರತದ ಮೇಲೆ ವಿಶ್ವಾಸವಿಟ್ಟಿದೆ. ಜಗತ್ತನೇ ಸೆಳೆಯುವಂತೆ ಭಾರತ ಬೆಳೆಯುತ್ತಿದೆ. ಜಗತ್ತಿನ ಯಾವುದೇ ರೇಟಿಂಗ್ ಏಜೆನ್ಸಿಗೂ ಭಾರತದ ಬೆಳವಣಿಗೆ ತಡೆಯುವ ಶಕ್ತಿ ಇಲ್ಲ, ಇಂಥ ಅಮೃತ ಕಾಲದಲ್ಲಿ ನಾವಿರುವುದು ನಮ್ಮೆಲ್ಲರ ಅದೃಷ್ಟ, ದೇಶದ ಯುವಕರಿಗೆ ಅವಕಾಶದ ಕೊರತೆ ಇಲ್ಲ, ಅವಕಾಶ ಆಕಾಶದಷ್ಟಿದೆ. ಚೆನ್ನಾಗಿ ಬಳಸಿಕೊಳ್ಳಿ . ದೆಹಲಿ ಮಾತ್ರ ಭಾರತದ ಕೇಂದ್ರವಾಗಿಲ್ಲ, ಭಾರತದ ಸಣ್ಣ ಸಣ್ಣ ಪಟ್ಟಣಗಳು ತಂತ್ರಜ್ಞಾನದಲ್ಲಿ ಮುಂದಿದೆ ಎಂದು ಸಂದೇಶ ಕೊಟ್ಟರು ಮೋದಿ.
ಪ್ರಧಾನಿ ಮೋದಿಯವರು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುತ್ತಿದ್ದಂತೆ ಭಾರತದ ವಾಯುಪಡೆಯ ಎರಡು ಸುಧಾರಿತ ಲಘು ಹೆಲಿಕಾಪ್ಟರ್ಗಳಾದ ಮಾರ್ಕ್ -3 ಧ್ರುವ್ ಮೇಲಿನಿಂದ ಧ್ವಜರೋಹಣದ ಮೇಲೆ ಪುಷ್ಪಮಳೆ ಸುರಿಸಿದವು. ಪುಷ್ಪವೃಷ್ಟಿಯ ಜೊತೆ ಜೊತೆಯಲ್ಲೇ.. ಜನಗಣಮನ.. ಮೊಳಗಿತು.
ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದ್ದು, ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1800 ಮಂದಿಯನ್ನು ತಮ್ಮ ಸಂಗಾತಿಯ ಜೊತೆಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ.



