ಅಭಿಮಾನ, ಹುಚ್ಚುತನ, ಹುಚ್ಚಾಟಗಳು ಒಮ್ಮೊಮ್ಮೆ ಮೇರೆ ಮೀರುತ್ತವೆ. ದರ್ಶನ್ ಫ್ಯಾನ್ಸ್ ಹುಚ್ಚು ಅಭಿಮಾನದಲ್ಲಿ ಯಾವತ್ತಿಗೂ ಒಂದು ಹೆಜ್ಜೆ ಮುಂದೇ ಇರ್ತಾರೆ. ಅದು ಸಿನಿಮಾ ಜೋಷ್ ಇರಬಹುದು, ದರ್ಶನ್ ಅವರನ್ನು ಸಮರ್ಥನೆ ಮಾಡಿಕೊಳ್ಳೊದಿರಬಹುದು.. ಯಾವುದಾದ್ರೂ ಅಷ್ಟೆ. ಈಗಲೂ ನೋಡಿ.. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ಚಾಲೆಂಜಂಗ್ ಸ್ಟಾರ್ ದರ್ಶನ್ ಜೈಲು ಸೇರಿದ್ದಾರೆ. ಮತ್ತೊಂದೆಡೆ ದರ್ಶನ್ ಬಿಡುಗಡೆಗಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ದರ್ಶನ್ ಬಿಡುಗಡೆಗಾಗಿ ಪ್ರಾರ್ಥಿಸಿ ಪತ್ನಿ ವಿಜಯಲಕ್ಷ್ಮಿ ದರ್ಶನ್, ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ಯಾಗವನ್ನೂ ಮಾಡಿಸಿದ್ದಾರೆ. ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳೂ ಕೂಡಾ ರಾಜ್ಯದ ಹಲವು ದೇಗುಲಗಳಲ್ಲಿ ಪೂಜೆ ಪ್ರಾರ್ಥನೆ ಮಾಡುತ್ತಿದ್ದಾರೆ. ಅರ್ಚಕರೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದಲ್ಲೇ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿ ಕೆಲಸ ಕಳೆದುಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆ ಕುರುಗೋಡಿನ ಬಸವೇಶ್ವರ ದೇಗುಲದಲ್ಲಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಕ್ಕೆ ಅರ್ಚಕ ಮಲ್ಲಿ ಎನ್ನುವರನ್ನು ಧಾರ್ಮಿಕ ದತ್ತಿ ಇಲಾಖೆ ಅಮಾನತು ಮಾಡಿದೆ. ದೊಡ್ಡಬಸವೇಶ್ವರ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನ. ಅಲ್ಲದೆ ಅದು ಉದ್ಭವ ಮೂರ್ತಿ ಎಂಬುದು ಪ್ರತೀತಿ. ಈ ದೇವಸ್ಥಾನದಲ್ಲಿ ಮಲ್ಲಿ ಎಂಬ ಅರ್ಚಕ ನಟ ದರ್ಶನ್ ಪೋಟೊ ಇಟ್ಟು ಪೂಜೆ ಮಾಡಿದ್ದಾರೆ. ಪೂಜೆ ಮಾಡಿ ಮಂಗಳಾರತಿ ಎತ್ತಿದ್ದಾರೆ. ಇದು ಅಧಿಕ ಪ್ರಸಂಗವಲ್ಲೇ ಏನು..? ಹೀಗಾಗಿಯೇ ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಧಾರ್ಮಿಕ ದತ್ತಿ ಇಲಾಖೆಯು, ಅರ್ಚಕನನ್ನು ಅಮಾನತುಗೊಳಿಸಿದೆ.


ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಇನ್ನು ಆರೋಪಿಗಳಿಗೆ ಆಗಸ್ಟ್ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಭಿಮಾನವೇನೋ ಓಕೆ.. ಆದರೆ ಈ ರೀತಿಯ ಅಧಿಕ ಪ್ರಸಂಗವನ್ನು ದರ್ಶನ್ ಅಭಿಮಾನಿಗಳು ತೋರಿಸಿರುವುದು ಇದೇ ಮೊದಲಲ್ಲ. ಇದೇ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸರಿಂದ ಒದೆ ತಿಂದಿದ್ದಾರೆ. ತನಿಖೆ ಮಾಡುತ್ತಿರುವ ಪೊಲೀಸ್ ಅಧಿಕಾರಿಯನ್ನೇ ಹಳೆಯ ವಿಡಿಯೋ ಇಟ್ಟುಕೊಂಡು ಜನ್ಮ ಜಾಲಾಡುತ್ತಿದ್ದಾರೆ. ಯಾವುದೋ ಕಾಲದ ಹಳೆ ವಿಡಿಯೋಗಳನ್ನಿಟ್ಟುಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಹುಚ್ಚಾಟ ಯಾವ ರೀತಿ ಇದೆ ಅಂದ್ರೆ ಅವರ ಪ್ರಕಾರ ಇಡೀ ಚಿತ್ರರಂಗ ಮತ್ತು ಅಭಿಮಾನಿಗಳು ದರ್ಶನ್ ಒಬ್ಬರೇ ಆರ್ಟಿಸ್ಟ್ ಎಂಬಂತೆ ಇರಬೇಕು. ದರ್ಶನ್ ಜೊತೆ ಚೆನ್ನಾಗಿರುವವರಷ್ಟೇ ನಟ ಎಂದು ಪರಿಗಣಿಸಬೇಕು. ದರ್ಶನ್ ಜೊತೆ ಸ್ನೇಹ ಇಲ್ಲದೇ ಇರುವವರು ನಟರೂ ಅಲ್ಲ, ಮನುಷ್ಯರೂ ಅಲ್ಲ. ಈ ರೀತಿಯಾಗಿ ವರ್ತಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ದರ್ಶನ್ ಎಂಬ ಭಾವನೆ ಹೋಗಿ, ದರ್ಶನ್ ಅವರಿಂದಲೇ ಕನ್ನಡ ಚಿತ್ರರಂಗ ಎಂಬ ಅತಿರೇಕದಿಂದ ವರ್ತಿಸುತ್ತಿದ್ದಾರೆ. ಇಂತಹ ದುರಭಿಮಾನಗಳು ಒಳ್ಳೆಯದಲ್ಲ ಎಂದು ಯಾರಾದರೂ ಹೇಳಿದರೆ.. ʻ..ನ್..ʼ ʻ..ಕ್ಕ..ʼ ʻ..ಮ್ಮ..ʼ ಬೈಗುಳಗಳು ಫಿಕ್ಸ್.



